ಉಜ್ವಲ್ ಪ್ರಭು ಅವರ ಲೇಔಟ್ ಅನಧಿಕೃತ ಅಲ್ಲ-ನ್ಯಾಯಾಂಗ ನಿಂದನೆ ವಿರುದ್ಧ ದೂರು ನೀಡಲಾಗುವುದು: ವಕೀಲರ ಹೇಳಿಕೆ

0

ಪುತ್ತೂರು: ಹೈಕೋರ್ಟಿನಲ್ಲಿ ಪಿಐಎಲ್ ಹಾಕಿದ್ದಕ್ಕಾಗಿ ನನ್ನ ವಿರುದ್ಧ ಉದ್ಯಮಿ ಉಜ್ವಲ್ ಪ್ರಭು ದೂರು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಆಲಿ ಅವರು ಮಾ.19ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ನೀಡಿರುವ ಹೇಳಿಕೆಗೆ ಉಜ್ವಲ್ ಪ್ರಭು ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ.


ಉಜ್ವಲ್ ಪ್ರಭು ಅವರು ನಿರ್ಮಾಣ ಮಾಡಿರುವ ಲೇಔಟ್ ಇಲ್ಲೀಗಲ್ ಅಲ್ಲ. ಲೇಔಟ್ ಇಲ್ಲೀಗಲ್ ಆಗಿದ್ದಲ್ಲಿ ನ್ಯಾಯಾಲಯದಲ್ಲಿ ಮಹಮ್ಮದ್ ಆಲಿ ಅವರು ಸಾಬೀತು ಪಡಿಸಲಿ. ನ್ಯಾಯಾಲಯ ಅಥವಾ ಪ್ರಾಧಿಕಾರ ಈ ಬಗ್ಗೆ ತೀರ್ಮಾನ ನೀಡಿಲ್ಲ. ಲೇಔಟ್ ನಿರ್ಮಾಣದ ವಿಚಾರದಲ್ಲಿ ಕಾನೂನು ಅಥವಾ ಬೈಲಾ ಉಲ್ಲಂಘನೆ ಆಗಿಲ್ಲ. ನಗರ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆದೇ ಲೇಔಟ್ ನಿರ್ಮಿಸಲಾಗಿದೆ. ಲೇಔಟ್ ನಿರ್ಮಾಣಕ್ಕೆ ಸರಕಾರದ ಜಾಗ ಅತಿಕ್ರಮಣ ಆಗಿಲ್ಲ. ಯಾವುದೇ ರಸ್ತೆ ಮುಚ್ಚಿರುವುದಿಲ್ಲ. ಎಚ್. ಮಹಮ್ಮದ್ ಆಲಿಯವರು ನಿರಾಧಾರ ಮತ್ತು ಮಾನಹಾನಿಕರ ಸುಳ್ಳು ಆರೋಪ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೂ ಅವರು ಸುಳ್ಳು ಆರೋಪ ಮಾಡುವ ಮೂಲಕ ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾಡಿದ್ದಾರೆ. ಇದು ನ್ಯಾಯಾಂಗದ ನಿಂದನೆ ಆಗಿರುತ್ತದೆ. ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here