ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯ

0

ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಳಿಕ ಬ್ರಹ್ಮಕಲಶೋತ್ಸವ: ರಾಧಾಕೃಷ್ಣ ನಾೖಕ್ 

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ 2027ರಲ್ಲಿ ನಡೆಯಬೇಕಾಗಿರುವ ಬ್ರಹ್ಮಕಲಶೋತ್ಸವವನ್ನು ಶಾಸಕರ ಪ್ರಯತ್ನದ ಫಲವಾಗಿ ದೊರಕಲಿರುವ 352 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಳಿಕವೇ ನಡೆಸಲು ಸಂಕಲ್ಪಿಸಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್  ತಿಳಿಸಿದರು.


ದೇವಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವಾಲಯದಲ್ಲಿನ ನೇತ್ರಾವತಿ ಸಮುದಾಯ ಭವನದ ಮೇಲಿನ ಮಹಡಿಯಲ್ಲಿ ಸಭಾಭವನವನ್ನು ನಿರ್ಮಿಸುವರೇ 1.99 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನುಳಿದಂತೆ ಹಳೇ ಕಟ್ಟಡಗಳನ್ನು ದುರಸ್ತಿ ಕಾಮಗಾರಿ , ಮೂಲಭೂತ ಅವಶ್ಯಕತೆಗಳ ನಿರ್ಮಾಣ , ಕಡೆಗಣಿಸಲ್ಪಟ್ಟಂತೆ ಇದ್ದ ದೈವಗಳ ಗುಡಿ ಪುನರ್ ನಿರ್ಮಾಣ , ದೇವಳದ ಮುಂಭಾಗದಲ್ಲಿನ 32 ಸೆಂಟ್ಸ್ ಭೂಮಿಯನ್ನು 1.51 ಕೋಟಿ ರೂಪಾಯಿಗೆ ಖರೀದಿಸಿರುವುದು, ದೇವಾಲಯದ ಹಕ್ಕಿನ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರರು ಸ್ವಯಂ ಪ್ರೇರಣೆಯಿಂದ ದೇವಾಲಯಕ್ಕೆ ಹಿಂದಿರುಗಿಸಿದ್ದು, ದೇವಾಲಯದ ಸುತ್ತಮುತ್ತಲು ಇಂಟರ್ ಲಾಕ್ ಅಳವಡಿಸಿರುವುದು. ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಮೊದಲಾದ ಕಾರ್ಯಗಳನ್ನು ತಮ್ಮ ಆಡಳಿತಾವಧಿಯಲ್ಲಿ ಮಾಡಲಾಗಿದೆ ಎಂದರು.


ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲಾಗದಿರುವ ಬಗ್ಗೆ ಖೇದವಿದೆ:
ಅಣೆಕಟ್ಟಿನ ಹಿನ್ನೀರಿನಿಂದಾಗಿ ಉದ್ಬವಲಿಂಗಕ್ಕೆ ಈ ಬಾರಿಯೂ ಪೂಜೆ ಸಲ್ಲಿಸಲಾಗದಿರುವುದು ಎಲ್ಲಾ ಭಕ್ತಾದಿಗಳಂತೆ ನಮಗೂ ಖೇದವಿದೆ. ಆದರೆ ಜಿಲ್ಲೆಯ ಜನರ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮಾಡಲಾದ ವ್ಯವಸ್ಥೆಯನ್ನು ಗೌರವಿಸಿ ಈ ನ್ಯೂನ್ಯತೆಯನ್ನು ಒಪ್ಪಿಕೊಳ್ಳಲಾಗಿದೆ. ಮುಂದಕ್ಕೆ ನೀರಕಟ್ಟೆ ಅಣೆಕಟ್ಟಿನಲ್ಲಿ ಜಲವಿದ್ಯುತ್ ಸ್ಥಾವರ ಕಾರ್ಯಾರಂಭಗೊಂಡರೆ ಹಾಗೂ ಮುಗೇರಡ್ಕದ ಅಣೆಕಟ್ಟಿನಲ್ಲಿಯೂ ನೀರು ಸಂಗ್ರಹಿಸಲಾದರೆ ಬಿಳಿಯೂರು ಅಣೆಕಟ್ಟಿಗೆ ಜಾತ್ರೆ ಮುಗಿಯುವ ವರೆಗೆ ಗೇಟು ಅಳವಡಿಸದೆ ಇರುವ ಸಾಧ್ಯತೆಯನ್ನು ಅನುಷ್ಠಾನಿಸುವ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ತಿಳಿಸಿದರು.


ನದಿಗೆ ಶೌಚಾಲಯದ ತ್ಯಾಜ್ಯ ಸೇರ್ಪಡೆ ಅಮಾನುಷ:
ನಮ್ಮಲ್ಲಿ ನದಿ ಸಹಿತ ಜಲಮೂಲವನ್ನು ಪೂಜ್ಯನೀಯವಾಗಿ ಕಾಣಲಾಗುತ್ತದೆ. ನದಿಯನ್ನು ಜಡವಸ್ತುವನ್ನಾಗಿ ಕಾಣುವ ವಿದೇಶಗಳಲ್ಲಿ ನದಿ ಶುದ್ಧವಾಗಿ ಹರಿಯುತ್ತಿದ್ದು, ನಮ್ಮಲ್ಲಿ ನದಿ ಕಲುಷಿತವಾಗಿ ಹರಿಯುತ್ತಿರುವುದು ವಿಪರ್ಯಾಸವೆನಿಸಿದೆ. ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರ ನೆಲೆಯಾಗಿರುವ ನದಿಗೆ ಶೌಚಾಲಯದ ತ್ಯಾಜ್ಯವನ್ನು ಹರಿಯಬಿಡುತ್ತಿರುವುದು ಅಮಾನುಷ ನಡೆಯಾಗಿದೆ. ಇದರ ಬಗ್ಗೆ ಸಂಬಂಧಿತ ಆಡಳಿತಾಧಿಕಾರಿಗಳು ಗಮನ ಹರಿಸಬೇಕೆಂದು ಕೆ. ರಾಧಾಕೃಷ್ಣ ನಾೖಕ್ ಈ ಸಂದರ್ಭ ತಿಳಿಸಿದರು.


ಎಲ್ಲರ ಸಹಕಾರದೊಂದಿಗೆ ಜಾತ್ರೋತ್ಸವ ಚೆನ್ನಾಗಿ ನಡೆದಿದೆ: ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮ ಎಲ್ಲವೂ ಚೆನ್ನಾಗಿ ನಡೆದಿದೆ. ಆದರೆ ಪಂಚಾಯತ್ ಪಿಡಿಒ ಕ್ಷೇತ್ರದ ಶಾಸಕರ ಆಶೋತ್ತರದಂತೆ ಅಳವಡಿಸಲಾದ ವಿದ್ಯುತ್ ದೀಪವನ್ನು ಕತ್ತರಿಸಿದ್ದು, ಹಾಗೂ ಶಾಸಕರ ಸೂಚನೆಯಂತೆ ನಿರುಪಯುಕ್ತವಾಗಿದ್ದ ಕುಡಿಯುವ ನೀರಿನ ಘಟಕವನ್ನು ದೇವಾಲಯದ ವೆಚ್ಚದಲ್ಲಿ ತೆರವು ಮಾಡಿರುವುದಕ್ಕೆ ನೋಟೀಸು ಜಾರಿ ಮಾಡಿರುವುದು ಬೇಸರ ತಂದಿದೆ. ಶಾಸಕರ ನಿರ್ದೇಶನವನ್ನು ಧಿಕ್ಕರಿಸುವಂತಹ ವರ್ತನೆ ತೋರಿರುವುದು ಜಾತ್ರೋತ್ಸವದಲ್ಲಿ ಕಪ್ಪು ಚುಕ್ಕೆಯಾಗಿ ಮೂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಡಾ. ರಮ್ಯ ರಾಜಾರಾಮ್ , ಸೋಮನಾಥ , ಗೋಪಾಲಕೃಷ್ಣ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here