







ಪುತ್ತೂರು : ವಿಷವನ್ನು ಪಾನ ಮಾಡಿ, ಜಗತ್ತಿಗೆ ಅಮೃತವನ್ನು ನೀಡಿದ ದೇವರು ಈಶ್ವರ. ಜಗದ್ಗುರು ಮಧ್ವಾಚಾರ್ಯರು ರುದ್ರದೇವನನ್ನು ಗುರುತಿಸಿ, ಮುಖ ಐದು, ಹೃದಯ ಒಂದು ಎಂದು ಹೇಳಿದ್ದಾರೆ. ಏಕಮನಸ್ಕರಾಗಿ ಕ್ಷೇತ್ರಕ್ಕೆ ಬಂದರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಪದ್ಯಾಣ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಹಿನ್ನೆಲೆ ಬುಧವಾರ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.


ಪದ್ಯಾಣಕ್ಕೂ ತಮಗೂ ಇರುವ ನಂಟನ್ನು ಹೇಳಿದ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ, ಬದುಕಿನಲ್ಲಿ ಬರುವ ಕಷ್ಟಗಳು ದೂರವಾಗಲಿ ಎಂದು ಹಾರೈಸಿದರು.



ಇದಕ್ಕೂ ಮೊದಲು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಯಾಣ ರಘುರಾಮ ಕಾರಂತ ಅವರು ರುದ್ರಾಕ್ಷಿಮಾಲೆಯನ್ನು ಶ್ರೀಗಳಿಗೆ ಅರ್ಪಿಸಿದರು. ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಮತ್ತು ಉಷಾ ಸತ್ಯನಾರಾಯಣ ದಂಪತಿ ಶ್ರೀಗಳಿಗೆ ರುದ್ರಾಕ್ಷಿ ಗಿಡವನ್ನು ಸಮರ್ಪಿಸಿ ಸ್ವಾಗತಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರನ ಅನುಗ್ರಹ ಸರ್ವರಿಗೂ ದೊರಕಲಿ ಎಂದು ಶುಭ ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಕ್ಷೇತ್ರಕ್ಕೂ ಶ್ರೀಗಳಿಗೂ ಇರುವ ಸಂಬಂಧವನ್ನು ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಉಪಾಧ್ಯಕ್ಷ ಸುದರ್ಶನ ಬಜ, ಬಿಜೆಪಿ ರಾಜ್ಯ ಮುಖಂಡ ವಿಕಾಸ್ ಪುತ್ತೂರು ಸಹಿತ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ, ದೇವಸ್ಥಾನದ ಸಮಿತಿಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ನವ್ಯ ಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.










