ಸಂಗ್ರಹ ಸಾಕ್ಷ್ಯಗಳ ಸುಧಾರಣಾ ಸಲಹಾ ಸಮಿತಿ ಸದಸ್ಯರಾಗಿ ಸುಪ್ರೀಂಕೋರ್ಟ್ ನಿಂದ ನ್ಯಾಯವಾದಿ ರಾಜಶೇಖರ್ ಹಿಲ್ಯಾರ್ ನೇಮಕ

0

ಪುತ್ತೂರು: ದೇಶದ ನ್ಯಾಯದಾನ ವ್ಯವಸ್ಥೆಯಲ್ಲಿ ಸಾಕ್ಷ್ಯಗಳ ಸಂಗ್ರಹಣೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ರಚಿಸಲಾಗಿರುವ ಸಂಗ್ರಹ ಸಾಕ್ಷ್ಯಗಳ ಸುಧಾರಣಾ ಸಲಹಾ ಸಮಿತಿ ಸದಸ್ಯರನ್ನಾಗಿ ಕರ್ನಾಟಕ ಹೈಕೋರ್‍ಟ್‌ ನ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲ್ಯಾರ್ ಅವರನ್ನು ಸುಪ್ರೀಂಕೋರ್‍ಟ್ ನೇಮಕ ಮಾಡಿದೆ.

ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಅಪರಾಧ ತನಿಖಾ ವಿಧಾನಗಳಿಗೆ ಅನುಗುಣವಾಗಿ ಸಾಕ್ಷ್ಯ ಸಂಗ್ರಹಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಅಗತ್ಯವನ್ನು ಮನಗಂಡ ಸುಪ್ರೀಂಕೋರ್ಟ್, ಈ ಪ್ರಕ್ರಿಯೆಯನ್ನು ಹೆಚ್ಚು ವೈಜ್ಞಾನಿಕ ಮತ್ತು ಪಾರದರ್ಶಕವಾಗಿಸಲು ತಜ್ಞರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ರಾಜಶೇಖರ್ ಹಿಲ್ಯಾರ್ ಅವರಿಗೆ ಸ್ಥಾನ ನೀಡಲಾಗಿದೆ. ತನಿಖಾ ಸಂಸ್ಥೆಗಳು ಸಾಕ್ಷ್ಯಗಳನ್ನು ಸಂಗ್ರಹಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸುವುದು, ಡಿಜಿಟಲ್ ಮತ್ತು ಫೋರೆನ್ಸಿಕ್ ಸಾಕ್ಷ್ಯಗಳ ಬಳಕೆಯಲ್ಲಿ ಸುಧಾರಣೆ ತರುವುದು, ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಲಹೆಗಳನ್ನು ನೀಡುವುದು ಈ ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ.


ಸುಪ್ರೀಂ ಕೋರ್‍ಟ್ ರಚಿಸಿರುವ ಈ ಸಮಿತಿಗೆ ನೇಮಕಗೊಂಡಿರುವ ಎಸ್. ರಾಜಶೇಖರ್ ಹಿಲ್ಯಾರ್ ಅವರು ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವ ಉಳ್ಳವರಾಗಿದ್ದು, ಅನೇಕ ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಹಿಲ್ಯಾರ್ ದಿ. ವೆಂಕಟ್ರಮಣ ಭಟ್ ಹಾಗೂ ಸರೋಜ ವಿ.ಭಟ್ ದಂಪತಿ ಪುತ್ರರಾದ ರಾಜಶೇಖರ ಹಿಲ್ಯಾರ್ ಅವರು, ಉಪ್ಪಿನಂಗಡಿ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಪುತ್ತೂರು ಸಂತಫಿಲೋಮಿನಾ ಕಾಲೇಜಿನಲ್ಲಿ ಹೈಸ್ಕೂಲ್, ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದರು. ಪ್ರಸ್ತುತ ಇವರು ರಾಜ್ಯ ಹೈಕೋರ್‍ಟ್ ವಕೀಲರಾಗಿ, ಕೇಂದ್ರ ಸರಕಾರದ ಹಿರಿಯ ಪ್ಯಾನಲ್ ಎಡ್ವೋಕೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here