ಶ್ರೀರಾಮ ಹನುಮಜ್ಯೋತಿ ರಥಯಾತ್ರೆಗೆ ರಾಮಕುಂಜ ದೇವಸ್ಥಾನದಲ್ಲಿ ಸ್ವಾಗತ

0

ರಾಮಕುಂಜ; ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.9ರಿಂದ 12ರ ತನಕ ನಡೆಯುವ ಅಷ್ಟಬಂದ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ಗಂಗಾಜಲು, ಆಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ ಹಾಗೂ ಪಂಪ ಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಸಂಚರಿಸುತ್ತಿರುವ ಶ್ರೀರಾಮ ಹನುಮಜ್ಯೋತಿ ರಥಯಾತ್ರೆ ಏ.೫ರಂದು ಸಂಜೆ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿತು.


ಕಾಜರೊಕ್ಕುವಿನಲ್ಲಿ ರಥಕ್ಕೆ ಸ್ವಾಗತಕೋರಿ ಅಲ್ಲಿಂದ ಭಜನಾ ತಂಡದೊಂದಿಗೆ ಶ್ರೀರಾಮ ಹನುಮ ಜ್ಯೋತಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಉಡುಪ ಅವರು ರಥಕ್ಕೆ ಪೂಜೆ ಸಲ್ಲಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ಸಹಿತ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ, ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ರಥಯಾತ್ರೆ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಮಾಹಿತಿ ನೀಡಿದರು. ಶ್ರೀ ರಾಮ ಹನುಮಜ್ಯೋತಿಯನ್ನು ರಾಮಕುಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here