






ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದೆ.


ಸಂಘದ ಸದಸ್ಯರು ಪಡೆದುಕೊಂಡ ಸಾಲದ ಕಂತುಗಳನ್ನು ವಾಯ್ದೆಗೆ ಸರಿಯಾಗಿ ಮರುಪಾವತಿ ಮಾಡಿರುವುದರಿಂದ ಸಂಘವು ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾಕರ ರೈ ಕೆ ಎಂ ರವರು ತಿಳಿಸಿದ್ದಾರೆ. ಸಂಘವೂ 2023-24 ಮತ್ತು 2024-25ರಲ್ಲಿಯೂ ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿದ್ದು ಇದೀಗ 2025-26ರಲ್ಲೂ ಶೇ.100 ಸಾಧನೆ ಮಾಡಿ ದಾಖಲೆ ಮಾಡಿದೆ. 67ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 7 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುತ್ತದೆ. ಸಂಘವೂ ಕೃಷಿ ಸಾಲಗಾರ ರೈತರಿಗೆ ಬೆಳೆವಿಮೆ ಯೋಜನೆ ಸೌಲಭ್ಯ ಅಳವಡಿಸಿದೆ. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ಶ್ರೀ ಶಕ್ತಿ ಸ್ವಸಹಾಯ ಸಂಘಗಳು ಹಾಗೂ ಇನ್ನಿತರ ಸಂಘ-ಸಂಸ್ಥೆಗಳಿಗೆ ಸಾಲ ವಿತರಿಸುತ್ತದೆ. ರಸಗೊಬ್ಬರ ಮಾರಾಟ, ಪಡಿತರ ವಿತರಣೆ ಮಾಡುತ್ತಿದೆ. ಸಂಘವೂ ಲಾಭದಲ್ಲಿ ಮುನ್ನಡೆಯುತ್ತಿದ್ದು ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ ಆರು ವರ್ಷಗಳಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ. 2020ನೇ ವರ್ಷದಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘವೆಂಬ ಪ್ರಶಸ್ತಿಯನ್ನು ಸಹಕಾರಿ ಇಲಾಖೆಯಿಂದ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿದ್ದಾರೆ.




ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ನಿರಂತರ ಮೂರು ವರ್ಷಗಳಿಂದ ಶೇ.100 ಸಾಲ ವಸುಲಾತಿ ಸಾಧನೆ ಮಾಡುವ ಮೂಲಕ ಸಂಘದ ಸದಸ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಘದ ಮೇಲಿನ ಅಭಿಮಾನದಿಂದ ಸಕಾಲದಲ್ಲಿ ಸಾಲ ಮರುಪಾವತಿಸಿದ ಸದಸ್ಯರಿಗೆ, ಸಂಘದ ಸರ್ವತೋಮುಖ ಪ್ರಗತಿ ಅಭಿವೃದ್ಧಿಗೆ ಸಹಕಾರಿಸಿದ ಸದಸ್ಯರಿಗೆ, ಗ್ರಾಹಕರಿಗೆ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘದ ವಲಯ ಮೇಲ್ವಿಚಾರಕರಿಗೆ ಆಡಳಿತ ಮಂಡಳಿ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಬಾಲಕೃಷ್ಣ ಬಾಣಜಾಲು ಅಧ್ಯಕ್ಷರು
ನೆಲ್ಯಾಡಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ









