ಅಟೋ ಗ್ಯಾಸ್ ದರ ಕೆ.ಜಿ.ಗೆ ರೂ.120ಕ್ಕೆ ಏರಿಕೆ : ಗೋ ಗ್ಯಾಸ್ ಪಂಪ್ ಮುಂಭಾಗ ರಿಕ್ಷಾ ಚಾಲಕರ ಪ್ರತಿಭಟನೆ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪೆನಿಯ ಅಟೋ ಗ್ಯಾಸ್ ಪಂಪ್‌ನಲ್ಲಿ ಗ್ಯಾಸ್ ದರವನ್ನು ಕೆ.ಜಿ.ಗೆ ರೂ. 120ಕ್ಕೆ ಏರಿಸಿರುವುದನ್ನು ವಿರೋಧಿಸಿ ಪುತ್ತೂರು ತಾಲೂಕು ಅಟೋ ಚಾಲಕ -ಮಾಲಕರ ಸಂಯುಕ್ತ ಹೋರಾಟ ಸಮಿತಿಯಿಂದ ಏ.6ರಂದು ಪಂಪ್ ಎದುರುಗಡೆ ಪ್ರತಿಭಟನೆ ನಡೆಸಿ ಬಳಿಕ ಶಾಸಕರಿಗೆ ಮನವಿ ನೀಡಲಾಯಿತು. ಪಂಪ್ ಮಾಲಕರುಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದ್ದಾರೆ.


ಯುದ್ಧದ ಪರಿಣಾಮ ಅಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವ ಹಿನ್ನಲೆಯಲ್ಲಿ ಹಲವು ಅಟೋ ಗ್ಯಾಸ್ ಪಂಪ್‌ಗಳಲ್ಲಿ ದರ ಏರಿಕೆ ಆಗಿದ್ದು ಅಟೋ ಚಾಲಕ-ಮಾಲಕರು ಕಂಗೆಟ್ಟಿದ್ದಾರೆ. ಪುತ್ತೂರಿನಲ್ಲಿ ಕೆಲವೇ ಪಂಪ್‌ಗಳಲ್ಲಿ ಮಾತ್ರ ಗ್ಯಾಸ್ ವಿತರಣೆ ಆಗುತ್ತಿರುವುದರಿಂದ ಅಟೋ ಚಾಲಕರು ಬಿಸಿಲಲ್ಲಿ ಸರದಿ ಸಾಲಿನಲ್ಲಿ ಬಂದು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದರು. ಇದರ ಬೆನ್ನಲ್ಲೇ ಪುತ್ತೂರಿನ ಮಹಿಳಾ ಠಾಣೆಯ ಎದುರುಗಡೆ ಇರುವ ಗೋ ಗ್ಯಾಸ್ ಕಂಪನಿಯ ಅಟೋ ಗ್ಯಾಸ್ ಪಂಪ್‌ನಲ್ಲಿ ಕೆ.ಜಿ.ಗೆ 62 ರೂ. ಇದ್ದ ಗ್ಯಾಸ್ ದರವನ್ನು 120 ರೂ.ಗೆ ಏರಿಸಿರುವುದನ್ನು ವಿರೋಧಿಸಿ ಪುತ್ತೂರು ತಾಲೂಕು ಅಟೋ ಚಾಲಕ – ಮಾಲಕರ ಸಂಯುಕ್ತ ಹೋರಾಟ ಸಮಿತಿಯಿಂದ ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಸುಮಾರು 200ರಷ್ಟು ರಿಕ್ಷಾ ಚಾಲಕರು, ಮಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ಹೋರಾಟ ಸಮಿತಿ ಅಧ್ಯಕ್ಷರಾದ ಜಯರಾಮ ಕುಲಾಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು ಸಹಿತ ಪದಾಧಿಕಾರಿಗಳು ಗೋ ಗ್ಯಾಸ್ ಪಂಪ್‌ನ ಮ್ಯಾನೇಜರ್‌ರವರಲ್ಲಿ ದರ ಏರಿಕೆ ಮಾಡಿರುವುದರ ಬಗ್ಗೆ ವಿಚಾರಿಸಿದರು. ಏರಿಕೆ ಮಾಡಿರುವುದು ನಾವಲ್ಲ. ಇದು ನಮ್ಮ ಕಂಪೆನಿಯ ಅಧಿಕೃತ ದರ ಎಂದು ಮ್ಯಾನೇಜರ್ ಸ್ಪಷ್ಟಪಡಿಸಿದರು. ಇದಕ್ಕೆ ಒಪ್ಪದ ರಿಕ್ಷಾ ಚಾಲಕರು, ಮಾಲಕರು ಪಂಪ್ ಎದುರುಗಡೆ ರಿಕ್ಷಾ ನಿಲ್ಲಿಸಿ ಪ್ರತಿಭಟನೆ ನಡೆಸಿ ಘೋಷಣೆ, ಧಿಕ್ಕಾರ ಕೂಗಿದರು. ಅಲ್ಲದೆ ಶಾಸಕರು ಸ್ಥಳಕ್ಕಾಗಮಿಸಬೇಕೆಂದು ಒತ್ತಾಯಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶವಿಲ್ಲ, ದೂರು ಕೊಡಿ. ಶಾಸಕರ ಕಛೇರಿಗೆ ಹೋಗಿ ಶಾಸಕರನ್ನು ಭೇಟಿಯಾಗಿ ಎಂದರು. ಬಳಿಕ ಶಾಸಕರ ಕಚೇರಿಗೆ ಪ್ರತಿಭಟನಾಕಾರರು ತೆರಳಿ ಶಾಸಕರಿಗೆ ಮನವಿ ನೀಡಿದರು.


ಶಾಸಕರಿಗೆ ಮನವಿ:
ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷರಾದ ಜಯರಾಮ ಕುಲಾಲ್ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿ ಎಲ್‌ಪಿಜಿ ಅಟೋ ಗ್ಯಾಸ್ ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಅಟೋ ಗ್ಯಾಸ್ ದರವನ್ನು ಕೆ.ಜಿ.ಗೆ ರೂ.120ರವರೆಗೆ ಏರಿಕೆ ಮಾಡಿರುವುದರ ಬಗ್ಗೆ ಮನವಿ ನೀಡಿದರು.


ಎಲ್ಲಾ ಪಂಪ್‌ಗಳಲ್ಲಿ ಒಂದೇ ದರ ನಿಗದಿಪಡಿಸಬೇಕು:
ಮನವಿ ನೀಡಿದ ಜಯರಾಮ ಕುಲಾಲ್‌ರವರು ಮಾತನಾಡಿ, ಮೊದಲು ಎಲ್ಲಾ ಪಂಪ್‌ಗಳಲ್ಲಿ 1 ಕೆ.ಜಿ.ಗೆ ರೂ.62 ಏಕ ದರ ಇತ್ತು. ಇಂದು ಬೇರೆ ಬೇರೆ ದರದಲ್ಲಿ ಗ್ಯಾಸ್ ವಿತರಣೆ ಮಾಡುತ್ತಿದ್ದಾರೆ. ಇದನ್ನು ಸರಿಮಾಡಿಕೊಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಯಾವುದೇ ಸ್ಪಂದನೆ ಇಲ್ಲ. ಎಲ್ಲಾ ಪಂಪ್‌ಗಳಲ್ಲಿ ಒಂದೇ ದರವನ್ನು ನಿಗದಿಪಡಿಸಬೇಕು. ಗೋ ಗ್ಯಾಸ್ ಪಂಪ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತೀ ರಿಕ್ಷಾ ಚಾಲಕರಿಗೆ ದಿನಕ್ಕೆ 5 ಕೆ.ಜಿ.ಯಷ್ಟು ಅಟೋ ಗ್ಯಾಸ್ ನೀಡುವಂತಾಗಬೇಕು. ಪುತ್ತೂರಿನಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ಅಟೋ ರಿಕ್ಷಾ ನಿರ್ಬಂಧಿಸಲಾಗಿದ್ದು ಈ ನಿರ್ಬಂಧವನ್ನು ತೆರವುಗೊಳಿಸಬೇಕು. ಸರಕಾರ ತೆರಿಗೆ ಕಡಿಮೆ ಮಾಡಿ ಹಿಂದಿನ ದರದಲ್ಲಿ ಗ್ಯಾಸ್ ಸಿಗುವಂತೆ ಮಾಡಬೇಕು. ರಿಕ್ಷಾದ ಬಾಡಿಗೆ ದರವನ್ನು ಹೆಚ್ಚಳ ಮಾಡಲು ಕ್ರಮಕೈಗೊಳ್ಳಬೇಕು. 1 ವಾರದೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಸ್ವಯಂ ಪ್ರೇರಿತರಾಗಿ ರಿಕ್ಷಾ ಓಡಾಟ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.


ಸಮಸ್ಯೆ ಬಗೆಹರಿಸಲು ಎ.ಸಿ., ತಹಶೀಲ್ದಾರ್‌ರವರಿಗೆ ಸೂಚನೆ:
ಶಾಸಕ ಅಶೋಕ್ ಕುಮಾರ್ ರೈರವರು ಮನವಿ ಸ್ವೀಕರಿಸಿ, ಪುತ್ತೂರು ಎಸಿಯವರಿಗೆ ಹಾಗೂ ತಹಶೀಲ್ದಾರ್‌ರವರಿಗೆ ಸ್ಥಳದಲ್ಲಿಯೇ -ನ್ ಮಾಡಿ ಗೋ ಗ್ಯಾಸ್ ಪಂಪ್ ಹಾಗೂ ಇತರ ಎಲ್ಲಾ ಅಟೋ ಗ್ಯಾಸ್ ಪಂಪ್ ಮಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.


ಸಂಜೆ ಒಳಗೆ ಗ್ಯಾಸ್ ದರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ: ಅಶೋಕ್ ಕುಮಾರ್ ರೈ:
ಬಳಿಕ ಮಾತನಾಡಿದ ಶಾಸಕರು ಎಲ್ಲಾ ಗ್ಯಾಸ್ ಕಂಪೆನಿಗಳು ಕೇಂದ್ರ ಸರಕಾರದ ಅಧಿನದಲ್ಲಿರುವುದು. ಖಾಸಗಿ ಪಂಪ್‌ಗಳ ಮೇಲೆ ಹಾಗೂ ಅವರ ದರ ಏರಿಕೆಯ ಬಗ್ಗೆ ನಮಗೆ ನಿಯಂತ್ರಣ ಇಲ್ಲ. ನಿಮ್ಮ ಮನವಿಗೆ ಸ್ಪಂಧಿಸಿ ಇಂದೇ ಸಂಜೆ ಒಳಗೆ ದರದ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರಕಾರದ ಜನಪ್ರತಿನಿಧಿಗಳು ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಇಲ್ಲ ಎಂದು ಸ್ಟೇಟ್‌ಮೆಂಟ್ ಕೊಡುತ್ತಾರೆ. ಹೊರ ದೇಶದಲ್ಲಿ ಯುದ್ಧ ಆದಾಗ ಗ್ಯಾಸ್ ಪೂರೈಕೆಯ ಬಗ್ಗೆ ಕ್ರಮ ಕೈಗೊಳ್ಳಬೇಕು. ಇದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದರು. ಲೋಕಲ್ ಜನಪ್ರತಿನಿಧಿಗಳು ಬೇಕಾದಷ್ಟು ಗ್ಯಾಸ್ ಇದೆ ಎಂದು ಹೇಳುತ್ತಾರೆ. ಈಗ ಬಂದು ಗ್ಯಾಸ್ ಕೊಡಿಸಿ ಎಂದು ಹೇಳಿದ ಅವರು ನಿಮಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ರಿಕ್ಷಾ ಚಾಲಕರಿಗೆ ಭರವಸೆ ನೀಡಿದರು.

ಬೇಡಿಕೆ ಈಡೇರದಿದ್ದರೆ ಮುಂದಿನ ಸೋಮವಾರ ಅಟೋ ರಿಕ್ಷಾ ಚಾಲಕರಿಂದ ಸ್ವಯಂಪ್ರೇರಿತ ಬಂದ್
ರಿಕ್ಷಾ ಚಾಲಕರ ಸಮಸ್ಯೆ ಬಗ್ಗೆ ಎಸಿ, ತಹಶೀಲ್ದಾರ್, ಆರ್.ಟಿ.ಒ.ರವರಿಗೆ ಮನವಿ ನೀಡಿದ್ದೇವೆ. ಇದು ಯಾವುದೇ ಸರಕಾರದ ವಿರುದ್ಧ ನಮ್ಮ ಪ್ರತಿಭಟನೆ ಅಲ್ಲ. ಎಲ್ಲಾ ಹೋಟೇಲ್, ದಿನಸಿ ಹಾಗೂ ಇತರ ದಿನಬಳಕೆ ಐಟಂಗಳ ಮೇಲಿನ ದರ ಹೆಚ್ಚಾಗಿದೆ. ರಿಕ್ಷಾ ಚಾಲಕರಿಗೆ ದರ ಹೆಚ್ಚಳ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲದಂತಾಗಿದೆ. ಪಂಪ್‌ಗಳಲ್ಲಿ ಬೇರೆ ಬೇರೆ ದರ ನಿಗದಿ ಮಾಡಿದ್ದಾರೆ. ಇವತ್ತು ನಮ್ಮ ಮನವಿಗೆ ಸ್ಪಂದಿಸಿ ಶಾಸಕರು ಪಂಪ್ ಮಾಲಕರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ಸೋಮವಾರ ಪುತ್ತೂರು ತಾಲೂಕಿನಲ್ಲಿ ಅಟೋ ರಿಕ್ಷಾ ಚಾಲಕರು ಸ್ವಯಂಪ್ರೇರಿತ ಬಂದ್ ನಡೆಸಲಿದ್ದೇವೆ
-ಜಯರಾಮ ಕುಲಾಲ್, ಅಧ್ಯಕ್ಷರು, ಸಂಯುಕ್ತ ಹೋರಾಟ ಸಮಿತಿ

ವಿಧಾನಸೌಧದಲ್ಲಿ ರಿಕ್ಷಾಚಾಲಕರ ಸಮಸ್ಯೆ ಬಗ್ಗೆ ಯಾರೂ ಮಾತನಾಡುವುದಿಲ್ಲ
ರಿಕ್ಷಾ ಚಾಲಕರ ಸಮಸ್ಯೆ ಕೇಳಲು ಯಾವ ಜನಪ್ರತಿನಿಧಿಗಳು ಬರುವುದಿಲ್ಲ. ವಿಧಾನ ಸೌಧದಲ್ಲಿ ರಿಕ್ಷಾಚಾಲಕರ ಬಗ್ಗೆ ಯಾರು ಮಾತನಾಡುವುದಿಲ್ಲ. ನಮ್ಮ ಸಂಕಷ್ಟವನ್ನು ನಾವೇ ಎದುರಿಸಬೇಕು. ರಿಕ್ಷಾ ಚಾಲಕರು ಆತ್ಮಹತ್ಯೆ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯ ಸರಕಾರ ಕೂಡ ತೆರಿಗೆ ಕಡಿಮೆ ಗ್ಯಾಸ್ ಪೂರೈಕೆ ಮಾಡಬೇಕು. ನಮಗೆ ನ್ಯಾಯ ಸಿಗದಿದ್ದರೆ ಮುಂದಿನ ಸೋಮವಾರ ಸ್ವಯಂ ಪ್ರೇರಿತ ಬಂದ್ ಮಾಡುತ್ತೇವೆ.
ಇಸ್ಮಾಯಿಲ್ ಬೊಳುವಾರು, ಕಾರ್ಯದರ್ಶಿ ಸಂಯುಕ್ತ ಹೋರಾಟ ಸಮಿತಿ

LEAVE A REPLY

Please enter your comment!
Please enter your name here