ಉಪ್ಪಿನಂಗಡಿಯಲ್ಲಿ ಇತಿಹಾಸ ಸೃಷ್ಟಿಸಿದ ನಾಗಮಂಡಲ – ಧರ್ಮ ರಕ್ಷಣೆಗಾಗಿ ದುಷ್ಟ ಶಿಕ್ಷಣೆ- ಶಿಷ್ಟ ರಕ್ಷಣೆಯ ಅಭಯದ ನುಡಿ

0

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ನಾಗಮಂಡಲೋತ್ಸವ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಉಪ್ಪಿನಂಗಡಿಯ ಸಂಗಮ ಕ್ಷೇತ್ರವಾದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನಡೆದ ಚತುಃಪವಿತ್ರ ನಾಗಮಂಡಲ ಸೇವೆಯು ಸಹಸ್ರಾರು ಭಕ್ತಾಧಿಗಳ ಭಾಗೀದಾರಿಕೆಯೊಂದಿಗೆ, ಧರ್ಮ ರಕ್ಷಣೆಗಾಗಿ ದುಷ್ಟ ಶಿಕ್ಷಣೆ- ಶಿಷ್ಟ ರಕ್ಷಣೆಯೆಂಬ ನಾಗಪಾತ್ರಿಯ ಅಭಯದ ನುಡಿಯೊಂದಿಗೆ ಎ.6ರ ನಸುಕಿನ ಜಾವ ಸಂಪನ್ನಗೊಂಡಿತು.


ನಾಗಮಂಡಲ ನಡೆಸಿಕೊಡುವ ಶ್ರೀಕೃಷ್ಣಪ್ರಸಾದ್ ನೇತೃತ್ವದ ವೈದ್ಯರ ತಂಡವು ಎ.5ರ ಸಂಜೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯ ಎದುರು ಭಾಗದಲ್ಲಿರುವ ಸಂತೆ ಮಜಲಿನಲ್ಲಿ ನಿರ್ಮಿಸಲಾಗಿದ್ದ ವಿಶೇಷ ಪುಷ್ಪಾಲಂಕಾರಗೊಂಡ, ಚಪ್ಪರ ಶುದ್ಧಿ ಸೇರಿದಂತೆ ಧಾರ್ಮಿಕ ವಿಧಿ- ವಿಧಾನಗಳು ನಡೆದ ನಾಗಮಂಡಲ ಚಪ್ಪರದಲ್ಲಿ ಚತುಃಪವಿತ್ರ (ನಾಲ್ಕು ಗಂಟಿನ) ನಾಗಮಂಡಲವನ್ನು ಬಿಡಿಸಿತು. ಬಳಿಕ ನಾಗಪಾತ್ರಿಯು ದೇವಾಲಯದ ಮೂಲ ನಾಗನಕಟ್ಟೆಯಲ್ಲಿ ಹಾಲಿಟ್ಟು ಸೇವೆ ನಡೆಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ದರ್ಶನದೊಂದಿಗೆ ನಾಗಮಂಡಲ ಚಪ್ಪರಕ್ಕೆ ಆಗಮಿಸಿದರು. ನಾಗಮಂಡಲ ಚಪ್ಪರದಲ್ಲಿಯೂ ವಿಶೇಷ ಪ್ರಾರ್ಥನೆ ನಡೆದು ಬಳಿಕ ಕಲಾತ್ಮಕ ನೃತ್ಯಾಚರಣೆಯ ಮೂಲಕ ನಾಗಮಂಡಲ ಸೇವೆಯು ಆರಂಭವಾಯಿತು. ನಾಗಮಂಡಲದ ಸುತ್ತವೂ ಅರ್ಧ ನಾರಿಯ ವೇಷಧರಿಸಿದ್ದ ವೈದ್ಯ ಕುಲದವರು ಹಾಗೂ ನಾಗಪಾತ್ರಿಯು ಅಂದರೆ ಪುರುಷ ಮತ್ತು ಪ್ರಕೃತಿಯ ಸಂಕೇತವಾಗಿ ಕುಣಿಯಲು ಆರಂಭಿಸಿದರು. ಕುಣಿತದಲ್ಲಿ ನಾಗದೇವತೆಯನ್ನು ಶಾಂತವಾಗುವಂತೆ ಪ್ರಾರ್ಥಿಸುವ ಸಂದರ್ಭ, ದೇವಾನುದೇವತೆಗಳ ಪ್ರಾರ್ಥನೆಯ ಸಂದರ್ಭ, ಕ್ರೋಧ ಅಸಹನೆಯ ಸಂದರ್ಭ ಅರ್ಧ ನಾರಿಯ ವೇಷದ ವೈದ್ಯರಿಂದ ಅನೇಕ ಹಸ್ತ ಮುದ್ರೆಗಳು ಬಳಕೆಯಾದವು. ಕುಣಿತದಲ್ಲಿ ಒಮ್ಮೆ ಕಲಹ, ಇನ್ನೊಮ್ಮೆ ಸ್ನೇಹ, ಧೀನತೆ, ಆಕ್ರೋಶ ಹೀಗೆ ಬಗೆ ಬಗೆಯ ಭಾವ ಪ್ರದರ್ಶನ ಕಂಡು ಬಂತು. ನಾಗಪಾತ್ರಿಯು ತೆಕ್ಕೆ ತುಂಬ ಒತ್ತಿಕೊಂಡಿದ್ದ ಹಿಂಗಾರವನ್ನು ಆಗಿಂದಾಗೆ ಮುಖಕ್ಕೆ ಉಜ್ಜಿಕೊಳ್ಳುತ್ತಾ ಭಯಾನಕ, ರೌದ್ರತೆಯನ್ನು ಮುಖದಲ್ಲಿ ತುಂಬಿಕೊಳ್ಳುತ್ತಾ ಮೊದಲು ಕುಪಿತನಾಗಿ, ಸುತ್ತಿ ಸುಳಿದು, ಶರೀರವನ್ನು ಗಂಟಿಕ್ಕಿಕೊಂಡು ಹೆಡೆ ಎತ್ತಿಕೊಂಡರು. ಕೊನೆಗೇ ಪ್ರಕೃತಿಯ ಭಕ್ತಿಗೆ ಮಣಿದು ಒಲಿದರು. ಕೊನೆಯಲ್ಲಿ ಪರಶುರಾಮ ಸೃಷ್ಟಿಯ ಈ ಪುಣ್ಯ ಮಣ್ಣಿನಲ್ಲಿ ಧರ್ಮದ ಕೆಲಸಕ್ಕೆ ಅಡ್ಡಿಪಡಿಸುವವರನ್ನು ಈ ಮಣ್ಣು ಸಹಿಸದು ಎಂದು ಅಭಯದ ನುಡಿಗಳನ್ನಾಡುವ ಮೂಲಕ ಭಕ್ತ ಜನರಿಗೆ ಪ್ರಸಾದ ವಿತರಣೆಯೊಂದಿಗೆ ನಾಗಮಂಡಲವು ಸಂಪನ್ನಗೊಂಡಿತು.


ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಉಪ್ಪಿನಂಗಡಿ ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀರಾಮ ಭಟ್ ಪಾತಾಳ, ಹೇರಂಭ ಶಾಸ್ತ್ರಿ, ಪ್ರತಾಪ್ ಪೆರಿಯಡ್ಕ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಅಧ್ಯಕ್ಷ ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಕಲ್ಯಾಟೆ, ಕೋಶಾಧಿಕಾರಿ ಯತೀಶ್ ಶೆಟ್ಟಿ ಉಪ್ಪಿನಂಗಡಿ, ಸಹ ಸಂಚಾಲಕರಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಗೌರವ ಸಲಹೆಗಾರರಾದ ವಿದ್ಯಾಧರ ಜೈನ್, ಕೆ.ಟಿ. ಪೂಜಾರಿ ಹಿರೇಬಂಡಾಡಿ, ಕೃಷ್ಣರಾವ್ ಆರ್ತಿಲ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಜಗೋಪಾಲ ಹೆಗ್ಡೆ, ಉಪಾಧ್ಯಕ್ಷರಾದ ನಟೇಶ್ ಪೂಜಾರಿ ಪುಳಿತ್ತಡಿ, ರವೀಂದ್ರ ರೈ ಹಿರೇಬಂಡಾಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಗುರುರಾಜ್ ಭಟ್ ನೆಕ್ಕಿಲಾಡಿ, ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲ್, ಕಿಶೋರ್ ಶಾಂತಿನಗರ, ಚಿನ್ಮಯ ಪದಾಳ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಜನಾರ್ದನ ಕುಲಾಲ್ ಹರಿನಗರ, ಮಹೇಂದ್ರವರ್ಮ ಬಜತ್ತೂರು, ಧರ್ಣಪ್ಪ ನಾಯ್ಕ, ರಮೇಶ್ ಬಂಡಾರಿ, ಶಿವಾನಂದ ಕಜೆ ನೆಕ್ಕಿಲಾಡಿ, ರಾಮಚಂದ್ರ ಗೌಡ ನೆಡ್ಚಿಲ್, ಉಮೇಶ್ ಕೋಡಿಜಾಲು, ಸದಾನಂದ ಶೆಟ್ಟಿ ಕಿಂಡೋವು, ಮಹಾಲಿಂಗ ಕಜೆಕ್ಕಾರು, ಉಮೇಶ್ ನಟ್ಟಿಬೈಲು, ಹರೀಶ ನಾಯಕ್ ನಟ್ಟಿಬೈಲು, ಚಂದ್ರಶೇಖರ ಮಡಿವಾಳ, ದುರ್ಗಾಪ್ರಸಾದ್ ಬೊಳ್ಳಾವು, ಕಿರಣ್ ಗೌಂಡತ್ತಿಗೆ, ವಿಜಿತ್ ಕುಮಾರ್ ನೇಜಿಕಾರು, ಮನೀಶ್ ಕುಮಾರ್, ಕೈಲಾರ್ ರಾಜಗೋಪಾಲ ಭಟ್, ಸುರೇಶ್ ನಲಿಕೆಮಜಲು, ರಾಜೇಶ್ ಶಾಂತಿನಗರ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ನಿರ್ದೇಶಕ ಪ್ರವೀಣ್ ಶೆಟ್ಟಿ ತಿಂಗಳಾಡಿ, ರವಿಕುಮಾರ್ ರೈ ಕೆದಂಬಾಡಿಮಠ ಮತ್ತಿತರರು ಉಪಸ್ಥಿತರಿದ್ದರು.

ಅಡೆತಡೆಗಳ ಮಧ್ಯೆಯೂ ಯಶಸ್ಸು: ಚಂದಪ್ಪ ಮೂಲ್ಯ
ಉಪ್ಪಿನಂಗಡಿಯಲ್ಲಿ ನಾಗಮಂಡಲ ಆಯೋಜನೆಗೆ ಹಲವು ಅಡೆತಡೆಗಳು ಎದುರಾಗಿದ್ದವು. ಆದರೆ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕಾರ್ಯಕ್ರಮ ಯಶಸ್ವಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂಗಳು ಧರ್ಮ ಸಂರಕ್ಷಣೆಗಾಗಿ ನಾವೆಲ್ಲಾ ಒಂದಾಗಿರುತ್ತೇವೆ ಎಂಬ ಸಂದೇಶವನ್ನು ಇಲ್ಲಿ ನೀಡಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸುಮಾರು ಒಂದು ತಿಂಗಳಿಂದ ನಾಗಮಂಡಲೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪುತ್ತಿಲ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು, ಹಿಂದೂ ಸಂಘಟನೆಯ ಕಾರ್ಯಕರ್ತರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಗಲಿರುಳು ದುಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ನಾಗಮಂಡಲೋತ್ಸವ ಸಮಿತಿಯ ಅಧ್ಯಕ್ಷ ಚಂದಪ್ಪ ಮೂಲ್ಯ ಈ ಸಂದರ್ಭ ತಿಳಿಸಿದರಲ್ಲದೆ, ಎ.7ರ ಸಂಜೆಯವರೆಗೆ ನಾಗಮಂಡಲೋತ್ಸವ ಕಾರ್ಯಾಲಯ ತೆರೆದಿರುತ್ತದೆ. ನಾಗಮಂಡಲ ಸೇವೆ ಮಾಡಿಸಿದ ಭಕ್ತಾದಿಗಳು ಇಲ್ಲಿ ಬಂದು ಪ್ರಸಾದ ಸ್ವೀಕರಿಸಬಹುದು ಎಂದು ತಿಳಿಸಿದರು.

ನಸುಕಿನ ಜಾವದವರೆಗೆ ಅನ್ನದಾಸೋಹ
ಎ.5ರ ರಾತ್ರಿ 8.30ಗೆ ಅನ್ನಸಂತರ್ಪಣೆ ಆರಂಭಗೊಂಡಿದ್ದು, ಎ.೬ರ ನಸುಕಿನ ಜಾವ ಎರಡು ಗಂಟೆಯವರೆಗೂ ನಡೆಯಿತು. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಈ ಸಂದರ್ಭ ಅನ್ನಪ್ರಸಾದ ಸ್ವೀಕರಿಸಿದರು. ಅನ್ನ ಪ್ರಸಾದ ವಿತರಣೆಯಲ್ಲಿ ಸಮಿತಿಯು ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದ್ದು, ಇದರಿಂದಾಗಿ ಭಕ್ತಾದಿಗಳಿಗೆ ಯಾವುದೇ ಕುಂದುಕೊರತೆಯಾಗದಂತೆ ಅನ್ನಪ್ರಸಾದ ವಿತರಣೆಯಾಯಿತು. ಎ.5ರ ಸಂಜೆ 3ರಿಂದ 7ರವರೆಗೆ ಬಿಸಿಬಿಸಿಯಾದ ಸೆಟ್ ದೋಸೆಯನ್ನು ಸ್ಥಳದಲ್ಲೇ ಮಾಡಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಕಲ್ಲಂಗಡಿ ಜ್ಯೂಸ್ ಕೂಡಾ ನೀಡಲಾಯಿತು. ಸುಮಾರು 5 ಸಾವಿರ ಮಂದಿಯಷ್ಟು ಭಕ್ತಾದಿಗಳು ಇದನ್ನು ಸವಿದರು. ನಾಗಮಂಡಲ ಆರಂಭವಾದ ಬಳಿಕ ಭಕ್ತಾದಿಗಳು ಕುಳಿತ್ತಲ್ಲಿಗೆ ನೀರಿನ ಬಾಟಲಿ ಹಾಗೂ ಬನ್‌ಗಳನ್ನು ಸಮಿತಿಯವರು ವಿತರಿಸುತ್ತಿದ್ದರು. ನಾಗಮಂಡಲ ನಡೆಯುತ್ತಿರುವಾಗ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನಡೆದಿದ್ದು, ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದವು. ನಾಗಮಂಡಲ ಸೇವೆ ನೋಡಲು ಕೇವಲ ದ.ಕ. ಜಿಲ್ಲೆಯಲ್ಲದೇ, ಕೇರಳದಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಅಭೂತಪೂರ್ಣ ಜನಸಂದಣಿಗೆ ಈ ನಾಗಮಂಡಲ ಸೇವೆಯು ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here