ಹಳೆನೇರೆಂಕಿ ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡರಿಗೆ ಮುಂಭಡ್ತಿ, ಕಾವು ಶಾಲೆಗೆ ವರ್ಗಾವಣೆ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ ಅವರಿಗೆ ಮುಂಭಡ್ತಿಯಾಗಿದ್ದು ಪುತ್ತೂರು ತಾಲೂಕಿನ ಕಾವು ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ಹಿರಿಯ ಶ್ರೇಣಿಯ ಮುಖ್ಯಗುರುಗಳಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದಾರೆ.


ವೈ.ಸಾಂತಪ್ಪ ಗೌಡ ಅವರು 1988ರಲ್ಲಿ ಇಡ್ಕಡ್ಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಬಳಿಕ ಕುಂತೂರು ಪದವು, ಇಡಾಳ, ಕುಂಡಾಜೆ, ಕೆಮ್ಮಾರ, ಸಬಳೂರು, ಬಂಟ್ವಾಳ ತಾಲೂಕಿನ ಅನಂತಾಡಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಮುಖ್ಯಶಿಕ್ಷಕರಾಗಿ ಭಡ್ತಿ ಹೊಂದಿ ಉಪ್ಪಿನಂಗಡಿ ಮಠ, ಆಲಂತಾಯ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಲಂಕಾರು ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ೩೮ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದ.ಕ.ಜಿಲ್ಲೆ ಇದರ ಚೊಚ್ಚಲ ಜಿಲ್ಲಾ ಸಮಾವೇಶದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಡ ಮಕ್ಕಳ ಕಲಿಕೆಗೆ ಉಚಿತ ಬರೆಯುವ ಪುಸ್ತಕ, ಮಕ್ಕಳ ಕಲಿಕೆಗೆ ಬೇಕಾಗುವ ಪೂರಕ ವ್ಯವಸ್ಥೆ, ಕೆಲಸ ಮಾಡಿದ ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮಾಡಿದ್ದಾರೆ. ನಾಟಕ, ಯಕ್ಷಗಾನ, ಹಾಡುಗಾರಿಕೆ, ಕೃಷಿ ಹೀಗೆ ಹಲವಾರು ರಂಗದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.


ಇವರು ಕಡಬ ತಾಲೂಕು ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷರಾಗಿ, ಕಡಬ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘದ ನಾಮನಿರ್ದೇಶನ ಸದಸ್ಯರಾಗಿ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ, ಕೆಮ್ಮಾರ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸದ್ದಾರೆ.


ಇಡಾಳ ದೊಡ್ಡಮನೆ ಮೋನಪ್ಪ ಗೌಡ ಹಾಗೂ ಮೋನಕ್ಕ ದಂಪತಿಯ ಪುತ್ರರಾದ ವೈ.ಸಾಂತಪ್ಪ ಗೌಡ ಅವರು, ಇಡ್ಯಡ್ಕ, ಚಾರ್ವಾಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ.ಪೂ.ಶಿಕ್ಷಣ ಪಡೆದು ಮಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here