







ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟ ಸಮಾಜದ ಬಹಿರಂಗ ಅಧಿವೇಶನವು ಎ.12ರಂದು ಬೆಳಗ್ಗೆ ಗಂಟೆ 9ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಬಂಟರ ಯಾನೆ ನಾಡವ ಮಾತೃ ಸಂಘದ ಉಪಾಧ್ಯಕ್ಷ ಎ.ಹೇಮನಾಥ ಶೆಟ್ಟಿ ಕಾವು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ದಕ್ಷಿಣ, ಉಡುಪಿ, ಕಾಸರಗೋಡಿನ ಸುಮಾರು 33 ಸಾವಿರ ಸದಸ್ಯರು ಮತ್ತು ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಮತ್ತು ರಾಜೇಶ್ ರೈ ಕಲ್ಲಂಗಳ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಡ್ಮಾನ್ ಮೋಹನದೇವ ಆಳ್ವ, ಡಾ. ಎಮ್. ಕೆ.ಶೈಲಜಾ ಆಳ್ವ ಗೌರವ ಉಪಸ್ಥಿತಿಯಲ್ಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.



ಪ್ರಶಸ್ತಿ ಪ್ರದಾನ, ಸನ್ಮಾನ:
ಡಾ. ಕೊಡ್ಮಾನ್ ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ಅವರ ಸ್ಮರಣಾರ್ಥವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ಮಾಡಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ನಿಟ್ಟೆ ಯುನಿವರ್ಸಿಟಿಯ ಉಪಾಧ್ಯಕ್ಷರಾಗಿರುವ ನಿಕಟಪೂರ್ವ ಉಪಕುಲಪತಿ ಡಾ. ಸತೀಶ್ ಭಂಡಾರಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಶು ವೈದ್ಯಕೀಯ ಮಹಾ ವಿದ್ಯಾಲಯ ಬೆಂಗಳೂರು ಇದರ ಮಾಜಿ ಡೀನ್ ಪ್ರೊ. ವಸಂತ ಶೆಟ್ಟಿ ಮುಳ್ಳಾಡ್, ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿ ಕೆ.ಉಷಾ ಪಿ. ರೈ, ಸಂಗೀತ ಕ್ಷೇತ್ರದಲ್ಲಿ ಖ್ಯಾತ ಗಾಯಕ ಗುರುಕಿರಣ್ ಶೆಟ್ಟಿ, ನೃತ್ಯ ಕ್ಷೇತ್ರದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆಯಾಗಿರುವ ಪುತ್ತೂರಿನ ವಿಶ್ವಕಲಾನಿಕೇತನ ನೃತ್ಯ ಅಕಾಡೆಮಿಯ ವಿದುಷಿ ನಯನ ವಿ ರೈ, ದೇಶ ಸೇವೆಯಲ್ಲಿ ನಿವೃತ್ತ ಸೇನಾಧಿಕಾರಿ ಅಜಿತ್ ಕುಮಾರ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕಬಡ್ಡಿ ಆಟಗಾರ ಪುತ್ತೂರಿನ ಪ್ರಶಾಂತ್ ರೈ ಮತ್ತು ಅಂತರಾಷ್ಟ್ರೀಯ ಈಜು ಪಟು ಚಿಂತನ್ ಎಸ್ ಶೆಟ್ಟಿಯವರಿಗೆ ಬಂಗಾರದ ಪದಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದೇ ರೀತಿ ಕೈಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ಮುಂಬೈ ವಿಶ್ವಾತ್ ಕೆಮಿಕಲ್ಸ್ನ ಆಡಳಿತ ನಿರ್ದೇಶಕ ವಿವೇಕ್ ಶೆಟ್ಟಿ ಬೊಳ್ಯಗುತ್ತು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರದಲ್ಲಿ ಪುತ್ತೂರಿನ ಕೆ.ಕೆ.ಶೆಟ್ಟಿ ಕುತ್ತಿಕಾರ್, ಕೈಗಾರಿಕಾ ಕ್ಷೇತ್ರದಲ್ಲಿ ಕರುಣಾಕರ ಶೆಟ್ಟಿ, ಸಹಕಾರಿ ಕ್ಷೇತ್ರದಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಅತಿಥ್ಯ ಉದ್ಯಮ ಕ್ಷೇತ್ರದಲ್ಲಿ ವೇಣುಗೋಪಾಲ್ ಎಲ್ ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ನ ಮಾಲಕ ಮುಗ್ರೋಡಿ ಸುಧಾಕರ್ ಶೆಟ್ಟಿ, ಸಂಶೋಧನೆಯಲ್ಲಿ ಡಾ. ನವೀನ್ಚಂದ್ರ ಶೆಟ್ಟಿ, ದೈವಾರಾಧನೆಯಲ್ಲಿ ಡಾ. ಅಶೋಕ್ ಆಳ್ವ, ಸಮಾಜ ಸೇವೆಯಲ್ಲಿ ಕೆಂಚಿನೂರು ಸೋಮಶೇಖರ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ದಿನೇಶ್ ಆಳ್ವ, ಕೃಷಿ ಕ್ಷೇತ್ರದಲ್ಲಿ ಮುರ ಸದಾಶಿವ ಶೆಟ್ಟಿ, ಕೃಷಿಕ್ಷೇತ್ರದ ಬೆಳವಣಿಗೆಯಲ್ಲಿ ಡಾ. ಸರಿತಾ ಹೆಗ್ಡೆ, ಉತ್ಪಾದನಾ ಕ್ಷೇತ್ರದಲ್ಲಿ ರವೀಂದ್ರನಾಥ ಮಾರ್ಲ ಅವರನ್ನು ಸನ್ಮಾನಿಸಲಾಗುವುದು. ಇದರ ಜೊತೆಗೆ ಕೊಡಿಯಾಲ್ಗುತ್ತು ಭಾಸ್ಕರ ರೈ ಸ್ಮರಣಾರ್ಥ ಕಲೆ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾಗಿ ಪಿ.ಕಿಶನ್ ಹೆಗ್ಡೆ ಅವರನ್ನು ಸನ್ಮಾನಿಸಲಾಗುವುದು ಎಂದ ಅವರು ಕಾರ್ಯಕ್ರಮಕ್ಕೆ ಪುತ್ತೂರು ಬಂಟರ ಸಂಘದಲ್ಲಿ ಸುಮಾರು 2500 ಮಂದಿ ಸದಸ್ಯರಿದ್ದು ಎಲ್ಲರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಬಂಟರ ಯಾನೆ ನಾಡವ ಮಾತೃ ಸಂಘದ ತಾಲೂಕು ಸಮಿತಿ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿರ್ದೇಶಕರಾದ ಶಿವನಾಥ ರೈ ಮೇಗಿನಗುತ್ತು, ನಿತ್ಯಾನಂದ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ತಾಲೂಕು ಸಮಿತಿ ಸಂಚಾಲಕ ದುರ್ಗಾಪ್ರಸಾದ್ ರೈ ಕುಂಬ್ರ ಅವರು ಉಪಸ್ಥಿತರಿದ್ದರು.
ಎ.14ಕ್ಕೆ ಬಂಟರ ಭವನದಲ್ಲಿ ಕಟೀಲು ಶ್ರೀ ದೇವಿ ಮಹಾತ್ಮೆಯ ಯಕ್ಷಗಾನ
ಪುತ್ತೂರು ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎ.14ರಂದು ಶ್ರೀ ದೇವರು ಪೇಟೆ ಸವಾರಿ ವೇಳೆ ರಾತ್ರಿ ಗಂಟೆ 9ಕ್ಕೆ ಬಂಟರ ಭವನದ ರಸ್ತೆಯಾಗಿ ಬರಲಿದ್ದಾರೆ. ಈ ವೇಳೆ ಬಂಟರ ಸಂಘದಿಂದ ಕಟೀಲು ಶ್ರೀ ದೇವಿ ಮಹಾತ್ಮೆಯ ಯಕ್ಷಗಾನ ಸೇವೆಯನ್ನು ಸಮಾಜ ಬಾಂಧವರು ಮಾಡಲಿದ್ದಾರೆ. ಇದರಲ್ಲಿ ಸಂಘದ ಎಲ್ಲಾ ಸದಸ್ಯರು ಸೇವಾರ್ಥಿಗಳಾಗುವಂತೆ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಎ.ಹೇಮನಾಥ ಶೆಟ್ಟಿ ಕಾವು ಅವರು ವಿನಂತಿಸಿದ್ದಾರೆ.
ಎಸ್ಎಸ್ಎಲ್ ಸಿ ಆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಬೆಂಗಳೂರು ಬಂಟ ಸಮಾಜದ ಆತಿಥ್ಯದಲ್ಲಿ ಸಮಾಜ ಬಾಂಧವ ಎಸ್ಎಸ್ಎಲ್ಸಿ ಆದ ವಿದ್ಯಾರ್ಥಿಗಳಿಗೆ 2 ವರ್ಷಗಳ ’ಸಂಕಲ್ಪ’ ಎಂಬ ಹೆಸರಿನಲ್ಲಿ ಪಿಯುಸಿ ಶಿಕ್ಷಣವನ್ನು ಬೆಂಗಳೂರಿನಲ್ಲಿ ಉಚಿತವಾಗಿ ಕೊಡುವ ಯೋಜನೆಯಿದೆ. ಇದು ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಇದ್ದವರು ಈ ಯೋಜನೆಗೆ ಅರ್ಹರಾಗಿದ್ದು, ಅತೀ ಕಡುಬಡವರಿದ್ದವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡಲಾಗುವುದು. ಈ ಯೋಜನೆಗೆ ಅರ್ಜಿಯು ಸಂಘದ ಕಚೇರಿ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದೊರೆಯುತ್ತದೆ. ಎ.26ಕ್ಕೆ ಇದಕ್ಕೆ ಪ್ರವೇಶ ಪರೀಕ್ಷೆಯು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ. ಕೊಡಗು, ಸುಳ್ಯ, ಕಡಬ ಭಾಗದ ಸಮಾಜ ಬಾಂಧವ ಅಭ್ಯರ್ಥಿಗಳಿಗೆ ಪುತ್ತೂರು ಪರೀಕ್ಷಾ ಕೇಂದ್ರ ಸ್ಥಾನವಾಗಿದೆ.
ಹೇಮನಾಥ ಶೆಟ್ಟಿ ಕಾವು ಉಪಾಧ್ಯಕ್ಷರು
ಬಂಟರ ಯಾನೆ ನಾಡವರ ಮಾತೃ ಸಂಘ










