






ಉಪ್ಪಿನಂಗಡಿ: ಎಳವೆಯಲ್ಲಿಯೇ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸೂರ್ತಿಯಾಗಿರಿಸಿಕೊಂಡು ನಾನು ಕೂಡಾ ಅವರಂತೆಯೇ ಕ್ರಿಕೆಟಿಗನಾಗಬೇಕೆಂದು ಆಸೆ ಪಟ್ಟಿದ್ದ ಉಪ್ಪಿನಂಗಡಿಯ ಕನಸ ಕಂಗಳ ಹುಡುಗನ ಅವಿರತ ಶ್ರಮಕ್ಕೆ ಈಗ ಫಲ ಸಿಕ್ಕಿದ್ದು, ಇಲ್ಲಿನ ಲಕ್ಷ್ಮೀನಗರದ ನಿವಾಸಿ ಎಸ್. ತೇಜಸ್ವಿ ಸೂರ್ಯಂಬೈಲ್ ದೆಹಲಿಯ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಪ್ರತಿಷ್ಠಿತ ಸೂರ್ಯಂಬೈಲ್ ಮನೆತನದ ಶಿವ ಭಟ್ ಮತ್ತು ಲತಾ ಶಿವ ಭಟ್ ದಂಪತಿಯ ಪುತ್ರ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ದಿ. ಡಾ| ಗೋವಿಂದ ಭಟ್ ಸೂರಿಕುಮೇರು ಅವರ ಮೊಮ್ಮಗನಾಗಿರುವ ಎಸ್. ತೇಜಸ್ವಿಯವರು ಬಾಲ್ಯದಲ್ಲಿಯೇ ಕ್ರಿಕೆಟ್ನ ಬಗ್ಗೆ ಆಸಕ್ತಿ ಹೊಂದಿದ್ದವರು. ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಕ್ರಿಕೆಟ್ನ ಧ್ರುವತಾರೆಯೆನಿಸಿಕೊಂಡ ಸಚಿನ್ ತೆಂಡುಲ್ಕರ್ ಅವರನ್ನು ಅತಿಯಾಗಿ ಮೆಚ್ಚಿಕೊಂಡು ತಾನು ಕೂಡಾ ಇವರಂತೆಯೇ ಭವಿಷ್ಯದಲ್ಲಿ ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡವರು. ಇವರ ಈ ಕನಸಿಗೆ ತಂದೆ, ತಾಯಿ, ಅಜ್ಜ ಹಾಗೂ ಇವರ ಕುಟುಂಬಸ್ಥರು ಪ್ರೋತ್ಸಾಹ ನೀಡಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ ತೇಜಸ್ವಿಯವರು ಬಳಿಕ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದರು. ಶಿಕ್ಷಣದೊಂದಿಗೆ ಪುತ್ತೂರಿನ ಸುದಾನ ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ತರಬೇತಿಗೂ ಸೇರಿಕೊಂಡು ತನ್ನೊಳಗೆ ಹುದುಗಿದ್ದ ಕ್ರೀಡೆಯನ್ನು ಅನಾವರಣಗೊಳಿಸಿದರು. ಇವರೊಬ್ಬ ಅಲ್ರೌಂಡರ್ ಕ್ರೀಡಾಪಟುವಾಗಿದ್ದು, ಅದರಲ್ಲೂ ಅತ್ಯುತ್ತಮ ಬ್ಯಾಟ್ಸ್ಮೆನ್ ಆಗಿದ್ದಾರೆ. 19ರ ಹರೆಯದ ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸದಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ದೆಹಲಿಯ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇವರ ಅಣ್ಣ ಶ್ರೀಚರಣ ಮಂಗಳೂರಿನ ಎಸ್ಡಿಎಂ ಲಾ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಈ ಸಾಧನೆ ಉಪ್ಪಿನಂಗಡಿಯ ಹಿರಿಮೆಗೊಂದು ಗರಿಯಾಗಿದ್ದು, ಇವರು ಕ್ರಿಕೆಟ್ ಲೋಕದಲ್ಲಿ ಇವರು ಇನ್ನಷ್ಟು ಪ್ರಜ್ವಲಿಸಲಿ ಎಂಬುದು ಇವರ ಹಿತೈಷಿಗಳ ಆಶಯ.













