ಬೈತಡ್ಕ ಉರೂಸ್ ಸಂಭ್ರಮಕ್ಕೆ ಅರ್ಥಪೂರ್ಣ ಕೊಡುಗೆ

0

10 ಬಡ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಾಣ
ಹತ್ತೂರಿಗೂ ಮಾದರಿಯಾದ ಯೋಜನೆ-ವ್ಯಾಪಕ ಪ್ರಶಂಸೆ

ವರದಿ : ಯೂಸುಫ್ ರೆಂಜಲಾಡಿ


ಪುತ್ತೂರು: ಇತಿಹಾಸ ಪ್ರಸಿದ್ಧ ಬೈತಡ್ಕ ದರ್ಗಾ ಶರೀಫ್ ಉರೂಸ್ ಪ್ರಯುಕ್ತ ಮಾದರಿ ಯೋಜನೆಯೊಂದನ್ನು ರೂಪಿಸಿ ಸಮಾಜಕ್ಕೆ ಸಮರ್ಪಿಸುತ್ತಿದ್ದು ಬಡವರ ಪರವಾಗಿ ಹಮ್ಮಿಕೊಂಡಿರುವ ಈ ಯೋಜನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.


ಬೈತಡ್ಕ ದರ್ಗಾ ಶರೀಫ್ ಉದಯಸ್ತಮಾನ ಉರೂಸ್ ಸಮಾರಂಭ ಎ.17ರಿಂದ ಎ.26ರ ವರೆಗೆ ನಡೆಯಲಿದ್ದು ಆ ಪ್ರಯುಕ್ತ ‘ಬೈತುಲ್ ಮಶ್ಹೂರ್ ಹೌಸಿಂಗ್ ಪ್ರಾಜೆಕ್ಟ್’ ಯೋಜನೆಯಲ್ಲಿ 10 ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಿದೆ.

ಏನಿದು ಮಾದರಿ ಯೋಜನೆ:
ಉರೂಸ್ ಎಂದರೆ ಸಾಮಾನ್ಯವಾಗಿ ಆಯಾ ದರ್ಗಾಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಮತಪ್ರಭಾಷಣ ಏರ್ಪಡಿಸುವುದು ಸಾಮಾನ್ಯ. ಉರೂಸ್ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುವುದು, ದರ್ಗಾ ಝಿಯಾರತ್(ಪ್ರಾರ್ಥನೆ) ನಡೆಸುವುದು, ಅನ್ನದಾನ ಸ್ವೀಕರಿಸುವುದು ಇವೆಲ್ಲಾ ಬಹುತೇಕ ಕಡೆಗಳಲ್ಲಿ ಚಾಲ್ತಿಯಲ್ಲಿದೆ. ಆದರ ಆ ಪದ್ದತಿಯ ಜೊತೆಗೆ ಬೈತಡ್ಕ ಉರೂಸ್ ಕಮಿಟಿಯವರು ವಿಭಿನ್ನ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದು ಮಹಾನುಭಾವರಾದ ಔಲಿಯಾರ ಹೆಸರಿನಲ್ಲಿ ನಡೆಸುವ ಉರೂಸ್ ಮಾದರಿಯಾಗಬೇಕು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೀರಾ ಬಡ ಕುಟುಂಬಗಳ ಕಣ್ಣೀರೊರೆಸುವ ಕಾರ್ಯ ಮಾಡಬೇಕು ಎಂಬ ಯೋಜನೆಯೊಂದನ್ನು ಮೂರೂವರೆ ತಿಂಗಳ ಹಿಂದೆ ಹಾಕಿಕೊಂಡಿದ್ದಲ್ಲೇ ಅಂದಿನಿಂದಲೇ ಕಾರ್ಯಪ್ರವೃತ್ತರಾಗಿದ್ದು ಇದೀಗ ಜಮಾಅತ್‌ಗೊಳಪಟ್ಟ ಅರ್ಹ 10 ಕುಟುಂಬಗಳಿಗೆ ಸುಸಜ್ಜಿತವಾದ ಮನೆ ನಿರ್ಮಿಸಿದ್ದಾರೆ.

1 ಕೋಟಿ ರೂ ವೆಚ್ಚದಲ್ಲಿ ಮನೆ ನಿರ್ಮಾಣ:
10 ಕುಟುಂಬಗಳಿಗೆ ತಲಾ ರೂ 10 ಲಕ್ಷ ವೆಚ್ಚದ ಮನೆಯನ್ನು ಈಗಾಗಲೇ ನಿರ್ಮಿಸಲಾಗಿದ್ದು ಒಟ್ಟು ರೂ.1 ಕೋಟಿ ವೆಚ್ಚ ತಗುಲಿದೆ. ಸುಂದರವಾದ ಮನೆಯ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ(ಉರೂಸ್‌ಗೆ ಮೊದಲು) ಹಸ್ತಾಂತರ ಕಾರ್ಯಕ್ರಮ ಕೂಡಾ ನಡೆಯಲಿದೆ. 1 ಕೋಟಿ ವೆಚ್ಚದ ಯೋಜನೆ ‘ನಮ್ಮಿಂದ ಸಾಧ್ಯವಾ? ಎಂದು ಯೋಚಿಸದೆ ‘ನಮ್ಮಿಂದ ಸಾಧ್ಯವಿದೆ’ ಎನ್ನುವ ಧನಾತ್ಮಕ ಚಿಂತನೆಯೊಂದಿಗೆ ಕಾರ್ಯಪ್ರವೃತ್ತರಾದ ಉರೂಸ್ ಸಮಿತಿಯವರು ಬೃಹತ್ ಯೋಜನೆಯನ್ನು ಸಾಧಿಸಿ ತೋರಿಸಿದ್ದಾರೆ.

ಅರ್ಹ ಕುಟುಂಬಗಳಿಗೆ ಸೂರುಭಾಗ್ಯ:
ಉರೂಸ್ ಕಮಿಟಿಯವರು ಇಂತಹದ್ದೊಂದು ಯೋಜನೆಯನ್ನು ಹಾಕಿದಾಗ ಕಮಿಟಿಯವರಿಗೆ 20ಕ್ಕೂ ಮೇಲ್ಪಟ್ಟು ಅರ್ಜಿಗಳು ಬಂದಿದ್ದು ಮನೆ ನಿರ್ಮಿಸಿಕೊಡುವಂತೆ ಹಲವು ಕುಟುಂಬಗಳು ಕೇಳಿಕೊಂಡಿದ್ದರು. ಆದರೆ ಕಮಿಟಿಯವರು ಅತೀ ಅರ್ಹ ಮತ್ತು ಮನೆಯ ಕನಸನ್ನೇ ಬಿಟ್ಟಿದ್ದ 10 ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದಾರೆ. ವಿಧವೆಯರು, ಬಾಡಿಗೆ ಮನೆಯಲ್ಲೇ ದಿನದೂಡುವವರು, ಮನೆಯ ಆಧಾರಸ್ಥಂಭವನ್ನು ಕಳೆದುಕೊಂಡವರು ಸೇರಿದಂತೆ ಅರ್ಹ 10 ಕುಟುಂಗಳನ್ನು ಆಯ್ಕೆ ಮಾಡಿ ಮನೆಯನ್ನು ನಿರ್ಮಿಸಲಾಗಿದೆ. ಮನೆ ನಿರ್ಮಾಣದ ಕನಸಿನ ಯೋಜನೆಯನ್ನು ನನಸಾಗಿಸಲು ಉರೂಸ್ ಕಮಿಟಿ, ಜಮಾಅತ್ ಕಮಿಟಿ, ಜಮಾಅತ್ ಅಧೀನದಲ್ಲಿರುವ ಕಮಿಟಿಗಳು, ಜಮಾಅತರು ಮತ್ತು ಹೊರ ಜಮಾಅತರು, ದಾನಿಗಳು ಸಹಕಾರ ನೀಡಿದ್ದಾರೆ.

ಮನೆ ಹೇಗಿದೆ ಗೊತ್ತೇ..?
10 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಆರ್‌ಸಿಸಿ ಮನೆ ನೋಡಲು ಬಹಳ ಸುಂದರವಾಗಿದ್ದು ಮನೆಯ ವ್ಯವಸ್ಥೆಗಳೂ ಅಚ್ಚುಕಟ್ಟಾಗಿದೆ. ಮನೆಯಲ್ಲಿ 2 ಬೆಡ್‌ರೂಂ, ಡೈನಿಂಗ್ ಹಾಲ್, ಲಿವಿಂಗ್ ರೂಂ, ಕಿಚನ್, ಸಿಟ್‌ಔಟ್, ಹೊರಗೆ ಮತ್ತು ಒಳಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆಯಿದೆ. ನೆಲಕ್ಕೆ ಸಂಪೂರ್ಣವಾಗಿ ಟೈಲ್ಸ್ ಅಳವಡಿಸಲಾಗಿದ್ದು ನೀರಿನ ಟ್ಯಾಂಕ್ ಕೂಡಾ ಅಳವಡಿಸಲಾಗಿದೆ. ಒಟ್ಟಿನಲ್ಲಿ ವ್ಯವಸ್ಥಿತವಾದ, ನೋಡಲು ಆಕರ್ಷಕವಾದ ಮನೆಯನ್ನು ಉರೂಸ್ ಕಮಿಟಿಯವರು ನಿರ್ಮಿಸಿದ್ದು ಮನೆಗೆ ಅಳವಡಿಸಲಾಗಿರುವ ಪ್ರತೀ ಐಟಂಗಳು ಕೂಡಾ ಗುಣಮಟ್ಟ ಮತ್ತು ದೀರ್ಘ ಬಾಳಿಕೆಯದ್ದಾಗಿದೆ ಎಂದು ಉರೂಸ್ ಕಮಿಟಿಯವರು ತಿಳಿಸಿದ್ದಾರೆ.

ಉರೂಸ್ ನೆನಪು ಶಾಶ್ವತವಾಗಿರಲಿದೆ:
ಉರೂಸ್ ಎಂದರೆ ಕೇವಲ ಕೆಲವು ದಿನಗಳ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಸಮಾಜಕ್ಕೆ ಶಾಶ್ವತವಾದ ಸಾರ್ಥಕತೆಯನ್ನು ನೀಡಬೇಕು ಎಂಬುವುದು ನಮ್ಮ ಉದ್ದೇಶವಾಗಿದ್ದು ಈ ಮೂಲಕ ನಮ್ಮ ಜಮಾಅತ್ ವ್ಯಾಪ್ತಿಯಲ್ಲಿ ಸ್ವಂತ ಸೂರಿಲ್ಲದ ಹತ್ತು ಬಡ ಕುಟುಂಬಗಳ ಕಣ್ಣೀರು ಒರೆಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ವೇದಿಕೆಯ ಸಂಭ್ರಮಗಳು ಮರೆತು ಹೋದರೂ, ಈ ಮನೆಗಳು ದಶಕಗಳ ಕಾಲ ಆ ಕುಟುಂಬಗಳಿಗೆ ಆಸರೆಯಾಗಿ ನಿಲ್ಲುವ ಮೂಲಕ ಉರೂಸ್‌ನ ನೆನಪನ್ನು ಶಾಶ್ವತವಾಗಿರಿಸಲಿವೆ. ನಮ್ಮ ಈ ’ಬೈತುಲ್ ಮಶ್‌ಹೂರ್’ ಯೋಜನೆ ಇತರ ಮೊಹಲ್ಲಾಗಳಿಗೂ ಮಾದರಿಯಾಗಲಿ ಎಂಬುವುದು ನಮ್ಮ ಆಶಯವಾಗಿದೆ.
-ಬಿ.ಪಿ ಅಬ್ದುಲ್ ಹಮೀದ್ ಹಾಜಿ ಬೈತಡ್ಕ
ಅಧ್ಯಕ್ಷರು, ಉದಯಾಸ್ತಮಾನ ಉರೂಸ್ ಸಮಿತಿ ಬೈತಡ್ಕ

ಬಡವರ ಪರವಾದ ಮಾದರಿ ಯೋಜನೆ:
ಬೈತಡ್ಕ ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬಹಳ ಇತಿಹಾಸ ಹೊಂದಿರುವ ಪುಣ್ಯ ಸ್ಥಳವಾಗಿದ್ದು ಇಲ್ಲಿಗೆ ಎಲ್ಲಾ ಜಾತಿ, ಮತ, ಧರ್ಮಗಳ ಜನರು ಆಗಮಿಸಿ ಪ್ರಾರ್ಥಿನೆ ಸಲ್ಲಿಸಿ ತಮ್ಮ ಕಷ್ಟ-ದುಖಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಈ ಬಾರಿಯ ಉರೂಸ್ ಪ್ರಯುಕ್ತ 10 ಬಡ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿಕೊಡುವ ಬಹುದೊಡ್ಡ ಹೌಸಿಂಗ್ ಪ್ರಾಜೆಕ್ಟ್ ಹಮ್ಮಿಕೊಂಡಿದ್ದೇವೆ. ಈಗಾಗಲೇ ಅದರ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಉರೂಸ್‌ಗೆ ಮೊದಲು ಮನೆ ಹಸ್ತಾಂತರ ಕಾರ್ಯ ನಡೆಯಲಿದೆ. ಬಡವರ ಪರವಾಗಿ ಹಮ್ಮಿಕೊಂಡ ಈ ಯೋಜನೆ ಮಾದರಿ ಯೋಜನೆಯಾಗಿ ನೆನಪಿನಲ್ಲಿ ಉಳಿಯಲಿದೆ.
-ಪಿ.ಬಿ ಮಹಮ್ಮದ್ ಇಕ್ಬಾಲ್
ಅಧ್ಯಕ್ಷರು ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ

ಬಡ ಕುಟುಂಬಕ್ಕೆ ಜಾಗ ದಾನ ಮಾಡಿದ ಡಾ.ಉದಯ ಕುಮಾರ್..!
ಬೆಳಂದೂರಿನ ಅತೀ ಬಡ ಕುಟುಂಬವೊಂದು ಮನೆ ಪಡೆಯಲು ಎಲ್ಲ ಅರ್ಹತೆ ಹೊಂದಿದ್ದರೂ ಸ್ವಂತ ಜಾಗ ಇಲ್ಲದ ಕಾರಣಕ್ಕೆ ಮನೆ ಪಡೆಯುವುದು ಅಸಾಧ್ಯ ಎಂಬಂತಿತ್ತು. ಈ ವಿಚಾರ ತಿಳಿದ ಕಾಣಿಯೂರಿನ ಜನಪ್ರಿಯ ವೈದ್ಯ ಉದಯಕುಮಾರ್ ಎಂಬವರು ಬೆಳಂದೂರಿನಲ್ಲಿರುವ ತಮ್ಮ ಜಾಗದಲ್ಲಿ 5 ಸೆಂಟ್ಸ್ ಜಾಗವನ್ನು ಆ ಬಡ ಕುಟುಂಬಕ್ಕೆ ದಾನವಾಗಿ ನೀಡಿದ್ದು ಇದರಿಂದಾಗಿ ಆ ಕುಟುಂಬಕ್ಕೂ ಮನೆ ಸಿಕ್ಕಿದೆ. ಡಾ.ಉದಯಕುಮಾರ್ ಅವರು ಜಾತಿ ಮತ ಬೇಧ ನೋಡದೇ ಬಡ ಕುಟುಂಬವೊಂದರ ಸಂಕಷ್ಟಕ್ಕೆ ಸ್ಪಂಧಿಸಿ ಲಕ್ಷಾಂತರ ರೂ ಮೌಲ್ಯ ಇರುವ ೫ ಸೆಂಟ್ಸ್ ಜಾಗವನ್ನು ಬಿಟ್ಟು ಕೊಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದು ಅವರ ಈ ಮಾನವೀಯ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here