






ಪುತ್ತೂರು: ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಶ್ರೀ ವಿ.ಎಸ್. ಭಟ್ಟರು ಆಯ್ಕೆಯಾಗಿದ್ದಾರೆ.


ಎ.12ರಂದು ಪರ್ಲಡ್ಕದಲ್ಲಿರುವ ಭಾಸ್ಕರ ಬಾರ್ಯರ ‘ಅಗಸ್ತ್ಯ’ದಲ್ಲಿ ಸಂಜೆ ಗಂಟೆ 7ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವೇ.ಮೂ.ಕುಂಟಾರು ಶ್ರೀಧರ ತಂತ್ರಿಗಳು ವಿ.ಎಸ್.ಭಟ್ಟರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ. ಬಂಟ್ವಾಳ ತಾಲೂಕು ಕೆದಿಲದ ಶ್ರೀ ವೆಂಕಟೇಶ ಸುಬ್ರಹ್ಮಣ್ಯ ಭಟ್ಟರು (ವಿ.ಎಸ್.ಭಟ್ಟ) 1988ರಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿ ನಿಯಕ್ತಿಯಾಗಿದ್ದು, 2013ರಿಂದ ಪ್ರಧಾನ ಅರ್ಚಕರಾಗಿದ್ದಾರೆ. ಇವರ ತಂದೆ ವೇ.ಮೂ.ಮೈಕೆ ಶಂಕರನಾರಾಯಣ ಭಟ್ಟರು ಶ್ರೇಷ್ಠ ವೈದಿಕ ವಿದ್ವಾಂಸರು. ವಿ.ಎಸ್.ಭಟ್ಟರು ಕೆದಿಲದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಾಲಾ ಕಲಿಕೆಯನ್ನು ಪೂರೈಸಿದ್ದರು. ತಮ್ಮ ಸಾತ್ವಿಕ ವ್ಯಕ್ತಿತ್ವದಿಂದ ಅನೇಕ ಆಸ್ತಿಕರಿಗೆ ಇವರು ಪರಿಚಿತರು. ಹಿಮಾಲಯ, ನೇಪಾಳ, ಉಜ್ಜಯಿನಿ, ಕಾಶಿ, ಅಯೋಧ್ಯೆ, ಪ್ರಯಾಗ, ಕೇದಾರ, ವೈಷ್ಣೋದೇವಿ ಮೊದಲಾದ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡಿದ್ದರು. ಬಾರ್ಯ ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ.













