







ಪುತ್ತೂರು: ಹನುಮಗಿರಿಯನ್ನು ಕರ್ನಾಟಕದ ‘ದಕ್ಷಿಣ ಅಯೋಧ್ಯೆ’ ಎಂದೇ ಪರಿಗಣಿಸಲಾಗುತ್ತದೆ. ಇದು ಶ್ರೀರಾಮನ ಆದರ್ಶಗಳು ಮತ್ತು ಹನುಮಂತನ ಅಖಂಡ ಭಕ್ತಿಯ ಸಂಕೇತವಾಗಿದೆ. ಇಲ್ಲಿನ ಎತ್ತರದ ಗೋಪುರವು ಕೇವಲ ಕಟ್ಟಡವಲ್ಲ, ಬದಲಿಗೆ ಅದು ನಮ್ಮ ಸಂಸ್ಕೃತಿಯ ನಿರಂತರತೆ ಮತ್ತು ಶ್ರದ್ಧೆಯ ಆಳವನ್ನು ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ನೈತಿಕ ಮೌಲ್ಯಗಳು, ಏಕತೆ ಮತ್ತು ಸದ್ಭಾವನೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಅನುಷ್ಠಾನಗಳನ್ನು ನಡೆಸಲಾಗಿದ್ದು, ಈ ಕಾರ್ಯಕ್ರಮವು ಸಮಾಜಕ್ಕೆ ಹಲವಾರು ಮಹತ್ವದ ಸಂದೇಶಗಳನ್ನು ನೀಡಿದೆ. ಹನುಮಂತನಂತೆ ಸೇವೆ, ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗವಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ರವರು ಹೇಳಿದರು.






ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಎ.10ರಂದು ಶ್ರೀ ಕ್ಷೇತ್ರದಲ್ಲಿ ಭವ್ಯವಾದ ಮುಖ ಗೋಪುರ ಮತ್ತು ಮಂಟಪವನ್ನು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಮುಂದಿನ ಪೀಳಿಗೆಗೆ ಸಂಸ್ಕಾರ ನೀಡುವ ಮತ್ತು ಸಮಾಜಕ್ಕೆ ದಾರಿ ತೋರಿಸುವ ಕೇಂದ್ರಗಳಾಗಿವೆ ಎಂದ ರಾಜ್ಯಪಾಲರು, ಕಠಿಣ ಸಂದರ್ಭಗಳಲ್ಲೂ ಸತ್ಯ, ಧರ್ಮ ಮತ್ತು ಮರ್ಯಾದೆಯನ್ನು ಪಾಲಿಸುವುದು ಅತ್ಯಗತ್ಯ ಎಂಬ ಪ್ರೇರಣೆಯನ್ನು ಈ ಕ್ಷೇತ್ರ ನೀಡುತ್ತದೆ ಎಂದರು. ಹನುಮಗಿರಿಯಲ್ಲಿ ನಡೆದ ಈ ಭವ್ಯ ಆಯೋಜನೆಯು ಸನಾತನ ಧರ್ಮದ ಆಸ್ತೆ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವಂತ ಉತ್ಸವವಾಗಿ ಮೂಡಿಬಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವ ಭಕ್ತಿ ಮತ್ತು ದೇಶ ಭಕ್ತಿ ಹನುಮಗಿರಿಯಲ್ಲಿ ಅನಾವರಣಗೊಂಡಿದೆ- ರಾಘವೇಶ್ವರ ಶ್ರೀ
ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ನನಗೆ ಮನಸ್ಸಿಗೆ ಅತೀವ ಮುದ ನೀಡಿದ ಕ್ಷೇತ್ರ ಹನುಮಗಿರಿಯಾಗಿದ್ದು ದೇವ ಭಕ್ತಿ ಮತ್ತು ದೇಶ ಭಕ್ತಿ ಇಲ್ಲಿ ಅನಾವರಣಗೊಂಡಿದೆ. ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಸ್ವಾಮಿಯೊಂದಿಗೆ ಭಾರತ ಮಾತೆಯ ಪರಿಪೂರ್ಣವಾದ ಮಂದಿರ ಇಲ್ಲಿದೆ. ಇದು ದೇಶ ಭಕ್ತಿಯ ಪ್ರತೀಕವಾಗಿದೆ ಎಂದು ಹೇಳಿದರು.ಹನುಮಗಿರಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಇಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ವಿಶೇಷವಾಗಿ ನಾರಿಕೇಳ ಸಮರ್ಪಣೆ ಒಂದು ವಿಶಿಷ್ಟ ಕಾರ್ಯವಾಗಿದೆ. ಅಯೋಧ್ಯೆ ಪುಣ್ಯಕ್ಷೇತ್ರದಿಂದ ಶ್ರೀರಾಮ ಜ್ಯೋತಿ ಹಾಗೇ ಅಂಜನಾದ್ರಿಯಿಂದ ಹನುಮ ಜ್ಯೋತಿಯನ್ನು ಗ್ರಾಮದ ಮನೆಮನೆಗೆ ಮುಟ್ಟಿಸುವ ಕೆಲಸ ನಡೆದಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ಶ್ರೀರಾಮ ಹನುಮರ ಆಶೀರ್ವಾದ ಸಮಸ್ತ ಜನತೆಯ ಮೇಲಿರಲಿ ಎಂದು ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಶುಭ ಹಾರೈಸಿದರು.

ಧಾರ್ಮಿಕ ಪ್ರವಾಸೋದ್ಯಮ, ಭಕ್ತಿಯ ತಾಣವಾಗಿದೆ ಹನುಮಗಿರಿ- ನಳಿನ್ ಕುಮಾರ್ ಕಟೀಲ್: ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತುಳುನಾಡು ಹತ್ತಾರು ಧರ್ಮ ಕ್ಷೇತ್ರಗಳಿರುವ ಧಾರ್ಮಿಕ ನಂಬಿಕೆಯ ತಳಹದಿಯಲ್ಲಿರುವ ನಾಡಾಗಿದೆ. ಹನುಮಗಿರಿ ಬ್ರಹ್ಮಕಲಶೋತ್ಸವವು ಬಹಳಷ್ಟು ವಿಶೇಷತೆಗಳಿಂದ ಕೂಡಿದ್ದು ದೈವಜ್ಞ, ತಂತ್ರಿವರ್ಯರ ಚಿಂತನೆ, ಮಾರ್ಗದರ್ಶನದೊಂದಿಗೆ ೧೫ ವರ್ಷಗಳ ಬಳಿಕ ಪ್ರತಿಷ್ಠ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು. ಹನುಮಗಿರಿಯು ಧಾರ್ಮಿಕ ಪ್ರವಾಸೋದ್ಯಮ ಹೊಂದಿದ ಭಕ್ತಿಯ ತಾಣಾವಾಗಿದೆ. ವಿಶೇಷವಾಗಿ ಭಾರತ ಮಾತೆಯ ಮಂದಿರ ಇರುವ ಏಕೈಕ ಕ್ಷೇತ್ರ ಇದಾಗಿದೆ ಎಂದ ಅವರು, ಬ್ರಹ್ಮಕಲಶೋತ್ಸವದ ಅಂಗವಾಗಿ ಈಗಾಗಲೇ ಪಂಚಮುಖಿ ಆಂಜನೇಯ ಗುಡಿಯ ಎದುರು ಭಾಗದಲ್ಲಿ ವಿಶೇಷವಾಗಿ ಸಿಂಹ ಮಂಟಪ, ಮುಖ ಗೋಪುರ ನಿರ್ಮಾಣವಾಗಿದೆ ಅಲ್ಲದೆ ಆಕರ್ಷಕವಾದ ಉದ್ಯಾನವನ ನಿರ್ಮಿಸಲಾಗಿದೆ ಹಾಗೇ ಪಂಚಮುಖಿ ಆಂಜನೇಯ ಮತ್ತು ಕೋದಂಡರಾಮ ದೇವರ ಪಾಣಿಪೀಠಕ್ಕೆ ತಾಮ್ರದ ಹೊದಿಕೆ ಹಾಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದ.ಕ ಸಂಸದ ಕ್ಯಾ| ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ರಾಜ್ಯಪಾಲರಿಗೆ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ವಂದಿಸಿದರು. ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕರಾದ ಜಿ.ಕೆ ಮಹಾಬಲೇಶ್ವರ ಭಟ್, ಶ್ರೀ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಶ್ಯಾಮ್ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ಹಾಗೇ ಕೊನೆಯಲ್ಲಿ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಯಿತು.
ಧರ್ಮ, ಸಂಸ್ಕೃತಿಯ ಸಂವರ್ಧನೆ, ರಕ್ಷಣೆಗಾಗಿ ಒಗ್ಗೂಡಿ ಕೆಲಸ ಮಾಡಬೇಕು: ಥಾವರ್ ಚಂದ್ ಗೆಹ್ಲೋಟ್
ಭಾರತವು ಜಗತ್ತಿಗೆ ವಿಶ್ವಬಂಧುತ್ವ, ವಿಶ್ವ ಕಲ್ಯಾಣ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ನೀಡಿದೆ. ಇಂದು ಜಗತ್ತಿನ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ನೆಮ್ಮದಿಗಾಗಿ ಭಾರತದತ್ತ ಮುಖ ಮಾಡಿವೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಪೂಜನೀಯವಾಗಿ ಕಾಣಲಾಗುತ್ತದೆ. ನದಿ, ಪರ್ವತ, ವೃಕ್ಷ ಹಾಗೂ ಪಶುಪಕ್ಷಿಗಳು ನಮ್ಮ ಜೀವನ ಚಕ್ರದ ಅವಿಭಾಜ್ಯ ಅಂಗಗಳಾಗಿವೆ. ಈ ದೃಷ್ಟಿಕೋನವು ಇಂದಿನ ಪರಿಸರ ಬಿಕ್ಕಟ್ಟಿಗೆ ಪ್ರಸ್ತುತವಾದ ಪರಿಹಾರವಾಗಿದೆ. ಧರ್ಮ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರೂ ಒಗ್ಗೂಡಿ ಸಂಸ್ಕೃತಿಯ ಸಂವರ್ಧನೆ ಹಾಗೂ ರಕ್ಷಣೆಗಾಗಿ ಕೆಲಸ ಮಾಡಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಕರೆ ನೀಡಿದರು.
ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ದರ್ಶನ ಪಡೆದ ರಾಜ್ಯಪಾಲರು
ಹನುಮಗಿರಿಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರು ಆರಂಭದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಪಂಚಮುಖಿ ಆಂಜನೇಯ ಗುಡಿಯ ಎದುರಿನ ಮುಖ ಗೋಪುರ, ಮಂಟಪ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಪಡೆದ ಇವರಿಗೆ ಈ ಸಂದರ್ಭದಲ್ಲಿ ಪ್ರಸಾದ ನೀಡಿ ಸತ್ಕರಿಸಲಾಯಿತು. ಇಲ್ಲಿಂದ ಇವರು ಶ್ರೀ ಕೋದಂಡರಾಮ ಸನ್ನಿಽಗೆ ಭೇಟಿ ನೀಡಿ ಅಲ್ಲಿಂದ `ಅಮರಗಿರಿ ಭಾರತ ಮಾತೆಯ ಮಂದಿರ’ಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಝೀರೋ ಟ್ರಾಫಿಕ್, ಬಿಗಿ ಭದ್ರತೆಯೊಂದಿಗೆ ರಾಜ್ಯಪಾಲರ ಆಗಮನ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರು ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮುಖಾಂತರ ಪುತ್ತೂರು ಐಬಿಗೆ ಬಂದಿದ್ದರು ಅಲ್ಲಿಂದ ರಸ್ತೆ ಮೂಲಕ ಹನುಮಗಿರಿಗೆ ಭೇಟಿ ನೀಡಿದರು. ಎಸ್ಪಿ ಡಾ.ಅರುಣ್ರವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರಿನಿಂದ ಹನುಮಗಿರಿ ತನಕ ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು. ರಸ್ತೆಯುದ್ಧಕ್ಕೂ ಅರ್ಧ ಕಿಲೋ ಮೀಟರ್ಗೆ ಒಬ್ಬರಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಅಲ್ಲದೆ ಕೆಲವೊಂದು ಕಡೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿತ್ತು. ಹನುಮಗಿರಿಗೆ ಹೋಗುವಾಗ ಮತ್ತು ಬರುವಾಗ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಭಕ್ತರಿಂದ ಕಂಗೊಳಿಸುತ್ತಿರುವ ಹನುಮಗಿರಿ
ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಎ.9ರಿಂದ 12ರ ತನಕ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರುರವರ ಆಚಾರ್ಯತ್ವದಲ್ಲಿ ಶ್ರೀ ಕೋದಂಡರಾಮ ಹಾಗೂ ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಏಕ ಕಾಲದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಒಂದು ಕಡೆಯಲ್ಲಿ 10 ಯಾಗ ಕುಂಡಲಿಗಳಲ್ಲಿ ಕೋಟಿ ಶ್ರೀ ರಾಮ ತಾರಕ ಮಂತ್ರ ಮಹಾಯಜ್ಞ ನಡೆಯುತ್ತಿದೆ. ಒಂದು ಕಡೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆ ಶ್ರೀರಾಮ ಮಂದಿರದಿಂದ ಆಗಮಿಸಿದ ದಿವ್ಯಜ್ಯೋತಿ, ಅಂಜನಾದ್ರಿಯ ಜ್ಯೋತಿ ಜೊತೆ ರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೇ ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ ಮತ್ತು ನಿರಂತರ ಭಜನಾ ಸಂಕೀರ್ತನೆ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಹನುಮಗಿರಿ ಕ್ಷೇತ್ರವು ಭಕ್ತ ಜನಸಾಗರದಿಂದ ಕಂಗೊಳಿಸುತ್ತಿದೆ. ವಿವಿಧ ಕಡೆಗಳಲ್ಲಿ ಭಕ್ತರು ಆಗಮಿಸುತ್ತಿದ್ದು ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಬಹಳ ಅಚ್ಚುಕಟ್ಟಾದ ವ್ಯವಸ್ಥೆ
ಹನುಮಗಿರಿ ಬ್ರಹ್ಮಕಲಶೋತ್ಸವವು ಬಹಳಷ್ಟು ವೈಶಿಷ್ಟ್ಯತೆಗಳಿಂದ ಕೂಡಿದ್ದು ಇಲ್ಲಿನ ವ್ಯವಸ್ಥೆ ಕೂಡ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಭಕ್ತರು ಆಗಮಿಸುತ್ತಿದ್ದು ದ್ವಾರಕ್ಕೆ ಮೊದಲು ಸಿಗುವ ಶಾಲಾ ಆವರಣದಲ್ಲಿ ಕೋಟಿ ಶ್ರೀರಾಮ ತಾರಕ ಮಂತ್ರ ಮಹಾಯಜ್ಞಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರೊಳಗೆ ಬರುತ್ತಿದ್ದಂತೆ ಒಂದು ನಿಶ್ಯಬ್ದತೆಯ ನಡುವೆ ರಾಮ ನಾಮ ಜಪ ನಮ್ಮ ಮನಸ್ಸನ್ನು ಮುದಗೊಳಿಸುವ ಮೂಲಕ ನಮ್ಮಲ್ಲಿ ಭಕ್ತಿಯನ್ನು ಜಾಗೃತಗೊಳಿಸುತ್ತದೆ. ಇಲ್ಲೇ ಪಕ್ಕದಲ್ಲಿ ಊಟೋಪಚಾರಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಇಲ್ಲಿ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನು ದ್ವಾರದ ಪಕ್ಕದಲ್ಲೇ ಮಾಹಿತಿ ಕೌಂಟರ್ ಇದ್ದು ಇಲ್ಲಿ ಭಕ್ತರು ದೇವಳದ ಬಗ್ಗೆ ಹಾಗೇ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಪಂಚಮುಖಿ ಆಂಜನೇಯ ಸ್ವಾಮಿಗೊಂದು ನಮನ:
ದ್ವಾರದಿಂದ ಒಳ ಪ್ರವೇಶ ಪಡೆಯುತ್ತಿದ್ದಂತೆ ಭವ್ಯವಾದ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿಯ ದರ್ಶನವಾಗುತ್ತದೆ. ಗುಡಿಯ ಎದುರು ಭಾಗದಲ್ಲಿ ಆಕರ್ಷಕವಾದ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇನ್ನು ಗುಡಿಯ ಎದುರಲ್ಲಿ ಅತ್ಯಂತ ದೊಡ್ಡದಾದ ಬಾಗಿಲನ್ನು ಅಳವಡಿಸಲಾಗಿದೆ ಹಾಗೇ ಭವ್ಯವಾದ ಮುಖ ಗೋಪುರ, ಗ್ರಾನೈಟ್ನಿಂದ ನಿರ್ಮಿತವಾದ ಸಿಂಹ ಮಂಟಪ ಅತ್ಯಂತ ಆಕರ್ಷಕವಾಗಿದೆ. ಆಂಜನೇಯ ಸ್ವಾಮಿಗೊಂದು ಕೈ ಮುಗಿದು ಮುಂದೆ ಪ್ರಕೃತಿಯ ಜೊತೆಯಲ್ಲಿ ಸಾಗಿದರೆ ಭವ್ಯವಾದ ಶ್ರೀ ಕೋದಂಡರಾಮ ದೇವರ ದರ್ಶನವಾಗುತ್ತದೆ. ಹಲವು ವಿಶಿಷ್ಠತೆಗಳಿಂದ ಕೂಡಿದ ಶ್ರೀ ಕೋದಂಡರಾಮ ಸನ್ನಿಽಯಲ್ಲಿ ನಿಂತು ಕೈಮುಗಿದು ಮುಂದೆ `ಅಮರಗಿರಿ’ಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಭಾರತ ಮಾತೆಯ ಮಂದಿರವಿರುದ ದಕ್ಷಿಣ ಭಾರತದ ಏಕೈಕ ಕ್ಷೇತ್ರ ಹನುಮಗಿರಿಯಾಗಿದ್ದು ಇಲ್ಲಿ ನಾವು ಭಾರತ ಮಾತೆಗೆ ಶಿರಭಾಗಿ ನಮಿಸುವ ಮೂಲಕ ದೇವ ಮತ್ತು ದೇಶ ಭಕ್ತಿಗೆ ಶರಣಾಗುತ್ತೇವೆ.
ಪಾಣಿಪೀಠಕ್ಕೆ ತಾಮ್ರದ ಹೊದಿಕೆ, ಆಕರ್ಷಕ ಉದ್ಯಾನವನ:
ಹನುಮಗಿರಿಯಲ್ಲಿ ನೋಡುವಂತಹುದು, ಕಲಿಯುವಂತಹುದು ಬಹಳಷ್ಟಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ವಿಶೇಷವಾಗಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಮತ್ತು ಶ್ರೀ ಕೋದಂಡರಾಮ ದೇವರ ಪಾಣಿಪೀಠಕ್ಕೆ ತಾಮ್ರದ ಹೊದಿಕೆ ಹೊದಿಸಲಾಗಿದೆ. ಇನ್ನು ಪಂಚಮುಖಿ ಆಂಜನೇಯ ಗುಡಿಯ ಎದುರು ಆಕರ್ಷಕ ಉದ್ಯಾನವನವನ್ನು ನಿರ್ಮಿಸಲಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹನುಮಗಿರಿಗೆ ಭೇಟಿ ನೀಡಿ ಜೀವನ ಪಾವನ ಮಾಡಿಕೊಳ್ಳಬೇಕಾಗಿದೆ.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಹನುಮಗಿರಿ ಲವ' ವೇದಿಕೆಯಲ್ಲಿ ಬೆಳಿಗ್ಗೆ ಶಕ್ತಿ ಮಹಿಳಾ ಯಕ್ಷಗಾನ ಬಳಗ ತೆಂಕಿಲ ಪುತ್ತೂರು ಇವರಿಂದಶರಸೇತು ಬಂಧನ’ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಡಾ| ವಿದ್ಯಾಲಕ್ಷ್ಮೀ ಕೆ.ನಾಟ್ಯ ವಿದ್ಯಾಲಯ ಕುಂಬಳೆ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನೃತ್ಯ ಸಂಭ್ರಮ, ಅಪರಾಹ್ನ ರಂಗಯ್ಯ ಬಲ್ಲಾಳ್ ಇವರ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಭಕ್ತಿಭಾವ ಸಂಗಮ, ಸಂಜೆ ವಿದುಷಿ ದೀಪ್ತಿ ರವಿಚಂದ್ರ ಇವರ ಶಿಷ್ಯವೃಂದ ಶಾರದಾ ಕಲಾಕೇಂದ್ರ ಕುಂಬ್ರ ಇವರಿಂದ ಭರತನಾಟ್ಯ, ರಾತ್ರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ನಮೋ ರಘುವಂಶ ದೀಪ' ಯಕ್ಷಗಾನ ಬಯಲಾಟ ನಡೆಯಿತು. ಅಮರಗಿರಿಯ ಕುಶ ವೇದಿಕೆಯಲ್ಲಿ ಬೆಳಿಗ್ಗೆ ಶ್ರೀ ಪಂಚಶ್ರೀ ಮಹಿಳಾ ಸಂಘ ಮತ್ತು ಶ್ರೀ ಕೋದಂಡರಾಮ ಮಕ್ಕಳ ಕುಣಿತ ಭಜನಾ ತಂಡದಿಂದ ನೃತ್ಯ, ದತ್ತಾತ್ರೇಯ ರಾವ್ ಪುತ್ತೂರು ಮತ್ತು ಭಾಸ್ಕರದಾಸ್ ಹಾಗೂ ಬಳಗದವರಿಂದ ಭಕ್ತಿ ಸಂಗೀತ, ಮಧ್ಯಾಹ್ನ ವಿದುಷಿ ನಿಖಿತಾ ಪಾಣಾಜೆ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ, ಅಂಬಿಕಾ ಯಕ್ಷಕಲಾ ವೃಂದ ಬಪ್ಪಳಿಗೆ ಇವರಿಂದವಿಜಯ ಯಾತ್ರೆ’ ಯಕ್ಷಗಾನ, ಸಂಜೆ ವರ್ಣಂ ನೃತ್ಯ ತಂಡ ಈಶ್ವರಮಂಗಲ ಮತ್ತು ಶ್ರೀರಾಮ ಲಹರಿ ನಾಟ್ಯಾಲಯ ದೇಲಂಪಾಡಿ ಇವರಿಂದ ನೃತ್ಯ, ನೃತ್ಯ ಹನುಮಾನ್ ಕಲಾ ತಪಸ್ವಿ ನಾಟ್ಯ ನಿಲಯ ಗುರು ಬಾಲಕೃಷ್ಣ ಮಂಜೇಶ್ವರ ಇವರ ತಂಡದಿಂದ ಶಾಸೀಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಮನರಂಜಿಸಿತು.
ವೈಧಿಕ ಕಾರ್ಯಕ್ರಮ
ಸಾಮೂಹಿಕ ಪ್ರಾರ್ಥನೆ, ಯಾಗ ಶಾಲಾ ಪ್ರವೇಶ, ಮಹಾ ಸಂಕಲ್ಪ, ಕಚ್ಛಾಚರಣೆ, ಪುಣ್ಯಾಹ, ದೇವತಾ ನಾಂದಿ, ಕಂಕಣ ಬಂಧನ, ಪ್ರಧಾನ ಪೀಠದಲ್ಲಿ ಕಲಶ ಸ್ಥಾಪನೆ, 101 ವೈದಿಕರಿಂದ ಜಪ ಪ್ರಾರಂಭ, ಅಷ್ಟೋತ್ತರ ಶತನಾರಿಕೇಳ (108) ಗಣಹವನ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ (ಯಾಗ ಮಂಟಪದಲ್ಲಿ) ಪ್ರಸಾದ ವಿತರಣೆ, ಸಂಜೆ ಜಪ ಮುಂದುವರಿಕೆ, ದೇವತಾಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಂತ, ಅಷ್ಟಾವಧಾನ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಪೇಜಾವರ ಶ್ರೀ ಭೇಟಿ
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ವೈಽಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.










