ದಿ.ನಳಿನಿ ಲೋಕಪ್ಪ ಗೌಡ ಸ್ಮರಣಾರ್ಥ ಬಸ್ ತಂಗುದಾಣ – ಏ.18ರಂದು ಲೋಕಾರ್ಪಣೆ

0

ಮರಣ ಹೊಂದಿದವರ ನೆನಪಿಗಾಗಿ ಸತ್ಕಾರ್ಯಗಳನ್ನು ಮಾಡುವುದು ನಾವು ಅವರಿಗೆ ಸಲ್ಲಿಸಬಹುದಾದ ಅತ್ಯಂತ ದೊಡ್ಡ ಗೌರವ. ದೈಹಿಕವಾಗಿ ಭೂಮಿಯ ಮೇಲೆ ಅವರ ಅಸ್ತಿತ್ವ ಇಲ್ಲದೆ ಇದ್ದರೂ ಅವರು ಹಾಕಿಕೊಟ್ಟ ಸಂಸ್ಕಾರ ಮತ್ತು ನಾವು ಅವರ ಹೆಸರಿನಲ್ಲಿ ಮಾಡುವ ಸಮಾಜ ಸೇವೆ ಅವರನ್ನು ನಮ್ಮ ನಡುವೆ ಎಂದೆಂದಿಗೂ ಜೀವಂತವಾಗಿರಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ದಿ.ಕರೆಮನೆ ಶ್ರೀಮತಿ ನಳಿನಿ ಲೋಕಪ್ಪ ಗೌಡ. ಭಗವಂತನ ಅನುಲ್ಲಂಘನೀಯ ನಿಯಮದಂತೆ ಇಹಲೋಕ ತ್ಯಜಿಸಿದ್ದರೂ ಸಮಾಜಕ್ಕೆ ನೆರಳಾಗುವ ಮೂಲಕ ಎಂದಿಗೂ ಜೀವಂತ.

ಬಿಸಿಲಲ್ಲಿ ಪ್ರಯಾಣಿಕರು ನೆರಳನ್ನು ಆಶ್ರಯಿಸಲು ಪಾಡುಪಡುವುದನ್ನು ಕಂಡು ಇಲ್ಲೊಂದು ಬಸ್‌ಸ್ಟಾಪ್ ಮಾಡಬೇಕೆಂದು ಪತಿ ಲೋಕಪ್ಪ ಗೌಡ ಅವರಲ್ಲಿ ಆಗಾಗ ಪ್ರಸ್ತಾಪಿಸುತ್ತಿದ್ದರಂತೆ. ಕಾರಣಾಂತರಗಳಿಂದ ಇದರ ನಿರ್ಮಾಣ ಕಾರ್ಯ ತಡವಾಗಿತ್ತು. ಕಳೆದ ಫೆಬ್ರವರಿ 12ರಂದು ನಳಿನಿ ಲೋಕಪ್ಪ ಗೌಡ ಇಹಲೋಕ ತ್ಯಜಿಸಿದ್ದು, ಪ್ರೀತಿಯ ಮಡದಿಯ ಅಶಯದಂತೆ ಪತಿ ಲೋಕಪ್ಪ ಗೌಡ ಬಸ್‌ಸ್ಟಾಪ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಸಿಲಲ್ಲಿ ಬಳಲಿ ಬರುವವರಿಗೆ ನೆರಳು, ದಣಿದವರಿಗೆ ಆಸರೆಯಾಗಲೆಂದು ಮಡದಿ ದಿ.ನಳಿನಿ ಲೋಕಪ್ಪ ಗೌಡ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ತಾಣ, ನೂರಾರು ಜನರಿಗೆ ನೆರಳು ನೀಡುವುದರೊಂದಿಗೆ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂಬುವುದು ಪತಿಯ ಆಶಯ.

ಸುಂದರವಾಗಿ ನಿರ್ಮಾಣಗೊಂಡ ಈ ಬಸ್ ತಂಗುದಾಣದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ತಂಪು ಮತ್ತು ಸಾದಾ ಶುದ್ಧ ಕುಡಿಯುವ ನೀರಿನ ವ್ಯವಸ್ಧೆಯನ್ನು ಮಾಡಲಾಗಿದೆ. ನಳಿನಿ ಲೋಕಪ್ಪ ಗೌಡ ಅವರ ಜನಸೇವೆಯ ನೆನಪು ಮಾಸದಿರಲೆಂದು ಅವರ ಭಾವಚಿತ್ರವನ್ನು ಗ್ರ್ಯಾನೆಟ್‌ನಲ್ಲಿ ಲೇಸರ್ ಮೂಲಕ ಪ್ರಿಂಟ್ ಮಾಡಿ ಅಳವಡಿಸಲಾಗಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಧೆ, ಬೆಳಕಿನ ವ್ಯವಸ್ಧೆ, ತಂಗುದಾಣದ ಮುಂಭಾಗಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಈ ಹಿಂದೆ 1998ರಲ್ಲಿ ಇಲ್ಲಿ ಕರೆಮನೆ ಕಟ್ಟೆಯನ್ನು ನಳಿನಿ ಲೋಕಪ್ಪ ಗೌಡ ಅವರ ಇಚ್ಚೆಯಂತೆ ನಿರ್ಮಿಸಲಾಗಿತ್ತು. ಬಳಿಕ 2007ರಲ್ಲಿ ಸುಂದರವಾಗಿ ನವೀಕರಿಸಲಾಗಿತ್ತು. ಇದೀಗ ಈ ಕಟ್ಟೆಯ ಪಕ್ಕದಲ್ಲಿಯೇ ಬಸ್ ತಂಗುದಾಣ ನಿರ್ಮಿಸಲಾಗಿದ್ದು ಬಳಕೆದಾರರಿಗೆ ಭಗವಂತನ ಸಾನಿಧ್ಯದ ಕಲ್ಪನೆ ಮೂಡಲಿದೆ.

ಪ್ರತಿ ವರ್ಷದಂತೆ ಏಪ್ರಿಲ್ 18ರಂದು ಶ್ರೀಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ದಾರಿಯಲ್ಲಿ ಪೂಜೆ ಸ್ವೀಕರಿಸಲಿರುವ ಕರೆಮನೆ ಕಟ್ಟೆಯಲ್ಲಿ 25ನೇ ವರ್ಷದ ಸತ್ಯನಾರಾಯಣ ಪೂಜೆ, ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ನಡೆದು ಅನ್ನದಾನ ಸೇವೆ ನಡೆಯಲಿದೆ. ಇದೇ ದಿನ ಶಾಸಕರಾದ ಅಶೋಕ್ ಕುಮಾರ್ ರೈ ಬಸ್ ತಂಗುದಾಣವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಕರೆಮನೆ ಕಟ್ಟೆಯಿಂದ ಕೇದಗೆದಡಿ, ಮರ್ತಡ್ಕ, ನಾಡಾಜೆ, ಬರೆಕೋಲಾಡಿ, ಹಿಂದಾರು, ಕಂಪ, ಮುಂಡೂರು, ಸಂಪರ್ಕ ರಸ್ತೆಗೆ ದಿ.ನಳಿನಿ ಲೋಕಪ್ಪ ಗೌಡ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ಇದರ ಅಧಿಕೃತ ಘೋಷಣೆಯೂ ನಡೆಯಲಿದೆ.

ಬದುಕಿದ್ದಾಗ ಪ್ರೀತಿ ಹಂಚಿ, ಅಗಲಿದ ಮೇಲೆ ನೆರಳಾಗಿ ನಿಂತ ಪುಣ್ಯ ಚೇತನಕ್ಕೆ ಪ್ರೀತಿಯ ನಮನ ಸಲ್ಲಿಸುವುದರೊಂದಿಗೆ ಈ ಬಸ್ ತಂಗುದಾಣ ಅವರ ಪ್ರೀತಿ ಮತ್ತು ಸೇವೆಯ ಸಂಕೇತವಾಗಿರಲಿದೆ ಎಂದು ನಳಿನಿ ಲೋಕಪ್ಪ ಗೌಡ ಅವರ ಕುಟುಂಬಸ್ಧರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here