ಸಂಸದ ಬ್ರಿಜೇಶ್ ಚೌಟ ಭೇಟಿಯಾದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ

0

ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್, ಪ್ರವಾಸೋದ್ಯಮ ಸಹಿತ ದ.ಕ.ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಅವರು ಮಂಗಳೂರಿನಲ್ಲಿ ಭೇಟಿಯಾಗಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್, ಪ್ರವಾಸೋದ್ಯಮ ಸಹಿತ ದ.ಕ.ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಏ.20ರಂದು ಮಂಗಳೂರಿಗೆ ಭೇಟಿ ನೀಡಿದ ಕಾನ್ಸುಲ್ ಜನರಲ್ ಅವರೊಂದಿಗೆ ಆಸ್ಟ್ರೇಲಿಯಾ ಹಾಗೂ ದ.ಕ.ಎರಡೂ ಕಡೆ ವಿಸ್ತಾರವಾದ ಕರಾವಳಿ ತೀರ ಹೊಂದಿರುವುದರಿಂದ, ಸಾಹಸಮಯ ವಾಟರ್ ಸ್ಪೋರ್ಟ್ಸ್ ಮತ್ತು ಪ್ರವಾಸೋದ್ಯಮ ಉತ್ತೇಜಿಸುವ ಕುರಿತು ಸಮಾಲೋಚಿಸಲಾಯಿತು. ಪ್ರಮುಖವಾಗಿ ಆಸ್ಟ್ರೇಲಿಯಾದ ತಾಂತ್ರಿಕ ನೈಪುಣ್ಯತೆ ಮತ್ತು ಈ ಕ್ಷೇತ್ರದಲ್ಲಿ ಅವರಿಗಿರುವ ದಶಕಗಳ ಅನುಭವವನ್ನು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.

ಕ್ರೀಡಾ ಕ್ಷೇತ್ರದಲ್ಲಿ ಯುವಜನತೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯ ಗಳೊಂದಿಗೆ ಕ್ರೀಡಾ ಪಠ್ಯಕ್ರಮ ಅಭಿವೃದ್ಧಿಗಾಗಿ ಸಹಭಾಗಿತ್ವ ಹೊಂದುವ ಕುರಿತು ಕೂಡ ಮಾತುಕತೆ ನಡೆಸಲಾಯಿತು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಂಸದ ಚೌಟ ಇಂತಹ ಉಪಕ್ರಮಗಳು ಎರಡು ದೇಶಗಳ ನಡುವಿನ ಸಂಬಂಧ ವೃದ್ಧಿಗೊಳಿಸುವುದಲ್ಲದೆ ಯುವಜನತೆಗೆ ಜಾಗತಿಕ ಮಟ್ಟದ ಕೌಶಲ ಮತ್ತು ಮಾನ್ಯತೆಯನ್ನು ಒದಗಿಸುವ ಮೂಲಕ ಹೊಸ ಹಾದಿ ತೆರೆಯಲಿವೆ. ಆರ್ಥಿಕ ಪ್ರಗತಿಯ ಜೊತೆಗೆ ’ವಿಕಸಿತ ಭಾರತ’ದ ದೃಷ್ಟಿಕೋನಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂದರು.


LEAVE A REPLY

Please enter your comment!
Please enter your name here