ಕೊರಮೇರು: ಕಾರು ಡಿಕ್ಕಿ- ವ್ಯಕ್ತಿಗೆ ಗಂಭೀರ ಗಾಯ

0

ನೆಲ್ಯಾಡಿ; ರಸ್ತೆ ಬದಿ ಟ್ರೇಲರ್ ನಿಲ್ಲಿಸಿ ಟಯರ್ ಪರಿಶೀಲನೆಗಾಗಿ ಟ್ರೇಲರ್ ಹಿಂಬದಿ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ ಟ್ರೇಲರ್ ಸಹ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಇಚ್ಲಂಪಾಡಿ ಗ್ರಾಮದ ಕೊರಮೇರು ಸಮೀಪ ಏ.24ರಂದು ರಾತ್ರಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗಾಂಧಿನಗರದ ಸೀಬಿನಕೆರೆ ನಿವಾಸಿ ಶೇಖ್ ಬುಡಾನ್(53ವ.) ಗಾಯಗೊಂಡವರಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ದುರ್ವಾಸಪುರ ರೆಂಜದಕಟ್ಟೆ ನಿವಾಸಿ ಆರ್.ಎ.ಮಹಮ್ಮದ್ (60ವ.) ಎಂಬವರ ಜೊತೆ ಟ್ರೇಲರ್‌ನಲ್ಲಿ ಶೇಖ್ ಬುಡಾನ್ ಸಹ ಚಾಲಕರಾಗಿ ಬಂದಿದ್ದರು. ಇವರು ಏ.24ರಂದು ಸಂಜೆ 5 ಗಂಟೆಗೆ ಹಾಸನದಿಂದ ಸ್ಟೀಲ್ ರಾಡ್‌ಗಳನ್ನು ತುಂಬಿಸಿಕೊಂಡು ಮಂಗಳೂರಿಗೆ ಹೊರಟಿದ್ದು ರಾತ್ರಿ 10.30ರ ಸುಮಾರಿಗೆ ಕೊರಮೇರು ತಲುಪಿದ್ದರು. ಇಲ್ಲಿ ರಸ್ತೆ ಬದಿ ಟ್ರೇಲರ್ ನಿಲ್ಲಿಸಿ ಟಯರ್ ಪರಿಶೀಲನೆಗಾಗಿ ಚಾಲಕ ಮಹಮ್ಮದ್ ಮತ್ತು ಸಹ ಚಾಲಕ ಶೇಖ್ ಬುಡಾನ್ ಅವರು ಟ್ರೇಲರ್‌ನಿಂದ ಕೆಳಗಿಳಿದು ಟ್ರೇಲರ್‌ನ ಹಿಂಭಾಗದಲ್ಲಿ ನಿಂತಿದ್ದರು. ಈ ವೇಳೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ಚಾಲಕ ಮಂಗಳೂರು ನಿವಾಸಿ ಉದ್ಯಮಿ ರಂಜನ್ ಅವರ ನಿಯಂತ್ರಣ ತಪ್ಪಿ ಶೇಖ್ ಬುಡಾನ್ ಅವರಿಗೆ ಹಾಗೂ ಟ್ರೇಲರ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶೇಖ್ ಬುಡಾನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಘಟನೆಯಲ್ಲಿ ಟ್ರೇಲರ್ ಹಾಗೂ ಕಾರು ಸಹ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಟ್ರೇಲರ್ ಚಾಲಕ ಆರ್.ಎ.ಮಹಮ್ಮದ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here