







ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ಗಾಂಧಿನಗರ-ತಿಂಗಳಾಡಿಯ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಹಾಗೂ ಪರಿವಾರ ದೈವಗಳ ದೇವಸ್ಥಾನದಲ್ಲಿ “ಶ್ರೀ ಮಾರಿಪೂಜಾ ಮಹೋತ್ಸವ”ವು ಏ.26ರಿಂದ 28ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.


ಕ್ಷೇತ್ರದಲ್ಲಿ ಈಗಾಗಲೇ ಏಪ್ರಿಲ್ 19ರಂದು ‘ಗೊನೆ ಮುಹೂರ್ತ’ದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್ 26ರವರೆಗೆ ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ಹಾಗೂ ದೀಪಾರಾಧನೆ ನಡೆಯುತ್ತಿದೆ.




ಏ.26ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ದಿನದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯಾಹ್ನ 12:00ಕ್ಕೆ ಶುದ್ಧಿ ಕಲಶ ಹಾಗೂ ಮಧ್ಯಾಹ್ನ 1:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7:00ರಿಂದ ಭಂಡಾರ ತೆಗೆಯುವುದು, ಭಂಡಾರ ಶುದ್ಧಿಗೊಳಿಸುವುದು ಮತ್ತು ಭಂಡಾರ ಉತ್ಸವ ಬೈಲಿಗೆ ಕೊಂಡೊಯ್ಯುವ ಕಾರ್ಯಕ್ರಮಗಳಿರಲಿವೆ. ರಾತ್ರಿ 9:00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತಡರಾತ್ರಿ ಶ್ರೀ ದೇವಿಯ ಗುಡಿ ಪ್ರತಿಷ್ಠಾಪನೆ ಮತ್ತು ಗುಳಿಗ, ಪಂಜುರ್ಲಿ ಮುಂತಾದ ದೈವಗಳ ದರ್ಶನ ನಡೆಯಲಿದೆ.
ಏ. 27ರಂದು ಬೆಳಿಗ್ಗೆ ‘ಮಾರಿ ಕಡಿಯುವುದು’, ಬೆಳಿಗ್ಗೆ 11:00 ಗಂಟೆಗೆ ಅಮ್ಮನವರ ದರ್ಶನ ಹಾಗೂ ಮಧ್ಯಾಹ್ನ 12:00ಕ್ಕೆ ‘ಮಹಾಪೂಜೆ’ ನಡೆಯಲಿದೆ. ಮಧ್ಯಾಹ್ನ 1:00 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 4:00 ಗಂಟೆಗೆ ಭಂಡಾರವನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಗುವುದು.
ಏ. 28ರಂದು ಸೂರ್ಯೋದಯದ ವೇಳೆಗೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆಯೊಂದಿಗೆ ಮಾರಿಪೂಜಾ ಮಹೋತ್ಸವವು ಸಂಪನ್ನಗೊಳ್ಳಲಿದೆ.
ಈ ಸುಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಮತ್ತು ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.









