







ರಾಮಕುಂಜ: ಕೊೖಲ ಪಶುವೈದ್ಯಕೀಯ ಕಾಲೇಜಿನಲ್ಲಿ ಪಶುವೈದ್ಯಕೀಯ ದಿನಾಚರಣೆಯ ಅಂಗವಾಗಿ ಸಾಕು ಪ್ರಾಣಿಗಳಿಗೆ ರೇಬೀಸ್ ರೋಗದ ವಿರುದ್ಧ ಲಸಿಕೆ ಹಾಗೂ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಕಾರ್ಯಕ್ರಮ ಏ.25ರಂದು ನಡೆಯಿತು.



ಕಾಲೇಜಿನ ಡೀನ್ ಡಾ. ಎಂ.ಸಿ.ಶಿವಕುಮಾರ್ ಗೋಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಪಶುವೈದ್ಯಕೀಯ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ನಮ್ಮ ಕಾಲೇಜಿನ ವತಿಯಿಂದ ಪಶುವೈದ್ಯಕೀಯ ಕೊಡುಗೆಯನ್ನು ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರಾಣಿಗಳ ಆಹಾರ ಭದ್ರತೆ, ಪ್ರಾಣಿಜನ್ಯ ರೋಗ, ಮುಂತಾದ ವಿಚಾರಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ನೀಡುವುದು ವಿಶ್ವಪಶುವೈದ್ಯಕೀಯ ದಿನಾಚರಣೆಯ ಉದ್ದೇಶವಾಗಿದೆ. ಪರಾವಲಂಬಿ ಜೀವಿಗಳ ಜಂತು ನಾಶಕ ಔಷಧ, ದೊಡ್ಡ ಜಾನುವಾರುಗಳಿಗೆ ಖನಿಜ ಮಿಶ್ರಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.



ಈ ಸಂದರ್ಭದಲ್ಲಿ ಸಾಕುಪ್ರಾಣಿಗಳಾದ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಉಚಿತ ರೇಬೀಸ್ ಲಸಿಕೆ ನೀಡಲಾಯಿತು. ಹಸು, ಕರುಗಳಿಗೆ ಖನಿಜ ಮಿಶ್ರಣ ಮತ್ತು ಕ್ಯಾಲ್ಸಿಯಂ ಟಾನಿಕ್ ನೀಡಲಾಯಿತು. 36 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಯಿತು. ಕಾಲೇಜಿನ ಪ್ರಾಧ್ಯಾಪಕ ಹಾಗೂ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗ ಮುಖ್ಯಸ್ಥ ಡಾ.ಮಂಜುನಾಥ್ ಪಾಟೀಲ್, ಸಹ ಪ್ರಾಧ್ಯಾಪಕ ಡಾ.ಧರಣೇಶ್, ಸಹಾಯಕ ಪ್ರಾಧ್ಯಪಕರಾದ ಡಾ.ಸಾಗರ್ ಆರ್.ಎಸ್., ಡಾ.ರಜತ್ ಸಾಗರ್, ಡಾ.ತೇಜಸ್ವಿನಿ ಎಂ.ಪಿ., ಡಾ.ರಶ್ಮಿ, ಡಾ.ಹರಿಣಿ, ಡಾ.ಸಾಗರ್ ಎಂ., ಅವರುಗಳು ಲಸಿಕೆ, ಚಿಕಿತ್ಸೆ ನೀಡುವ ಕಾರ್ಯವನ್ನು ಮಾಡಿದರು. ಡಾ.ಎಂ.ಸಿ.ಶಿವಕುಮಾರ್ ಸ್ವಾಗತಿಸಿದರು. ಡಾ.ಮಂಜುನಾಥ್ ಪಾಟೀಲ್ ವಂದಿಸಿದರು.









