







ಪುತ್ತೂರು: 2025–26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಮೌಲ್ಯಮಾಪನ ಪ್ರಕ್ರಿಯೆಯ ಲೋಪದೋಷಗಳು ಮುನ್ನೆಲೆಗೆ ಬಂದಿವೆ. ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕರ ಹಸ್ತಕ್ಷೇಪದಿಂದಾಗಿ ತನ್ನ ಶ್ರೇಣಿಯನ್ನೇ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.


ಪ್ರಕರಣದ ಹಿನ್ನೆಲೆ:
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯುವರಾಜ್ N S ಎಂಬಾತನಿಗೆ ವಿಜ್ಞಾನ ವಿಷಯದಲ್ಲಿ ಈ ಅನ್ಯಾಯವಾಗಿದೆ. ವಿಜ್ಞಾನದ ಲಿಖಿತ ಪರೀಕ್ಷೆಯಲ್ಲಿ ಈತ 80ಕ್ಕೆ 65 ಅಂಕಗಳನ್ನು ಗಳಿಸಿದ್ದಾನೆ. ಇದಕ್ಕೆ ಶಾಲೆಯ 20 ಆಂತರಿಕ ಅಂಕಗಳನ್ನು ಸೇರಿಸಿದರೆ ಒಟ್ಟು 85 ಅಂಕಗಳಾಗಬೇಕಿತ್ತು. ಆದರೆ, ಮೌಲ್ಯಮಾಪಕರು ನೀಡಿದ್ದು, ಕೇವಲ 47 ಅಂಕಗಳನ್ನು ಮಾತ್ರ.



ಕೈತಪ್ಪಿದ ಡಿಸ್ಟಿಂಕ್ಷನ್:
ಈ ಒಂದೇ ವಿಷಯದ ಎಡವಟ್ಟಿನಿಂದಾಗಿ ಯುವರಾಜ್ ಪಡೆಯಬೇಕಿದ್ದ ಒಟ್ಟು ಅಂಕಗಳು 564ರ ಬದಲಿಗೆ 526ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಆರಾಮವಾಗಿ ‘ಡಿಸ್ಟಿಂಕ್ಷನ್’ (Distinction) ಪಡೆಯಬೇಕಿದ್ದ ವಿದ್ಯಾರ್ಥಿ ಈಗ ಕೇವಲ ‘ಪ್ರಥಮ ಶ್ರೇಣಿ’ಗೆ ತೃಪ್ತಿಪಡುವಂತಾಗಿದೆ.
ವಿದ್ಯಾರ್ಥಿ ಹಾಗೂ ಪೋಷಕರ ಪ್ರಶ್ನೆಗಳು:
- ಫಲಿತಾಂಶ ಪ್ರಕಟವಾದ ದಿನದಂದು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಅನುಭವಿಸಿದ ಮಾನಸಿಕ ನೋವಿಗೆ ಹೊಣೆ ಯಾರು? ಎಂಬ ಪ್ರಶ್ನೆ ಈಗ ಮೂಡಿದೆ.
- ಅಂಕಗಳ ಇಷ್ಟು ದೊಡ್ಡ ವ್ಯತ್ಯಾಸ ಮೌಲ್ಯಮಾಪಕರ ಕಣ್ಣಿಗೆ ಬಿದ್ದಿಲ್ಲವೇ?
- ಇಂತಹ ಬೇಜವಾಬ್ದಾರಿ ಶಿಕ್ಷಕರಿಗೆ ಮೌಲ್ಯಮಾಪನದ ಜವಾಬ್ದಾರಿ ನೀಡುವುದು ಎಷ್ಟು ಸರಿ?
- ಮರುಮೌಲ್ಯಮಾಪನದಲ್ಲಿ ಅಂಕಗಳು ವಾಪಸ್ ಬಂದರೂ, ರಿಸಲ್ಟ್ ದಿನ ಅನುಭವಿಸಿದ ಆನಂದ ಮತ್ತು ಘನತೆ ಮರಳಿ ಸಿಗಲು ಸಾಧ್ಯವೇ?
ಇಲಾಖೆಯ ಸ್ಪಷ್ಟೀಕರಣಕ್ಕೆ ಆಗ್ರಹ:
ವರ್ಷಪೂರ್ತಿ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಈ ರೀತಿ ಚೆಲ್ಲಾಟವಾಡುವುದು ಖಂಡನೀಯ. ಈ ಬಗ್ಗೆ ಶಿಕ್ಷಣ ಇಲಾಖೆಯು ಸೂಕ್ತ ಸ್ಪಷ್ಟೀಕರಣ ನೀಡಬೇಕು ಹಾಗೂ ತಪ್ಪಿತಸ್ಥ ಮೌಲ್ಯಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.










