ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನರಸಿಂಹ ಮಾಣಿ ವಿರುದ್ಧದ ಪ್ರಕರಣ ಪುತ್ತೂರಿಗೆ ವರ್ಗಾವಣೆ

0

ಪುತ್ತೂರು: ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತೆ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಹಿಂಜಾವೇ ಮುಖಂಡ ನರಸಿಂಹ ಮಾಣಿ ವಿರುದ್ಧ 7 ತಿಂಗಳ ಹಿಂದೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದೀಗ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.


2025ರ ಸೆ.5ರಂದು ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಹಟ್ಟಿಯಿಂದ ಗೋವು ಕೊಂಡುಹೋದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ನರಸಿಂಹ ಮಾಣಿ ಅವರು, ಪೊಲೀಸರು ಹಿಂದೂ ಸಂಘಟಕರ ಮನೆಗೆ ಹೋಗಿ ಜಿಪಿಎಸ್ ಫೋಟೋ ತೆಗೆಯುತ್ತಾರೆ. ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶವೆಂದು ಯಾವುದೇ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ. ಅಕ್ರಮ ಗೋ ಹತ್ಯೆ, ಲವ್‌ಜಿಹಾದ್, ಡ್ರಗ್ಸ್ ದಂಧೆಯನ್ನು ಇಲಾಖೆ ತಡೆಯುತ್ತಿಲ್ಲ. ಸಂಘಟನೆಯವರು ತಡೆದರೆ ಅದನ್ನು ಅಕ್ರಮ ಕೆಲಸ ಎಂದು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಪ್ರಕರಣ ದಾಖಲಿಸುತ್ತಾರೆ. ಪೊಲೀಸರಿಗೆ ಧೈರ್ಯ ತಾಕತ್ತು ಇದ್ದರೆ ಇದನ್ನು ತಡೆಯಲಿ. ಇದು ಮುಂದುವರಿದರೆ ಶಾಂತಿಯಿಂದ ಅಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದರು. ಇದು ಸರಕಾರದ ವಿರುದ್ಧ ಅಥವಾ ಸಾರ್ವಜನಿಕರ ನೆಮ್ಮದಿಯ ವಿರುದ್ಧ ಅಪರಾಧವೆಸಗುವಂತೆ ಮಾಡುವ ಉದ್ದೇಶದಿಂದ ಕೂಡಿದೆ. ಧರ್ಮದ ನಡುವೆ ಕೋಮು ದ್ವೇಷ, ವೈರತ್ವ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುವುದಾಗಿದೆ. ಜಿಲ್ಲೆಯಲ್ಲಿ ನಡೆದ ಘಟನೆಯ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿಸಿರುತ್ತಾರೆ. ಆದುದರಿಂದ ನರಸಿಂಹ ಮಾಣಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆಯ ವೇಳೆ ಕೃತ್ಯ ನಡೆದ ಸ್ಥಳವು ಪುತ್ತೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here