ಕೊಕ್ಕಡ: ಹಿಟ್ ಆಂಡ್ ರನ್ : ಕಾರು ಡಿಕ್ಕಿ, ಬೈಕ್ ಸವಾರ ಬಲ್ಯ ನಿವಾಸಿಗೆ ಗಾಯ

0

ನೆಲ್ಯಾಡಿ: ಬೈಕ್‌ಗೆ ಕಾರು ಡಿಕ್ಕಿಯಾಗಿ ಪರಾರಿಯಾದ ಘಟನೆ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಏ.28ರಂದು ಬೆಳಗ್ಗೆ ನಡೆದಿದ್ದು ಘಟನೆಯಲ್ಲಿ ಬೈಕ್ ಸವಾರ ಬಲ್ಯ ನಿವಾಸಿ ಗಣೇಶ್ ಆಚಾರ್ಯ ಎಂಬವರು ಗಾಯಗೊಂಡಿರುವುದಾಗಿ ವರದಿಯಾಗಿದೆ.


ಕೊಕ್ಕಡದಿಂದ ಉಪ್ಪಿನಂಗಡಿಗೆ ಗೋಳಿತ್ತೊಟ್ಟು ಮಾರ್ಗವಾಗಿ ತೆರಳುತ್ತಿದ್ದ ಕೊಕ್ಕಡ ಕೆನರಾ ಬ್ಯಾಂಕ್‌ನ ಚಿನ್ನ ಪರೀಕ್ಷಕ, ಬಲ್ಯ ನಿವಾಸಿ ಗಣೇಶ್ ಆಚಾರ್ಯ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಉಪ್ಪಾರಪಳಿಕೆ ಬಳಿ ಅಪರಿಚಿತ ಕಾರೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಣೇಶ್ ಆಚಾರ್ಯ ಅವರು ಬೈಕ್ ಸಹಿತ ರಸ್ತೆಗೆ ಬಿದ್ದಿದ್ದು ಕಾರು ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಗಾಯಾಳು ಗಣೇಶ್ ಆಚಾರ್ಯ ಅವರನ್ನು ಸ್ಥಳೀಯರು ಉಪಚರಿಸಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊಕ್ಕಡ ಸರಕಾರಿ ಆಸ್ಪತ್ರೆಯ 108 ಆಂಬುಲೆನ್ಸ್ ಮೂರು ದಿನದಿಂದ ದುರಸ್ತಿಗಾಗಿ ಗ್ಯಾರೇಜ್‌ನಲ್ಲಿದ್ದು ಗಾಯಾಳುವನ್ನು ಕರೆದೊಯ್ಯಲು ಶಿರಾಡಿಯಿಂದ 108 ಆಂಬುಲೆನ್ಸ್ ಬರಬೇಕಾಯಿತು. ಇದರಿಂದಾಗಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಅರ್ಧತಾಸು ವಿಳಂಬವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಯಿತು.

LEAVE A REPLY

Please enter your comment!
Please enter your name here