







ಮಂಗಳೂರು : ಸಹಕಾರಿ ರಂಗದ ಧ್ರುವತಾರೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಇದೀಗ ಚಿತ್ರರಂಗದಲ್ಲೂ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ಅವರ ಒಡೆತನದ ‘ಎಂ.ಎನ್.ಆರ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚೊಚ್ಚಲ ಚಿತ್ರ “ವಾದಿರಾಜ ವಾಲಗ ಮಂಡಳಿ”ಯ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ರಾಜ್ಯದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳಲಿದೆ.


ನಿರ್ದೇಶನದ ಹೊಸ ಆಯಾಮ
‘ವರಾಹ ರೂಪಂ’ ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದು, ಕರಾವಳಿಯ ನೈಜ ಸೊಗಡಿನೊಂದಿಗೆ, ಕುಟುಂಬ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಹಾಸ್ಯ, ಭಾವನಾತ್ಮಕ ಸನ್ನಿವೇಶಗಳು ಮತ್ತು ಸಾಮಾಜಿಕ ಸಂದೇಶವನ್ನು ಈ ಚಿತ್ರದಲ್ಲಿ ಹೆಣೆದಿದ್ದಾರೆ.



ತಾರಾಬಳಗದ ದಂಡು
ಈ ಸಿನಿಮಾದಲ್ಲಿ ಕರಾವಳಿಯ ಪ್ರತಿಭಾವಂತ ಕಲಾವಿದರ ದೊಡ್ಡ ಪಡೆಯೇ ಇದೆ. ‘ಗುಂಡುಮಾಮ’ ಖ್ಯಾತಿಯ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೋಳಾರ್ ಅವರ ನಟನೆ ಪ್ರೇಕ್ಷಕರಿಗೆ ನಗೆಗಡಲನ್ನು ಉಣಬಡಿಸಲಿದೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಕಾಣಿಸಿಕೊಂಡರೆ, ತನ್ವಿ ರಾವ್ ಮತ್ತು ವೆನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ.ಜೊತೆಗೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಶೋಭರಾಜ್ ಪಾವೂರು, ಚೇತನ್ ರೈ ಮಾಣಿ ಸೇರಿದಂತೆ ಹಲವು ಅನುಭವಿ ಕಲಾವಿದರು ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.
ತಾಂತ್ರಿಕ ಶ್ರೀಮಂತಿಕೆ- ಛಾಯಾಗ್ರಹಣ: ಹೈ-ಬಜೆಟ್ ಸಿನಿಮಾಗಳಲ್ಲಿ ಬಳಸುವ “Arri F” ವಿಶೇಷ ಕ್ಯಾಮೆರಾವನ್ನು ಬಳಸಿ, ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಅವರು ಅದ್ಭುತ ದೃಶ್ಯ ವೈಭವವನ್ನು ಸೆರೆಹಿಡಿದಿದ್ದಾರೆ.
‘ಸವಾರಿ’ ಖ್ಯಾತಿಯ ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ಹಿಂದಿ ಚಿತ್ರರಂಗದ ಖ್ಯಾತ ಗಾಯಕರು ಮತ್ತು ವಿಘ್ನೇಶ್, ಮೈಮ್ ರಾಮದಾಸ್ ಧ್ವನಿಯಾಗಿದ್ದಾರೆ. ಸ್ಟಂಟ್ ಮಾಸ್ಟರ್ ಟೈಗರ್ ಶಿವು ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ಪೂರಕವಾಗಿದೆ.
ಬಹುಭಾಷೆಯಲ್ಲಿ ಬಿಡುಗಡೆ
ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗದೆ, ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡುವ ಮಹತ್ವದ ಯೋಜನೆಯನ್ನು ಚಿತ್ರತಂಡ ಹೊಂದಿದೆ. ಕಷ್ಟಪಟ್ಟು 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಬೆಂಬಲಿಸುವಂತೆ ನಿರ್ದೇಶಕ ಶಶಿರಾಜ್ ಕಾವೂರು ಮನವಿ ಮಾಡಿದ್ದಾರೆ.
ಈ ನಗೆಯ ಸವಾರಿ ಆಗಸ್ಟ್ನಲ್ಲಿ ಬೆಳ್ಳಿತೆರೆಗೆ ಬರಲಿದ್ದು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ಹೊಸ ಅನುಭವವನ್ನು ಪಡೆಯಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಅರ್ಜುನ್ ವೇದಾಂತ್, ವೆನ್ಯ ರೈ, ಮೈಮ್ ರಾಮದಾಸ್, ರಾಜೇಶ್ ಕುಡ್ಲ, ಶೋಭರಾಜ್ ಪಾವೂರು, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಳ್ಯೊಟ್ಟು ಉಪಸ್ಥಿತರಿದ್ದರು.










