ಉಪ್ಪಿನಂಗಡಿ ಚಂದ್ರನಾಥ ಸ್ವಾಮಿ ಬಸದಿ ಪುನರ್ ಪ್ರತಿಷ್ಠಾ ಮಹೋತ್ಸವ

0

ಧರ್ಮ ರಕ್ಷಣೆಯೊಂದಿಗೆ ಮಕ್ಕಳ ರಕ್ಷಣೆಯೂ ನಡೆಯಲಿ: ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ

ಉಪ್ಪಿನಂಗಡಿ: ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಶಿಕ್ಷಣ , ಉದ್ಯೋಗದ ಹೆಸರಿನಲ್ಲಿ ಮತಾಂಧ ಶಕ್ತಿಗಳ ವ್ಯವಸ್ಥಿತ ದುರುಳತನದ ವರ್ತುಲದೊಳಗೆ ಸಿಲುಕುತ್ತಿರುವ ಮಕ್ಕಳನ್ನು ರಕ್ಷಿಸುವಲ್ಲಿ ಹೆತ್ತವರು ಹಾಗೂ ಪೋಷಕರು ಹೆಚ್ಚಿನ ನಿಗಾವಿರಿಸಬೇಕಾಗಿದೆ. ಧರ್ಮ ರಕ್ಷಣೆಯ ಕಾರ್ಯದೊಂದಿಗೆ ಮಕ್ಕಳ ರಕ್ಷಣೆಯ ಕಾರ್ಯವೂ ಆದ್ಯತೆಯಲ್ಲಿ ನಡೆಯಬೇಕಾಗಿದೆ ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿ ಮಠ ನರಸಿಂಹರಾಜಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಕರೆ ನೀಡಿದರು.


ಉಪ್ಪಿನಂಗಡಿ ಗಾಂಧಿಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯುತ್ತಿರುವ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ 4ನೇ ದಿನವಾದ ಮೇ 2ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೈನ ಧರ್ಮ ಈ ದೇಶದ ಇತಿಹಾಸದಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಈ ಕಾರಣಕ್ಕೆ ರಾಜ್ಯ ಸರಕಾರವೇ ಆಗಿರಲಿ ಕೇಂದ್ರ ಸರಕಾರವೇ ಆಗಿರಲಿ ಜೈನ ಧರ್ಮ ಸಂಸ್ಥೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕು. ಎಲ್ಲೆಡೆಯಿಂದಲೂ ಜಿನ ಸ್ಮರಣೆ ಮಾಡುವ ಸಲುವಾಗಿ ಬಸದಿಯಲ್ಲಿನ ಮಾನಸ್ತಂಭದಲ್ಲಿ ಚತುರ್ಮುಖ ಜಿನ ಬಿಂಬಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಸರಕಾರದ ಮಾಜಿ ಸಚಿವ ಅಭಯಚಂದ್ರ ಜೈನ ಮಾತನಾಡಿ , ಸಿದ್ದರಾಮಯ್ಯ ಸರಕಾರ ಜೈನ ಬಸದಿಗಳಿಗೆ ಗರಿಷ್ಠ ಸಾಧ್ಯ ಅನುದಾನವನ್ನು ಒದಗಿಸಿದ್ದಲ್ಲದೆ, ಜೈನರಿಗೂ ಮಂತ್ರಿ ಪಟ್ಟ ನೀಡಿ ಜೈನ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.


ಕದಿಕಾರು ಭಗವಾನ್ ಚಂದ್ರನಾಥ ಸ್ವಾಮಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಧನ್ಯಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ , ಎಕ್ಸಲೆಂಟ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಯುವರಾಜ ಜೈನ್, ಸುರ್ಯದ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ , ಉದ್ಯಮಿ ಮಹಾವೀರ್ ಜೈನ್ , ನ್ಯಾಯವಾದಿ ಶ್ವೇತಾ ಜೈನ್, ಸೇವಾದಾರರಾದ ನಾಭಿರಾಜ ಪೂವಣಿ, ಯಶೋಧರ ಪೂವಣಿ, ಶಾಂತಿಪ್ರಕಾಶ್, ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ವಿಧ್ಯಾಧರ ಜೈನ್ ಉಪಸ್ಥಿತರಿದ್ದರು.
ಮಿತ್ರಸೇನ ಜೈನ್ ಸ್ವಾಗತಿಸಿದರು. ಅಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.


ಬಸದಿಯಲ್ಲಿ ಶನಿವಾರದಂದು ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ರಾಜ್ಯಾಭಿಷೇಕ ವಿಧಿ, ಪರಿನಿಷ್ಕ್ರಮಣ ಕಲ್ಯಾಣ , ದೀಕ್ಷಾಕಲ್ಯಾಣ ವಿಧಿ, ಶ್ರೀ ಗಣಧರವಲಯ ಆರಾಧನಾ ವಿಧಾನ , ಪಂಚ ಕಲ್ಯಾಣ ಆರಾಧನಾ ವಿಧಾನ , ಶ್ರೀ ಸ್ವಾಮಿಗೆ ನವ ಕಲಶಾಭಿಷೇಕ, ಮಹಾಪೂಜೆ. ಮಹಾಮಂಗಳಾರತಿ, ಶ್ರೀ ಜಿನಗಂಧೋಧಕ ವಿಧಿವಿಧಾನಗಳು ನಡೆದವು. ಸೇವಾಕರ್ತೃಗಳಾಗಿ ಪ್ರತಿಭಾ, ಶಾಂತಿಪ್ರಕಾಶ್, ಜಯಮಾಲಾ, ನಾಭಿರಾಜ ಪೂವಣಿ, ಸುಮನಾ, ಯಶೋಧರ ಪೂವಣಿ ಸಹಕರಿಸಿದರು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ ಕೆ.ಜಿ. ಭಟ್, ಡಾ . ಸುಪ್ರೀತ್ ಲೋಬೋ , ಕೈಲಾರು ರಾಜಗೋಪಾಲ ಭಟ್, ಅಶ್ರಫ್ ಬಸ್ತಿಕಾರ್, ಇಸ್ಮಾಯಿಲ್ ಇಕ್ಬಾಲ್, ಇಸ್ಮಾಯಿಲ್ ಮೈನಾ, ಅಜೀಜ್ ಬಸ್ತಿಕಾರ್, ರಾಜಶೇಖರ್ ಜೈನ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಜ್ರಕುಮಾರ್ ಜೈನ್ , ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ , ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್ , ನಿರಂಜನ್ ಕೊಂಡೆ, ಅರುಣಾ ಡಿ. ರೈ , ಸಮಂತ್ ನೆಲ್ಯಾಡಿ, ಪುನೀತ್ ನೆಲ್ಯಾಡಿ, ಉದಯ ಕುಮಾರ್ ಜೈನ್ , ಅಭಯ್ ಜೈನ್, ವಿಜೇತ್ ಜೈನ್, ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಮಹೇಶ್ ಪಡಿವಾಳ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here