







ವರದಿ : ನಿಶಾಕಿರಣ್ ಬಾಳೆಪುಣಿ


ಆರೋಗ್ಯವೇ ಭಾಗ್ಯ. ಆರೋಗ್ಯವೊಂದು ಇದ್ದರೆ ಏನನ್ನೂ ಸಾಧಿಸಬಲ್ಲೆವು. ಸಂಪತ್ತು ಐಶ್ವರ್ಯವಿದ್ದರೇನು ಫಲ ? ಆರೋಗ್ಯವಿಲ್ಲದೊಡೆ? ಅಂತಹ ಆರೋಗ್ಯ ದಯಪಾಲಿಸುವ ವೈದ್ಯರ ಕುರಿತು ಈ ಸಮಾಜ ಸದಾ ಗೌರವ ಭಾವ ತಾಳುತ್ತದೆ. ತನ್ನ ಸಮಾಜವು ಆರ್ಥಿಕತೆಯ ಕೊರತೆಯಿಂದಾಗಿ ಅನಾರೋಗ್ಯಕ್ಕೆ ಈಡಾಗಬಾರದು ಎಂಬ ವಿಶೇಷ ಕಾಳಜಿಯೊಂದಿಗೆ ನಿರಂತರವಾಗಿ ಉಚಿತ ವೈದ್ಯಕೀಯ ಶಿಬಿರ ನಡೆಸಿ ತನ್ನ ಸತತ ಪ್ರಯತ್ನದಲ್ಲಿ ಪ್ರತೀ ತಿಂಗಳಿಗೊಂದರಂತೆ 50 ಶಿಬಿರಗಳನ್ನು ಸಂಯೋಜಿಸಿದ ಓರ್ವ ಮಹಾನುಭಾವ ವೈದ್ಯರಾಗಿ ಕಾಣಿಸಿಕೊಂಡವರು ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಸುರೇಶ್ ಪುತ್ತೂರಾಯರು. ಸತ್ಚಿಂತನೆ ಮತ್ತು ಸದುದ್ದೇಶದ ಪ್ರಯತ್ನಗಳು ಬಲು ಬೇಗನೆ -ಲಕೊಡುತ್ತವೆ ಎಂಬುದಕ್ಕೆ ಇವರ ನೇತೃತ್ವದಲ್ಲಿ ಸಂಪ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರ ಒಂದು ಉತ್ತಮ ನಿದರ್ಶನವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಬೇಕೆಂಬ ಸದುದ್ದೇಶ ಇಂದು ತನ್ನ ಪಥವನ್ನು ಇನ್ನಷ್ಟು ವ್ಯಾಪಿಸಿ ಸಾವಿರಾರು ಮಂದಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತಿದೆ ಎಂದರೆ ಇಲ್ಲಿ ಮಹಾವಿಷ್ಣುವು ಧನ್ವಂತರಿಯಾಗಿ ಅನುಗ್ರಹಿಸುತ್ತಿದ್ದಾನೆ ಎಂದರೆ ತಪ್ಪಾಗಲಾರದು.



ವೈದ್ಯ ವೃತ್ತಿ ನಡೆಸುತ್ತಾ ಉತ್ತಮ ಸಂಪಾದನೆಯ ದಾರಿಯನ್ನೂ ಕಂಡುಕೊಳ್ಳುವ ಅನೇಕ ವೈದ್ಯರುಗಳ ಮಧ್ಯೆ ತನ್ನ ವೃತ್ತಿ ಧರ್ಮದ ಜೊತೆಗೆ ಸಮಾಜವು ಆರೋಗ್ಯದಿಂದಿರಲು ನಿರಂತರ ವೈದ್ಯಕೀಯ ಶಿಬಿರ ಸಂಯೋಜಿಸಿದ ಡಾ. ಸುರೇಶ್ ಪುತ್ತೂರಾಯರು ವಿಭಿನ್ನರಾಗಿ ಕಾಣಿಸಿಕೊಂಡಿದ್ದಾರೆ. ಇವರು ವೃತ್ತಿ ನಡೆಸುತ್ತಿರುವ ಮಹಾವೀರ ಆಸ್ಪತ್ರೆಯಲ್ಲಿ ಇವರು ಸಲಹೆಗೆ ದೊರಕಬೇಕಾದರೆ ನಿಯಮಬದ್ದ ಟೋಕನ್ ವ್ಯವಸ್ಥೆಯಿದೆ. ಆದರೆ ತನ್ನ ಊರಾದ ಸಂಪ್ಯದಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರ ಇವರು ಜನಸಾಮಾನ್ಯರ ಆರೋಗ್ಯ ತಪಾಸಣೆ, ಸಲಹೆ, ಚಿಕಿತ್ಸೆ ನೀಡಲು ಕಟಿ ಬದ್ದರಾಗಿರುತ್ತಾರೆ.
ಒಂದೆರಡರಲ್ಲಿ ನಿಂತಿಲ್ಲ:
ಸಾಮಾನ್ಯವಾಗಿ ಇಂತಹ ವೈದ್ಯಕೀಯ ಶಿಬಿರಗಳು ಕೆಲವೊಮ್ಮೆ ಸಂಘ ಸಂಸ್ಥೆಗಳ ಪ್ರಚಾರಕ್ಕಾಗಿ ನಡೆಸಲ್ಪಟ್ಟು ಒಂದು ಎರಡು ಶಿಬಿರಗಳಲ್ಲಿ ನಿಂತು ಬಿಡುತ್ತವೆ. ಆದರೆ ಇಲ್ಲಿ ಪ್ರತಿ ತಿಂಗಳು ಬೇರೆ ಬೇರೆ ತಜ್ಞ ವೈದ್ಯರುಗಳನ್ನು ಕರೆಸಿ ಜನರ ಆರೋಗ್ಯ ತಪಾಸಣೆ ನಡೆಸುತ್ತಾ ಬರಲಾಗಿದೆ. ಪ್ರತಿ-ಲಾಪೇಕ್ಷೆಯಿಲ್ಲದೇ ವೈದ್ಯರುಗಳು ಬಂದು ಇಲ್ಲಿ ಶಿಬಿರ ನಡೆಸಿರುವುದರ ಹಿಂದೆ ಡಾ. ಸುರೇಶ್ ಪುತ್ತೂರಾಯರ ಶ್ರಮ ಅಗಾಧವಾದುದು. ಡಯಾಬಿಟೀಸ್, ಬಿಪಿ ಯಂತಹ ಸಾಮಾನ್ಯ ರೋಗ ಸ್ಥಿತಿಗಳಿಂದ ಸಮಾಜ ನಲುಗುತ್ತಿರುವಾಗ ಈ ಶಿಬಿರ ಸಾವಿರಾರು ಮಂದಿಗೆ ವರದಾನವಾಗಿ ಪರಿಣಮಿಸಿದೆ.
ಗ್ರಾಮ ದೇಗುಲಗಳು ಆರೋಗ್ಯ ಪ್ರಸಾದವನ್ನೂ ನೀಡಬೇಕು:
ತನ್ನ ಊರು ಸಂಪ್ಯದ ದೇವಸ್ಥಾನದಲ್ಲಿ ಶಿಬಿರ ನಡೆಸಿ ಯಶಸ್ಸು ಕಂಡಿರುವ ಡಾ. ಪುತ್ತೂರಾಯರು ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸಿದಾಗ ಪ್ರತೀ ಗ್ರಾಮದ ದೇವಸ್ಥಾನಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಬೇಕೆಂದು ಸಲಹೆ ನೀಡುತ್ತಾ ಬಂದಿರುವುದು ಇವರ ವೃತ್ತಿ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ.
ಹಲವು ಸಂಘ ಸಂಸ್ಥೆಗಳ ಸಹಕಾರ:
ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸಂಪ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯರ ಪರಿಕಲ್ಪನೆಯಲ್ಲಿ ಈ ಯೋಜನೆ 2022ರ ಎಪ್ರಿಲ್ 3ರಂದು ಪ್ರಾರಂಭಗೊಂಡಿತು. ಡಾ.ಸುರೇಶ್ ಪುತ್ತೂರಾಯ ಅವರ ಕನಸಿನ ಯೋಜನೆಗೆ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಹಾಗೂ ಐಕ್ಯಕಲಾ ಸೇವಾ ಟ್ರಸ್ಟ್, ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ನುರಿತ ವೈದ್ಯರುಗಳ ತಂಡ, ಹಲವು ಔಷಧ ಕಂಪನಿಗಳು, ಜನೌಷಽ ಕೇಂದ್ರಗಳು, ಧನ್ವಂತರಿ ಮತ್ತು ಐಡಿಯಲ್ ಲ್ಯಾಬೋರೇಟರಿಗಳು ಹಾಗೂ ದಾನಿಗಳು ಮತ್ತು ಭಕ್ತಾದಿಗಳು ಕಳೆದ 49 ಶಿಬಿರಗಳಲ್ಲಿ ನಿರಂತರವಾಗಿ ಕೈಜೋಡಿಸುತ್ತಿದ್ದಾರೆ. ಅನೇಕ ದಾನಿಗಳು ಸ್ವಯಂಪ್ರೇರಿತರಾಗಿ ಶಿಬಿರದ ಖರ್ಚು ವೆಚ್ಚಗಳಿಗಾಗಿ ದೇಣಿಗೆ ನೀಡುತ್ತಿರುವುದು ತಂಡದ ಉತ್ಸಾಹ ಇಮ್ಮಡಿಗೊಳಿಸಿದೆ.
ಡಾ. ಗೌರಿ ಪೈಯವರ ಆಶೀರ್ವಾದ:
ಈ ಶಿಬಿರದ ಪ್ರಥಮ ಕಾರ್ಯಕ್ರಮವನ್ನು ಹಿರಿಯ ವೈದ್ಯೆ ಡಾ. ಗೌರಿ ಪೈಯವರು ಉದ್ಘಾಟಿಸಿ ನಗದು ನೆರವನ್ನೂ ನೀಡಿದ್ದರು. ‘ಈ ಶಿಬಿರ ಯಾವತ್ತೂ ನಿಲ್ಲಬಾರದು. ಒಂದು ವೇಳೆ ನಿಂತರೆ ನಾನೇ ಬಂದು ಶಿಬಿರ ಮುನ್ನಡೆಸುತ್ತೇನೆ’ ಎಂದಿದ್ದ ಗೌರಿ ಪೈಯವರನ್ನು 50 ನೇ ಶಿಬಿರಕ್ಕೆ ಆಹ್ವಾನಿಸಲಾಗಿದೆ. ‘ಅವರ ಆಶೀರ್ವಾದ ಮತ್ತು ನುಡಿದ ರೀತಿಯಲ್ಲಿ ಶಿಬಿರ ನಿಂತಿಲ್ಲ. ನಿರಂತರಾಗಿ ಮುಂದುವರಿಯುತ್ತಿದೆ’ ಎನ್ನುತ್ತಾರೆ ಡಾ. ಪುತ್ತೂರಾಯರು.
ಸ್ವಯಂ ಸೇವಕರ ಪರಿಶ್ರಮ:
ಈ ಶಿಬಿರದ ಯಶಸ್ಸಿನ ಹಿಂದೆ ಅನೇಕ ಸ್ವಯಂಸೇವಕರ ಕಾರ್ಯವನ್ನು ಡಾ. ಪುತ್ತೂರಾಯರು ನೆನಪಿಸಿಕೊಳ್ಳುತ್ತಾರೆ. ಔಷಽಗಳ ಜೋಡಣೆ, ಊಟ ಉಪಾಹಾರ ಸೇರಿದಂತೆ ಶಿಬಿರದ ಎಲ್ಲಾ ಕೆಲಸ ಕಾರ್ಯಗಳಿಗೆ 40-50 ಸ್ವಯಂಸೇವಕರ ತಂಡ ನಿರಂತರವಾಗಿ ಉತ್ಸಾಹಭರಿತವಾಗಿ ಕಾರ್ಯನಿರ್ವಹಿಸುತ್ತಿದೆ.
ಇದೊಂದು ಮಾದರಿ ಶಿಬಿರ:
ಸಂಪ್ಯ ದೇವಳದಲ್ಲಿ ನಡೆಯುತ್ತಿರುವ ವೈದ್ಯಕೀಯ ಶಿಬಿರ ಇಂದು ಜಿಲ್ಲೆಯಲ್ಲಿ ಮಾದರಿ ಎನಿಸಿದೆ. ಜಿಲ್ಲೆಯ ನಾನಾ ಕಡೆ ಹಲವು ಶಿಬಿರಗಳ ಆಯೋಜನೆಗೆ ಈ ಶಿಬಿರ ಸ್ಪೂರ್ತಿ ನೀಡಿದೆ.
ರಾಷ್ಟ್ರೀಯ ಪ್ರಶಸ್ತಿಯ ಗರಿ:
ಉಚಿತ ವೈದ್ಯಕೀಯ ಶಿಬಿರದ ಆಯೋಜನೆಯ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಮತ್ತು ಆರೋಗ್ಯ ಜಾಗೃತಿಗಾಗಿ ಶಿಬಿರದ ಸಂಸ್ಥಾಪಕರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರಿಗೆ 2024ರಲ್ಲಿ ನಡೆದ 14ನೇ ವಿಶ್ವ ಸಮೇಳನದಲ್ಲಿ ‘ಡಯಾಬಿಟೀಸ್ ಅವೇರ್ನೆಸ್ ಇನಿಶಿಯೇಟಿವ್ ಅವಾರ್ಡ್’ ರಾಷ್ಟ್ರೀಯ ಪುರಸ್ಕಾರ ದೊರೆತಿದ್ದು ಸಂಪ್ಯದ ವೈದ್ಯಕೀಯ ಶಿಬಿರದ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಹಲವು ತಜ್ಞರುಗಳ ಭೇಟಿ:
ಜನರಲ್ ಮೆಡಿಸಿನ್, ಹೃದ್ರೋಗ ಮತ್ತು ಶ್ವಾಸಕೋಶ ಚಿಕಿತ್ಸೆ, ಶಸ ಚಿಕಿತ್ಸಾ ವೈದ್ಯರಿಂದ ತಪಾಸಣೆ, ಮಕ್ಕಳ ಚಿಕಿತ್ಸೆ, ಸೀರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಕಿವಿ, ಗಂಟಲು, ಮೂಗು ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ ಹಾಗೂ ಹೋಮಿಯೋಪತಿ ಚಿಕಿತ್ಸೆಗಳನ್ನು ಶಿಬಿರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಇಸಿಜಿ, ಮಧುಮೇಹ ರಕ್ತ ಪರೀಕ್ಷೆ, ರಕ್ತದ ಒತ್ತಡ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ, ಎಲುಬು ಸಾಂದ್ರತೆಯ ಪರೀಕ್ಷೆ ಹಾಗೂ ಔಷಽಗಳು ಎಲ್ಲವೂ ಒಂದೇ ಸೂರಿನಡಿಯಲ್ಲಿ ದೊರೆಯುತ್ತಿರುವುದು ಶಿಬಿರದ ಇನ್ನೊಂದು ವಿಶೇಷತೆಯಾಗಿದೆ.
1 ಕೋಟಿ ರೂ. ಖರ್ಚು ವೆಚ್ಚದ ಆರೋಗ್ಯ ಸೇವೆ:
ಶಿಬಿರದಲ್ಲಿ ದಾನಿಗಳು ದೇಣಿಗೆ ರೂಪದಲ್ಲಿ ಸಹಕರಿಸುತ್ತಿದ್ದಾರೆ. ಪ್ರತಿ ಶಿಬಿರಕ್ಕೆ ಸುಮಾರು 1.5 ಲಕ್ಷದಿಂದ 2 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ರೂ. 1 ಕೋಟಿಗೂ ಅಧಿಕ ಮೊತ್ತವನ್ನು ವೈದ್ಯಕೀಯ ಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಸುಮಾರು 1೦,೦೦೦ಕ್ಕೂ ಅಽಕ ಮಂದಿ ವಿವಿಧ ಚಿಕಿತ್ಸೆ ಹಾಗೂ ಔಷಧಿಗಳನ್ನು ಉಚಿತವಾಗಿ ಪಡೆದುಕೊಂಡಿರುತ್ತಾರೆ.
ಒಟ್ಟಿನಲ್ಲಿ ವೈದ್ಯಕೀಯ ಶಿಬಿರಗಳ ಆಯೋಜನೆಯಲ್ಲಿ ಡಾ. ಸುರೇಶ್ ಪುತ್ತೂರಾಯರ ಶಿಬಿರ ಸರಿಸಾಟಿಯಿಲ್ಲದ್ದು. ಶಿಬಿರ ನಿರಂತರ ಮುಂದುವರಿದು ಜನರ ಆರೋಗ್ಯಕ್ಕಾಗಿ 100ರತ್ತ ಸಾಗಲಿ ಎಂಬುದೇ ಎಲ್ಲರ ಆಶಯ.
ನಾನು ಮಾಡಿದ್ದೇನೆ ಅನ್ನುವುದಕ್ಕಿಂತ ನಮ್ಮವರಿಂದ ಆಗಿದೆ ಎನ್ನುವ ಖುಷಿ ಇದೆ
ನಾನು ಮಾಡಿದ್ದೇನೆ ಅನ್ನುವುದಕ್ಕಿಂತ ನಮ್ಮವರಿಂದ ಆಗಿದೆ ಎನ್ನುವ ಖುಷಿ ನನಗಿದೆ. ನಾನು ನಿಮಿತ್ತ ಮಾತ್ರ ಎಲ್ಲರೂ ನನಗೆ ಹೆಗಲಿಗೆ ಹೆಗಲು ಕೊಟ್ಟದ್ದರಿಂದ ೫೦ನೇ ಶಿಬಿರಕ್ಕೆ ನಾವು ಮುಂದಡಿ ಇಟ್ಟಿದ್ದೇವೆ. ಸಾರ್ವಜನಿಕರಿಗೆ ಉಪಯೋಗ ಆಗಲಿ ಎನ್ನುವ ಉದ್ದೇಶದಿಂದ ಈ ಒಂದು ಶಿಬಿರವನ್ನು ಆರಂಭಿಸಲಾಗಿದೆ. ನಮ್ಮಲ್ಲಿಂದ ಸ್ಪೂರ್ತಿ ಪಡೆದು ಇದೀಗ ಬೇರೆಬೇರೆ ಕಡೆಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಅದು ಬಹಳಷ್ಟು ಖುಷಿಯಾಗ್ತದೆ. ಈ ಒಂದು ಶಿಬಿರಕ್ಕೆ ಸಹಕಾರ ನೀಡಿದವರು ಹಲವು ಮಂದಿ ಇದ್ದಾರೆ. ಒಬ್ಬನಿಂದ ಇದು ಆಗಿರುವುದಲ್ಲ. ನಮ್ಮ ತಂಡದಲ್ಲಿರುವವರೆಲ್ಲರೂ ಪ್ರತಿಫಲಾಪೇಕ್ಷೆ ಇಲ್ಲದೆ ಬರುವವರಾಗಿದ್ದಾರೆ. ನಮ್ಮ ಈ ಒಂದು ಶಿಬಿರದಿಂದಾಗಿ ದೇವಸ್ಥಾನದ ಹಲವಾರು ಅಭಿವೃದ್ಧಿ ಕಾರ್ಯಗಳೂ ನಡೆದಿದೆ. ಜಾತಿ ಭೇದವಿಲ್ಲದೆ ಎಲ್ಲರೂ ಈ ಒಂದು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಸಂತಸವಾಗುತ್ತಿದೆ.
-ಡಾ. ಸುರೇಶ್ ಪುತ್ತೂರಾಯ, ವೈದ್ಯಕೀಯ ತಜ್ಞರು , ಮಹಾವೀರ ಆಸ್ಪತ್ರೆ ಪುತ್ತೂರು
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ
ಸಮಾಜದ ಕಟ್ಟ ಕಡೆಯ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಈ ಒಂದು ಶಿಬಿರ ಆಯೋಜಿಸಿದ್ದಾರೆ
ಡಾ.ಸುರೇಶ್ ಪುತ್ತೂರಾಯ ಅವರು ವೃತ್ತಿಗೆ ಸೀಮಿತವಾಗಿರದೆ ಸಮಾಜದ ಕಟ್ಟ ಕಡೆಯ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಶಿಬಿರ ಆರಂಭಿಸಿದ್ದಾರೆ. ಈ ಶಿಬಿರವು ಯಶಸ್ವಿಯಾಗಿ ಐವತ್ತು ತಿಂಗಳುಗಳಿಂದ ಮುನ್ನಡೆಯುತ್ತಿದೆ. ಶಿಬಿರಕ್ಕೆ ಭಕ್ತಾದಿಗಳ ಸಹಕಾರ ದೊರೆತಿದೆ. ಡಾ.ಸುರೇಶ್ ಪುತ್ತೂರಾಯ ಅವರ ಕನಸಿನ ಯೋಜನೆ ಮೂಲಕ ಆರೋಗ್ಯ ಸೇವೆಯಲ್ಲಿ ಕೈ ಜೋಡಿಸಿದ ನಮಗೂ ಸಮಾಜದ ಸೇವೆ ಮಾಡುವ ಅವಕಾಶ ದೊರೆತಿದೆ.
-ಉದಯ ಕುಮಾರ್ ರೈ ಸಂಪ್ಯ , ಅಧ್ಯಕ್ಷರು, ಆರೋಗ್ಯ ರಕ್ಷಾ ಸಮಿತಿ
ಶಿಬಿರಾರ್ಥಿಗಳ ಅನಿಸಿಕೆಗಳು
ಡಾ. ಸುರೇಶ್ ಪುತ್ತೂರಾಯರು ನಮ್ಮ ಪಾಲಿನ ಧನ್ವಂತರಿ ಎಂದೇ ಹೇಳಬೇಕಷ್ಟೆ. ಇದೊಂದು ನಮ್ಮ ಊರಿನ ಭಾಗ್ಯವಾಗಿದೆ. ಇವರ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಅದೆಷ್ಟೋ ಮಂದಿಗೆ ಪ್ರಯೋಜನವಾಗಿದೆ. ನಾವು ಬೇರೆ ವೈದ್ಯರಲ್ಲಿಗೆ ಹೋಗಬೇಕಾದರೆ ಕ್ಯೂ ನಿಲ್ಲುವ ಪ್ರಮೇಯ ಬರುತ್ತದೆ. ಆದರೆ ಇಲ್ಲಿಯೇ ತಜ್ಞ ವೈದ್ಯರು ಬರುವುದರಿಂದ ನಮ್ಮಂಥವರಿಗೆ ಬಹಳಷ್ಟು ಮಂದಿಗೆ ಸಹಕಾರಿಯಾಗಿದೆ. ಇಲ್ಲಿ ವೈದ್ಯಕೀಯ ಪರೀಕ್ಷೆ, ಔಷದಿ, ಲ್ಯಾಬ್ ಟೆಸ್ಟ್, ಊಟ ತಿಂಡಿ ಎಲ್ಲವೂ ಉಚಿತವಾಗಿದೆ. ಇಂತಹ ಕ್ಯಾಂಪ್ ಎಲ್ಲೂ ನಡೆದಿರಲು ಸಾಧ್ಯವಿಲ್ಲ. ಎಲ್ಲರೂ ಮೆಚ್ಚುವಂತಹ ಕೆಲಸ ಇಲ್ಲಿನ ಸ್ವಯಂ ಸೇವಕರುಗಳಿಂದಲೂ ಆಗುತ್ತಿದೆ. ಈ ಒಂದು ಶಿಬಿರ ನಡೆಸುವಲ್ಲಿ ಡಾ. ಸುರೇಶ್ ಪುತ್ತೂರಾಯರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮುನ್ನಡೆಯುವ ಅವರ ಗುಣ ಇತರರಿಗೆ ಮಾದರಿ.
ಎನ್. ರಾಘವ ಸಂಪ್ಯ, ನಿವೃತ್ತ ಪೋಸ್ಟ್ ಮಾಸ್ಟರ್
ಡಾ. ಸುರೇಶ್ ಪುತ್ತೂರಾಯರು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆಯಾಗಿದೆ
ಡಾ. ಸುರೇಶ್ ಪುತ್ತೂರಾಯರು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆ ಇದಾಗಿದೆ. ಅವರು ಅರ್ಹ ವ್ಯಕ್ತಿಗಳಿಗೋಸ್ಕರ ಈ ಒಂದು ಶಿಬಿರವನ್ನು ಆಯೋಜನೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಾಗಲಿ ಶಿಬಿರದಲ್ಲಾಗಲಿ ಶ್ರೀಮಂತರೇ ಬರಲಿ ಬಡವರೇ ಬರಲಿ ಎಲ್ಲರಿಗೂ ಒಂದೇ ತರನಾಗಿ ಚಿಕಿತ್ಸೆ ನೀಡುವವರು ಅವರು. ನಾನೂ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದೇನೆ. ನಮ್ಮಂತ ಹಲವರಿಗೆ 1೦೦% ಪ್ರಯೋಜನವಾಗಿದೆ. ಯಾವುದೇ ಸದ್ದು ಗದ್ದಲವಿಲ್ಲದೆ ಅಷ್ಟೊಂದು ಅಚ್ಚು ಕಟ್ಟಾದ ವ್ಯವಸ್ಥೆಯಲ್ಲಿ ಶಿಬಿರ ನಡೆಯುತ್ತಿದೆ. ಇದೊಂದು ಜನೋಪಯೋಗಿ ಕ್ಯಾಂಪ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಸಮಿತಿ ಸದಸ್ಯರು ಸೇರಿದಂತೆ ಸಹಕರಿಸುವ ಸಂಘ ಸಂಸ್ಥೆಯವರು ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಸುರೇಶ್ ಪುತ್ತೂರಾಯರ ಈ ಒಂದು ನಿಸ್ವಾರ್ಥ ಸೇವೆ ಇತರರಿಗೆ ಮಾದರಿ.
-ಕೃಷ್ಣವೇಣಿ ಮುರ
ಬಡವ ಬಲ್ಲಿದರೆಂಬ ಭೇದವಿಲ್ಲ ಇಲ್ಲಿಎಲ್ಲರೂ ಸಮಾನರು
ದೇವರ ಸನ್ನಿಧಿಯಲ್ಲಿ ನಡೆಯುವ ಈ ಒಂದು ಶಿಬಿರದಲ್ಲಿ ನಾನೂ ಭಾಗವಹಿಸಿದ್ದೇನೆ. ಬಹಳಷ್ಟು ಖುಷಿಯಾಗುತ್ತದೆ. ಯಾಕಂದ್ರೆ ದೊಡ್ಡ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡುವ ರೀತಿಯಲ್ಲಿ ಸಾವಧಾನವಾಗಿ ಇಲ್ಲಿ ನಮ್ಮನ್ನು ಟೆಸ್ಟ್ ಮಾಡ್ತಾರೆ. ಔಷಧಿ ಊಟ ಎಲ್ಲವೂ ಇಲ್ಲಿ ಉಚಿತವೇ. ಬಡವ ಬಲ್ಲಿದರೆಂಬ ಭೇದ ಇಲ್ಲಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ಟೆಸ್ಟ್ ಮಾಡ್ತಾರೆ, ಔಷಧಿ ನೀಡ್ತಾರೆ. ಎಲ್ಲವನ್ನೂ ಉಚಿತವಾಗಿ ನೀಡಿ ಇಂತಹ ಶಿಬಿರ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಡಾ. ಸುರೇಶ್ ಪುತ್ತೂರಾಯರವರ ಹೃದಯ ಶ್ರೀಮಂತಿಕೆ ಇಲ್ಲಿ ಕಾಣುತ್ತದೆ. ಈ ಶಿಬಿರದಿಂದ ಇನ್ನಷ್ಟು ಜನರಿಗೆ ಪ್ರಯೋಜನವಾಗಲಿ.
-ರಾಮಣ್ಣ ಗೌಡ ಬೆಟ್ಟಂಪಾಡಿ










