






ತಾಳ್ಮೆ, ಸಂಯಮ ಗುಣವಿದ್ದಾಗ ಧರ್ಮದ ಅರಿವು ಸಾಧ್ಯ: ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ


ಉಪ್ಪಿನಂಗಡಿ: ಧರ್ಮವನ್ನು ವಿವೇಕ, ವೈರಾಗ್ಯ ಚಿತ್ತದಿಂದ ಅನುಭವಿಸಬೇಕು. ತಾಳ್ಮೆ, ಸಂಯಮ ಗುಣವನ್ನು ಹೊಂದಿದಾಗ ಮಾತ್ರ ಧರ್ಮವನ್ನು ಸರಿಯಾಗಿ ಅರಿತುಕೊಂಡು ಅದರ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಮೂಡಬಿದ್ರೆ ಜೈನ ಮಠದ ಭಾರತಭೂಷಣ ಶ್ರೀ ಭಟ್ಟಾರಕ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.



ಉಪ್ಪಿನಂಗಡಿ ಗಾಂಧಿಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ
ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ ಸಮಾಪನದ ದಿನವಾದ ಮೇ ೩ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ದ.ಕ., ಉಡುಪಿ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲಾ ಬಸದಿಯ ಪ್ರತಿಷ್ಠಾ ಕಾರ್ಯಗಳು ನಡೆಯುತ್ತಿದೆ. ಅದರಲ್ಲಿ ಕೇವಲ ಬೆರಳೆಣಿಕೆಯಷ್ಟು ಜೈನ ಮನೆಗಳನ್ನು ಹೊಂದಿರುವ ಉಪ್ಪಿನಂಗಡಿಯಂತಹ ಪುಟ್ಟ ಊರಿನಲ್ಲಿರುವ ಪುರಾತನ ಜೈನ ಬಸದಿ ಅತ್ಯಂತ ಸುಂದರವಾಗಿ ಪುನರ್ ನಿರ್ಮಾಣವಾಗಿರುವುದು ಅತ್ಯಂತ ಸಂತೋಷವಾಗಿದೆ. ಈ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮಾತನಾಡಿ, ನಮಗೆ ದೇವರನ್ನು ನೋಡಲು ಸಾಧ್ಯವಿಲ್ಲ. ಆದರೆ ದೇವರು ನಮ್ಮನ್ನು ನೋಡಲು ಸಾಧ್ಯ ಇದೆ. ಹಾಗಾಗಿ ನಾವುಗಳು ದೇವರು ನಮ್ಮನ್ನು ನೋಡುವ ಹಾದಿಯಲ್ಲಿ ಸಾಗಬೇಕು. ಆಗ ಮಾತ್ರ ಜೈನ ತತ್ವ ಪಾಲನೆ ಸಾಧ್ಯ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜೈನ ಸಮುದಾಯ ತ್ಯಾಗ, ಸಮರ್ಪಣಾ ಭಾವ ಹೊಂದಿರುವವರು. ದ.ಕ. ಜಿಲ್ಲೆಯ ದೇವಸ್ಥಾನ, ಮಂದಿರಗಳ ಅಭಿವೃದ್ಧಿಯ ಹಿಂದೆ ಜೈನ ಸಮುದಾಯದ ಕೊಡುಗೆ ಅಪಾರವಾಗಿದೆ. ಬಹಳಷ್ಟು ದೇವಸ್ಥಾನಗಳಿಗೆ ಜಾಗ ನೀಡುವ ಮೂಲಕವೂ ಸಮಾಜದಲ್ಲಿ ಅತ್ಯಂತ ಗೌರವಯುತವಾದ ಧರ್ಮ ಜೈನ ಧರ್ಮವಾಗಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜೈನ ಧರ್ಮ ತುಳುನಾಡಿಗೆ ದೊಡ್ಡ ಕೊಡುಗೆ ನೀಡಿದೆ. ನೂರಾರು ಮನೆಗಳಿರುವ ಊರಿನಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ನಾವೆಲ್ಲ ನೋಡಿದವರು, ಆದರೆ ಕೇವಲ ಜೈನ ಸಮುದಾಯದ 2 ಮನೆಗಳಿರುವ ಉಪ್ಪಿನಂಗಡಿಯಲ್ಲಿ ಅತ್ಯಂತ ಸುಂದರವಾಗಿ ಬಸದಿ ತಲೆಎತ್ತಿ ನಿಂತಿರುವುದು ಜೈನ ಧರ್ಮ ಪಾಲನೆಯ ಸಂದೇಶವನ್ನು ಬಿತ್ತರಿಸಿದೆ ಎಂದರು.
ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಜೈನ್ ಮಾತನಾಡಿ, ಆಂಗ್ಲಾಡಳಿತದ ಅವಧಿಯಲ್ಲಿ ತಾಲೂಕು ಕೇಂದ್ರವಾಗಿಯೂ, ವ್ಯಾಪಾರ ಕೇಂದ್ರವಾಗಿಯೂ ಗುರುತಿಸಲ್ಪಟ್ಟಿದ್ದ ಉಪ್ಪಿನಂಗಡಿಯ 5 ಶತಮಾನಗಳ ಹಿಂದಿನ ಹೆಸರು ’ಕದಿಕಾರು’ ಎಂದಾಗಿತ್ತು. ರಸ್ತೆ , ಸೇತುವೆಗಳು ಇಲ್ಲದ ಅಂದಿನ ದಿನಗಳಲ್ಲಿ ಮಂಗಳೂರಿನಿಂದ ದೋಣಿ ಮೂಲಕ ನೇತ್ರಾವತಿ ನದಿಯಲ್ಲಿ ಉಪ್ಪನ್ನು ತಂದು ಇಲ್ಲಿ ಇಳಿಸಲಾಗುತ್ತಿದ್ದರೆ, ಬಯಲು ಸೀಮೆಯಿಂದ ತಂದ ಭತ್ತವನ್ನು ಇಲ್ಲಿ ಉಪ್ಪಿಗೆ ವಿನಿಮಯ ಮಾಡಲಾಗುತ್ತಿತ್ತು. ಈ ಕಾರಣಕ್ಕೆ ಬಯಲು ಸೀಮೆಯವರು ಕದಿಕಾರನ್ನು ಉಪ್ಪಿನ ಅಂಗಡಿ ಎಂದು ಕರೆಯಲಾರಂಭಿಸಿ ಅದೇ ಹೆಸರು ಅಧಿಕೃತವಾಗಿ ಬಳಕೆಯಾಗತೊಡಗಿತ್ತು. ಉಪ್ಪು ಮತ್ತು ಭತ್ತವನ್ನು ವಿನಿಮಯ ಮಾಡುತ್ತಿದ್ದ ಕಾರಣಕ್ಕೆ ತುಳುವರು ಉಪ್ಪು + ಬಾರ್ = ಉಬಾರ್ ಎಂದು ಕರೆಯತೊಡಗಿ ಅದು ಇಂದಿಗೂ ಅನಧಿಕೃತವಾಗಿ ಬಳಕೆಯಲ್ಲಿದೆ. ಭತ್ತವನ್ನು ರಾಶಿ ಹಾಕಿಡುವ ಸ್ಥಳಕ್ಕೆ ಕದಿಕೆ ಎನ್ನುತ್ತಿದ್ದ ಕಾರಣಕ್ಕೆ ಕದಿಕಾರು ಎಂಬ ಹೆಸರು ಇಲ್ಲಿಗೆ ಬಳಕೆಯಾಗುತ್ತಿತ್ತು. ಉಪ್ಪಿನಂಗಡಿಯ ಜೈನ ಬಸದಿಯನ್ನು ಕದಿಕಾರು ಬೀಡು ಬಸದಿ ಎಂದು ಕರೆಯಲಾಗುತ್ತಿರುವ ನಡೆಯ ಜಾಡು ಹಿಡಿದು ಸಂಶೋಧನೆಗೆ ಇಳಿದಾಗ ಜೈನರಸದ ಕಾಲಘಟ್ಟದಲ್ಲಿ ಈ ಪ್ರದೇಶವನ್ನು ಕದಿಕಾರು ಎಂದೂ, ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಪುನರ್ ನಿರ್ಮಾಣವನ್ನೂ ಕೂಡ ಆಂದಿನ ಬಲ್ಲಾಳ ಅರಸರು ಮಾಡಿರುವುದಾಗಿ ದೈವ ಸೇವೆಯ ತುಳು ಪಾಡ್ದನಗಳಲ್ಲಿ ಇತಿಹಾಸದ ಎಳೆ ಇದೆ ಎಂದು ತಿಳಿಸಿದರು.
ಕದಿಕಾರು ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ಪಂಚ ಕಲ್ಯಾಣ ಸಮಿತಿ ಅಧ್ಯಕ್ಷ ವಿದ್ಯಾಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಲ್ಲಿಕಾ ಜೈನ್, ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಯ ಸುಮಂತ್ ಜೈನ್, ಪ್ರವೀಣ್ ಕುಮಾರ್ ಇಂದ್ರ ಮಾತನಾಡಿದರು. ಪುತ್ತೂರು ಡಿ.ವೈ.ಎಸ್ಪಿ. ಪ್ರಮೋದ್ ಕುಮಾರ್ ಬೆದ್ರಾಜೆ, ಉದ್ಯಮಿ ರತ್ನಾಕರ ಜೈನ್, ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಜ ಹೆಗ್ಡೆ ಪುತ್ತಿಲ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಜ್ರಕುಮಾರ್ ಜೈನ್, ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರಾದ ಸುನಿಲ್ ಕುಮಾರ್ ದಡ್ಡು, ಸುರೇಶ್ ಅತ್ರೆಮಜಲು, ಕೆ.ಎಸ್. ರಾಧಾಕೃಷ್ಣ, ರಾಜಶೇಖರ್ ಜೈನ್, ಕೈಲಾರ್ ರಾಜ್ಗೋಪಾಲ ಭಟ್, ಸಮಿತಿ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ, ಅನುದೀಪ್ ರೈ, ನಿತೇಶ್ ಕುಮಾರ್ ಪುತ್ತಿಲ, ಪ್ರಭಾಕರ್ ರೈ, ರಕ್ಷಿತ್ ಕುಮಾರ್ ಪುತ್ತಿಲ, ಜಯರಾಜ್ ಜಾರಳಿಕೆ, ಸುಭಾಶ್ ಜೈನ್, ನಿರಂಜನ್ ಕೊಂಡೆ, ಅರುಣಾ ಡಿ. ರೈ, ಸಮಂತ್ ನೆಲ್ಯಾಡಿ, ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್, ಅಭಯ್ ಜೈನ್, ವಿಜೇತ್ ಜೈನ್, ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಮಹೇಶ್ ಪಡಿವಾಳ ಮೊದಲಾದವರು ಭಾಗವಹಿಸಿದ್ದರು.
ಪಾರ್ಶ್ವನಾಥ ಜೈನ್ ಕಕ್ಕೆಪದವು ಸ್ವಾಗತಿಸಿದರು. ಶಾಂತಿಪ್ರಕಾಶ್ ನೇರೆಂಕಿ ವಂದಿಸಿದರು. ಮಿತ್ರಸೇನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.










