ವಳಾಲು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಜಿನಬಿಂಬಗಳ ಪುನ; ಪ್ರತಿಷ್ಠಾ ಮಹೋತ್ಸವ-ಶ್ರೀ ನಾಗದೇವರ, ಶ್ರೀ ಪದ್ಮಾವತೀ ದೇವಿಯ ಪ್ರತಿಷ್ಠೆ

0

ಉಪ್ಪಿನಂಗಡಿ: ಜೀರ್ಣೋದ್ಧಾರಗೊಂಡಿರುವ ಬಜತ್ತೂರು ಗ್ರಾಮದ ವಳಾಲು ಬಾರಿಕೆ ಎಂಬಲ್ಲಿರುವ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ನಡೆಯುತ್ತಿರುವ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ತೀರ್ಥಂಕರರ ಧಾಮ ಸಂಪ್ರೋಕ್ಷಣಾಪೂರ್ವಕ ಜಿನ ಬಿಂಬಗಳ ಪುನ: ಪ್ರತಿಷ್ಠಾ ಮಹೋತ್ಸವದ 2ನೇ ದಿನವಾದ ಮೇ.7ರಂದು ಶ್ರೀ ನಾಗದೇವರ, ಶ್ರೀ ಪದ್ಮಾವತೀ ದೇವಿಯ ಪ್ರತಿಷ್ಠೆ ನಡೆಯಿತು.


ಬೆಳಗ್ಗೆ ನಿತ್ಯವಿಧಿ ಸಹಿತ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ ವಿಧಾನ ನಡೆದು ಬೆಳಗ್ಗೆ 10.25ರಿಂದ 10.35ರ ಮಿಥುನ ಲಗ್ನದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ಸಂಜೆ 4.15ರಿಂದ 4.25ರ ಕನ್ಯಾ ಲಗ್ನದಲ್ಲಿ ಆರಾಧನಾಪೂರ್ವಕ ಶ್ರೀ ಪದ್ಮಾವತೀ ದೇವಿಯ ಪ್ರತಿಷ್ಠೆ, ಕುಂಕುಮಾರ್ಚನೆ ಮಹೋತ್ಸವ, ಸ್ವಾಮಿಗೆ 54 ಕಲಶ ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಡಾ|ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪಾವನ ಸಾನಿಧ್ಯ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಕೀರ್ತಿ ಜೈನ್ ಆಲಂಕಾರು, ಬಸದಿ ಆಡಳಿತ ಮೊಕ್ತೇಸರರಾದ ಸುವರ್ಣಲತಾ ಮಾಣಿಕ್ಯರಾಜ್ ಪಡಿವಾಳ್ ಹಾಗೂ ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ ಶ್ರಾವಕ-ಶ್ರಾವಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಇಂದು ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಷ್ಠೆ
ಮೇ.8ರಂದು ಬೆಳಗ್ಗೆ 8ರಿಂದ ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಗಂಧಯಂತ್ರಾರಾಧನಾ ವಿಧಾನ, 10 ಗಂಟೆಯಿಂದ ವ್ರತೋಪದೇಶ, 11.15ರಿಂದ 11.25ರ ಕರ್ಕಾಟಕ ಲಗ್ನದಲ್ಲಿ ಮಂತ್ರನ್ಯಾಸ, ತಿಲಕನ್ಯಾಸಪೂರ್ವಕ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಷ್ಠಾ ವಿಧಾನ, 12.15ರ ಅಭಿಜಿನ್ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಶಿಖರಾರೋಹಣ, ಅಪರಾಹ್ನ 2ರಿಂದ ಕಲ್ಯಾಣ ಮಂದಿರ ಯಂತ್ರಾರಾಧನಾ ವಿಧಾನ, ಸಂಜೆ ಅಗ್ರೋದಕ ಮೆರವಣಿಗೆ, ಮಹೋತ್ಸವ, ಸ್ವಾಮಿಗೆ 216 ಕಲಶ ಅಭಿಷೇಕ, ಮಹಾಮಂಗಳಾರತಿ, ಪಾದಪೂಜೆ, ತೋರಣ ವಿಸರ್ಜನೆ, ಕಂಕಣ ವಿಸರ್ಜನೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here