ಒಂದೇ ದಿನ ಐವರು ಸಚಿವರನ್ನು ಭೇಟಿಯಾದ ಶಾಸಕ ಅಶೋಕ್ ರೈ – ಕಂಬಳ, ರಸ್ತೆ, ಪಡಿತರ ಚೀಟಿ ಸಮಸ್ಯೆ ಬಗ್ಗೆ ಮನವಿ-ಚರ್ಚೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಅನುದಾನಕ್ಕಾಗಿ ಶಾಸಕ ಅಶೋಕ್ ರೈ ಅವರು ಶುಕ್ರವಾರ ಬೆಂಗಳೂರಿನಲ್ಲಿ ಒಂದೇ ದಿನ ಐವರು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

1. ಕಂಬಳಕ್ಕೆ ತಕ್ಷಣ ಅನುದಾನ ನೀಡಿ – ಎಚ್.ಕೆ. ಪಾಟೀಲ್‌ಗೆ ಮನವಿ
ದ.ಕ. ಜಿಲ್ಲೆಯಲ್ಲಿ ನಡೆಯುವ ವಿವಿಧ ಕಂಬಳ ಸಮಿತಿಗಳಿಗೆ ಸರ್ಕಾರದಿಂದ ನಿಗದಿಪಡಿಸಲಾದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಕಂಬಳ ನಡೆಯುವ ವೇಳೆ ನಿಗದಿತ ಅನುದಾನವನ್ನು ಸಮಯಕ್ಕೆ ಸರಿಯಾಗಿ ನೀಡುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಶಾಸಕರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರ ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ.

2. 30 ಕಿ.ಮೀ ರಸ್ತೆಗೆ 50 ಕೋಟಿ ಅನುದಾನ – ಪ್ರಿಯಾಂಕ ಖರ್ಗೆಗೆ ಮನವಿ
ಪುತ್ತೂರು ಕ್ಷೇತ್ರದ ಸುಮಾರು 30 ಕಿ.ಮೀ ಕಚ್ಚಾ ರಸ್ತೆಗಳ ಅಭಿವೃದ್ಧಿಗೆ ‘ಪ್ರಗತಿಪಥ’ ಯೋಜನೆಯಡಿ 50 ಕೋಟಿ ರೂ. ಅನುದಾನ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

3. ಅನಾರೋಗ್ಯ ಪೀಡಿತರಿಗೆ ತುರ್ತು ಪಡಿತರ ಚೀಟಿ – ಕೆ.ಎಚ್. ಮುನಿಯಪ್ಪ ಆದೇಶ
ಕಳೆದ ಎರಡು ತಿಂಗಳಿಂದ ಪಡಿತರ ಚೀಟಿ ಆಪ್ ಬಂದ್ ಆಗಿದ್ದರಿಂದ ಅನಾರೋಗ್ಯ ಪೀಡಿತರಿಗೆ ತುರ್ತಾಗಿ ಬಿಪಿಎಲ್ ಕಾರ್ಡ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರ ಗಮನಕ್ಕೆ ತಂದರು. ಸ್ಪಂದಿಸಿದ ಸಚಿವರು ಮೇ 10, ಶನಿವಾರದಿಂದಲೇ ಪಡಿತರ ಚೀಟಿ ವಿತರಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

4. ದಲಿತರ ಕಾಲನಿ ಅಭಿವೃದ್ಧಿಗೆ 5 ಕೋಟಿ – ಎಚ್.ಸಿ. ಮಹದೇವಪ್ಪಗೆ ಮನವಿ
ಕ್ಷೇತ್ರದ ಬಾಕಿ ಉಳಿದಿರುವ ದಲಿತರ ಕಾಲನಿಗಳ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಮಾಡಿದರು.

5. ತಡೆಗೋಡೆಗೆ ಹೆಚ್ಚುವರಿ ಅನುದಾನ – ಸಚಿವ ಬೋಸರಾಜುಗೆ ಮನವಿ
ಕಳೆದ ಮಳೆಗಾಲದಲ್ಲಿ ಧರೆ ಕುಸಿತ ಮತ್ತು ಕೃಷಿ ಭೂಮಿಗೆ ಹಾನಿಯಾಗಿದ್ದು, ಆರ್ಯಾಪು ಕೊಲ್ಯದಲ್ಲಿ 2 ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಕಬಕ, ವಿಟ್ಲ, ಕೊಳ್ತಿಗೆ, ಪಾಣಾಜೆ ಸೇರಿದಂತೆ ಹಲವು ಗ್ರಾಮಗಳಲ್ಲಿ ತಡೆಗೋಡೆಗೆ ಬೇಡಿಕೆ ಹೆಚ್ಚಿದ್ದು, ನೂರಾರು ಅರ್ಜಿಗಳು ಬಾಕಿ ಇರುವುದರಿಂದ ಹೆಚ್ಚುವರಿ ಅನುದಾನ ಒದಗಿಸುವಂತೆ ಸಣ್ಣ ನೀರಾವರಿ ಸಚಿವ ಬೋಸರಾಜು ಅವರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here