ವೈಷ್ಣವೀ ನಾಟ್ಯಾಲಯದ ರಜತ ನೃತ್ಯಾಂತರ್ಯಾನ, ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ

0

ಪುತ್ತೂರು: ಭರತನಾಟ್ಯ ಕಲಾ‌ಕ್ಷೇತ್ರದಲ್ಲಿ ಇಪ್ಪತ್ತೈದು ಸಂವತ್ಸರಗಳನ್ನು ಪೂರೈಸಿರುವ ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ರಜತ ನೃತ್ಯಾಂತರ್ಯಾನ-2026 ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯು ಮೇ.10ರಂದು ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಭರತನಾಟ್ಯ ಕಲಿತರೆ ಸರಕಾರಿ‌ ಉದ್ಯೋಗ ಬೇಕಾಗಿಲ್ಲ-ವಿದುಷಿ ನಯನಾ ವಿ.ರೈ:
ಕಾರ್ಯಕ್ರಮವನ್ನು‌ ದೀಪ ಬೆಳಗಿಸಿ ಉದ್ಘಾಟಿಸಿದ ವಿಶ್ವಕಲಾನಿಕೇತನ ಆರ್ಟ್ಸ್ ಕಲ್ಚರ್ ನ ನಿರ್ದೇಶಕಿ ವಿದುಷಿ ನಯನಾ ವಿ. ರೈ ಮಾತನಾಡಿ, ಹವ್ಯಾಸವಾಗಿದ್ದ ಭರತನಾಟ್ಯ ಕಲೆಯು ಇಂದು ವೃತ್ತಿಯಾಗಿ ಬೆಳೆಯುತ್ತಿದೆ. ನಮ್ಮ ಜೊತೆ ಕಲಿತ ಹಲವು ಮಂದಿ ಶಿಷ್ಯರು ಭರತನಾಟ್ಯ ತರಬೇತಿ ನೀಡುತ್ತಿದ್ದು ತರಬೇತಿಯನ್ನು ವೃತ್ತಿಯನ್ನಾಗಿ ಮುಂದುವರಿಸುತ್ತಿದ್ದಾರೆ. ಅದರಿಂದ ಪಡೆಯುವ ಸಣ್ಣ ಸಂಪಾದನೆಯು ಜೀವನದ ಆಧಾರವನ್ನಾಗಿಸಿದ್ದಾರೆ. ಇದರಿಂದಾಗಿ ಜೀವನ ನಿರ್ವಹಣೆಗೆ ಸರಕಾರಿ ಉದ್ಯೋಗವೇ ಬೇಕೆಂದಿಲ್ಲ. ಕಲಿತ ನೃತ್ಯ ವಿದ್ಯೆಯನ್ನು ಇತರರಿಗೆ ಧಾರೆ ಎರೆಯುವ ಮೂಲಕವೂ ಸುಸಂಸ್ಕೃತ ಜೀವನ ನಡೆಸಲು ಸಹಕಾರಿಯಾಗಲಿದೆ. ಸರಕಾರಿ ಕೆಲಸದಲ್ಲಿ ನಿರ್ದಿಷ್ಟ ನಿಯಮಗಳಂತೆ ಮಾಡಬೇಕು. ಆದರೆ ಭರತನಾಟ್ಯದಲ್ಲಿ ಮನೆಯಲ್ಲಿ ಕಲಿಸಬಹುದು. ದೊಡ್ಡ ಮಟ್ಟದ ಹೂಡಿಕೆಯ ಅವಶ್ಯಕತೆಯೂ ಇಲ್ಲ. ಪ್ರಗತಿ ಕಾಣಲು‌ ನಾವು ಅಭಿವೃದ್ಧಿ ಕಾಣಬೇಕು. ಪೋಷಕರು ಮಕ್ಕಳನ್ನು ತರಗತಿಗಳಿಗೆ ಕಳುಹಿಸುವ ಮೂಲಕ ಭತಯನಾಟ್ಯ ಕಲೆಯನ್ನು ಬೆಳೆಸಬೇಕು. ನಮ್ಮ ಶಿಷ್ಯೆಯಾಗಿರುವ ವಿದುಷಿ ಯೋಗೀಶ್ವರಿ ಅವರು ಕಷ್ಟಪಟ್ಟು ಕಲಿತ ವಿದ್ಯೆಯನ್ನು ಧಾರೆ ಎರದು ನೂರಾರು ಮಂದಿಗೆ ಉತ್ತಮ ತರಬೇತಿ ನೀಡಿ‌ ಮಕ್ಕಳನ್ನು ಭರತನಾಟ್ಯ ಕ್ಷೇತ್ರದಲ್ಲಿ ಬೆಳೆಸುತ್ತಿದ್ದಾರೆ. ಉತ್ತಮ ಹಾಡುಗಾರಿಕೆ, ಹಿಮ್ಮೆಳ ಅವರ ತಂಡದಲ್ಲಿದ್ದು ಅವರ ಕಲಾ‌ಸೇವೆ ಮುಂದುವರಿಯಲಿ ಎಂದರು.

ವೈಷ್ಣವೀ ನಾಟ್ಯಾಲಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುತ್ತಿದೆ-ರಾಜಗೋಪಾಲ ಭಟ್:
ವಿವೇಕಾನಂದ ಶಿಶು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ್ ಭಟ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಾನಾ ರೀತಿಯಲ್ಲಿ ಯುವ ಜನತೆ ತಪ್ಪು ದಾರಿಗೆ ಕೊಂಡೋಯ್ಯವ ಕಾಲದಲ್ಲಿ ವೈಷ್ಣವೀ ನಾಟ್ಯಾಲಯವು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಾ ಕಳೆದ 25 ವರ್ಷಗಳಿಂದ ಧರ್ಮದ ಸಂಸ್ಕಾರ ನೀಡಿ
ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೃತ್ಯಗುರು ಯೋಗೀಶ್ಚರಿ ಅವರು ತಪ್ಪಸ್ಸಿನ‌ ರೀತಿಯಲ್ಲಿ ಸಾಧಿಸಿ ತೋರಿಸಿದ್ದಾರೆ ಯಶಸ್ಸಿನ‌ಹಿಂದೆ ಪೋಷಕರ ಪಾತ್ರವೊದೆ. ಸಂಸ್ಥೆ ಬೆಳೆಯಲು ಸಹಕರಿಸಿಬೇಕು ಎಂದರು.


ಗುಣಮಟ್ಟಕ್ಕೆ ಆದ್ಯತೆ ನೀಡಿ ಬೆಳೆಸಿದ ಸಂಸ್ಥೆ ವೈಷ್ಣವೀ ನಾಟ್ಯಾಲಯ-ಡಾ| ರಾಜೇಶ್ ಬೆಜ್ಜಂಗಳ:
ಸಂಶೋಧನಾ ಪ್ರಾಧ್ಯಾಪಕರು, ತರಬೇತುದಾರರಾಗಿರುವ ಡಾ.ರಾಜೇಶ್ ಬೆಜ್ಜಂಗಳ ಮಾತನಾಡಿ, ಭರತನಾಟ್ಯ ಸಂಘಟನೆಯು ಸುಲಭದ ಕೆಲಸವಲ್ಲ. ಅದು ಒಂದು ಸವಾಲಿನ ಕೆಲಸ. ಏಕಾಂಗಿಯಾಗಿ ಅದೆಲ್ಲವನ್ನು ನಿರ್ವಹಿಸಿದ ವೈಷ್ಣವೀ ನಾಟ್ಯಾಲಯಕ್ಕೆ ಸಮಾಜದಲ್ಲಿ ಉತ್ತಮ ಗೌರವವಿದೆ. ಗುಣಮಟ್ಟಕ್ಕೆ ಆಧ್ಯತೆ ನೀಡುತ್ತಿರುವ ಸಂಸ್ಥೆಯ ಯಶಸ್ಸಿನ‌ ಹಿಂದೆ ಕಠಿಣ ಶ್ರಮವಿದೆ. ನೇರ ಪ್ರಸ್ತುತಿಯ ಮೂಲಕ ನಡೆಯುವ ಭರತ ನಾಟ್ಯ ಕಾರ್ಯಕ್ರಮದಲ್ಲಿ ವೈಷ್ಣವೀ ನಾಟ್ಯಾಲಯದ ಕಾರ್ಯಕ್ರಮವೂ ಒಂದು. ಕೆಲವು ನೃತ್ಯ ರೂಪಕಗಳಿಗೆ ಸಾಹಿತ್ಯ ನೀಡುವ ಅವಕಾಶವು ಸಂಸ್ಥೆಯ ಮುಖಾಂತರ ನನಗೂ ದೊರೆತಿದೆ. ಭರತನಾಟ್ಯ ಶಾಸ್ತ್ರ ಬದ್ದವಾಗಿ ನಡೆದಾಗ ಜನತೆ ಸ್ವೀಕರಿಸಲು ಸಾಧ್ಯ. ಕೇವಲ ಪ್ರಮಾಣ‌ಪತ್ರಕ್ಕಾಗಿ ಮಾಡಿದರೆ ಅದು ಕಲೆಯಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಪುರಾಣಗಳನ್ನು ಪರಿಚಯಿಸುವ ಜೀವಂತೆ ಕಲೆ ಭರತನಾಟ್ಯ-ಕೇಶವ ಪ್ರಸಾದ್ ಮುಳಿಯ:
ಅಧ್ಯಕ್ಷತೆ ವಹಿಸಿದ್ದ ಮುಳಿಯ ಗೋಲ್ಡ್ & ಡೈಮಂಡ್ ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಭರತನಾಟ್ಯ‌ ಕೇವಲ‌ ನಾಟ್ಯವಲ್ಲ. ಅದು ಪುರಾನಗಳನ್ನು ಪರಿಚಯಿಸುವ ಜೀವಂತ ಕಲೆ. ಭಾರತದ ಕಲಾ ಪರಂಪರೆಯನ್ನು ಉಳಿಸುವ ಕಲೆ.‌ ಕೈ ಮುದ್ರೆ ಭಾವನೆಗಳ ಮೂಲಕ ಮುದ್ರೆ, ಭಾವನೆಗಳ ‌ಮೂಲಕ ಕಲೆಯ ಚಿತ್ರಣ ಮೂಡಿಸುವ ಅದ್ಬುತ ಕಲೆಯಾಗಿದೆ. ಕಠಿಣ ಪರಿಶ್ರಮದ ಮೂಲಕ ವೈಷ್ಣವೀ ನಾಟ್ಯಾಲಯವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಪುರಾಣ‌ದ ಕಲೆಯನ್ನು ಪ್ರಸ್ತುತ ಪಡಿಸಿ ಮುಂದಿನ ತಲೆಮಾರಿಗೆ ಕೊಂಡೋಯ್ಯವ ಪ್ರಯತ್ನ ಕಳೆದ ಇಪ್ಪತೈದು ವರ್ಷಗಳಿಂದ ನಡೆಯುತ್ತಿದೆ. ನೇರ ಪ್ರಸ್ತುತಿಯಲ್ಲಿ ಕಾರ್ಯಕ್ರಮ ನೀಡುವ ಮೂಲಕ ಪಕ್ಕ ವಾದ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ನೃತ್ಯ ಗುರು ಯೋಗೀಶ್ವರಿ ಅವರ ಭಕ್ತಿ, ಸಂಭ್ರಮದ ಯಾನ ಯಶಸ್ವಿಯಾಗಿ ಸಾಗಲಿ. ಇನ್ನಷ್ಡು ಪುರಾಣದ ಪ್ರಸ್ತುತಿಗಳು ನಡೆಯಲಿ ಎಂದರು.

ಗುರುವಂದನೆ, ಸನ್ಮಾನ;
ವೈಷ್ಣವೀ ನಾಟ್ಯಾಲಯದ ನೃತ್ಯ ಗುರು ಯೋಗೀಶ್ವರಿ ಜಯಪ್ರಕಾಶ್ ಅವರ ಗುರು ವಿದುಷಿ ನಯನಾ ವಿ.ರೈ ಅವರಿಗೆ ಗುರು ವಂದನೆ‌ ನೀಡಿ ಗೌರವಿಸಲಾಯಿತು. ನಾಟ್ಯಾಲಯದ ಪ್ರಾಸಾದನದಲ್ಲಿ ಸಹಕರಿಸುವ ಕೃಷ್ಣಪ್ಪ ಮಾಸ್ತರ್ ಅಡೂರು, ಭಾವನಾ ಕಲಾ ಆರ್ಟ್ಸ್ ನ ವಿಘ್ನೇಶ್ ವಿಶ್ವಕರ್ಮ, ಹಿಮ್ಮೆಳ ಕಲಾವಿದರಾದ ವೆಳ್ಳಿಕೋತ್ ವಿಷ್ಣು ಭಟ್, ವಸಂತ ಕುಮಾರ್ ಗೋಸಾಡ, ಗೀತೇಶ್ ನೀಲೇಶ್ವರ, ರಾಜಗೋಪಾಲ ಕಾಂಞಗಾಡ್ ಹಾಗೂ ಪ್ರದೀಪ್ ಮೂರೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೈಷ್ಣವೀ ನಾಟ್ಯಾಲಯದ ನೃತ್ಯಗುರು‌ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಿಸಿದರು. ಸುದ್ದಿ ಚಾನೆಲ್ ನ ನಿರೂಪಕಿ ಹೇಮ ಜಯರಾಮ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ವಳಕುಂಜ ವಂದಿಸಿದರು.

ಮೇಳೈಸಿದ ನೃತ್ಯ ರೂಪಕಗಳು
ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನೃತ್ಯಾಂತರ್ಯಾನದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ವಿವಿಧ ಭರತನಾಟ್ಯ ನೃತ್ಯ ರೂಪಕಗಳು ಹಾಗೂ ಸಭಾ ಕಾರ್ಯಕ್ರಮದ ಬಳಿಕ ನಡೆದ ದಶಾವತಾರ ವಂದೇ ವಿಷ್ಣುಂ ಭವಭಯಹರಣಂ ಸರ್ವ ಲೋಕೈಕನಾಥಂ ನೃತ್ಯ ರೂಪಕಗಳು ಪ್ರೇಕ್ಷಕರ ಮನಸೋರೆಗೊಳಿಸಿತು.

2001 ರಲ್ಲಿ ಗ್ರಾಮೀಣ ಪ್ರದೇಶವಾದ ಈಶ್ವರಮಂಗಲದಲ್ಲಿ ಪ್ರಾರಂಭಗೊಂಡ ವೈಷ್ಣವೀ ನಾಟ್ಯಾಲಯವು ನಂತರ ಬೆಳ್ಲಾರೆ,‌ಬದಿಯಡ್ಕ, ಪುತ್ತೂರು, ವಿಟ್ಲದಲ್ಲಿ ಶಾಖೆಗಳು ಮುನ್ನಡೆಯುತ್ತಿದೆ. 2012ಸಂಸ್ಥೆಯು ಅದ್ಧೂರಿಯ ದಶಮಾನೋತ್ಸವ ಸಂಭ್ರಮ ಕಂಡಿದೆ. ಇದೀಗ ನಮ್ಮ ನೃತ್ಯ ಸಂಸ್ಥೆಯು ರಜತ ಸಂಭ್ರಮದಲ್ಲಿದ್ದು ಇದು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರ ಕನಸಾಗಿದೆ. ಬೆಳ್ಳಿ ಹಬ್ಬದ ಸಂಭ್ರಮವನ್ನು ನೃತ್ಯಕ್ಕೆ‌ ಸಂಬಂಧಿಸಿದ ಕಾರ್ಯಕ್ರಮಗಳು, ಅಭಿನಯ, ಮೇಕಪ್ ಗಳ ಕಾರ್ಯಾಗಾರ ನೃತ್ಯ ಕಾರ್ಯಕ್ರಮ ನಡೆಸುವ ಮೂಲಕ ಒಂದು ವರ್ಷ ನಿರಂತರ ಕಾರ್ಯಕ್ರಮ ಆಯೋಜಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ನಾಲ್ಕು ಶಾಖೆಗಳ ವಿದ್ಯಾರ್ಥಿಗಳನ್ನು‌ ಸೇರಿಸಿಕೊಂಡು ದೊಡ್ಡ ಕಾರ್ಯಕ್ರಮ ನಡೆಸುವ ಯೋಚನೆಯಿದೆ. ಇದನ್ನು‌ ಸಾಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯ.
-ವಿದುಷಿ ಯೋಗೀಶ್ವರಿ ಜಯಪ್ರಕಾಶ್, ‌ನೃತ್ಯಗುರು, ವೈಷ್ಣವೀ ನಾಟ್ಯಾಲಯ, ಪುತ್ತೂರು

LEAVE A REPLY

Please enter your comment!
Please enter your name here