






ಪುತ್ತೂರು: ರಾಜ್ಯ ರಾಜಧಾನಿಯ ಕನಕಪುರ ರಸ್ತೆಯಲ್ಲಿ ಶ್ರೀ ರವಿಶಂಕರ್ ಗುರೂಜಿಯವರ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡಿರುವ ಭವ್ಯ ಧ್ಯಾನ ಮಂದಿರವನ್ನು ಉದ್ಘಾಟಿಸಲು ಮೇ. 10ರಂದು ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಹೈಕೋರ್ಟ್ ಹಿರಿಯ ವಕೀಲ ಡಾ. ಅರುಣ್ ಶ್ಯಾಮ್ ಪುತ್ತೂರು ಅವರು ಸ್ವಾಗತಿಸಿರುವುದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸ ಒದಗಿಸಿದೆ.


ನರೇಂದ್ರ ಮೋದಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಮೊದಲ ಸಾಲಿನಲ್ಲಿ ನಿಂತು ಅರುಣ್ ಶ್ಯಾಮ್ ಸ್ವಾಗತ ಮಾಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಅರುಣ್ ಶ್ಯಾಮ್ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ಉದ್ದೇಶದಿಂದ ಅವರಿಗೆ ಈ ಸ್ಥಾನಮಾನ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿ ಜೀವನದ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಪುತ್ತೂರಿನಲ್ಲಿ ಸಂಘ ಪರಿವಾರಕ್ಕೆ ಪದಾರ್ಪಣೆ ಮಾಡಿದ್ದ ಅರುಣ್ ಶ್ಯಾಮ್ ಅವರು ಹಂತ ಹಂತವಾಗಿ ಬೆಳೆದು ಹೈಕೋರ್ಟಿನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು.



ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನಾಯಕರ ವಿರುದ್ಧ ಕೇಸು ದಾಖಲಾದಾಗ ಅವರ ಪರ ವಾದ ಮಂಡಿಸಿ ಗಮನ ಸೆಳೆಯುತ್ತಿರುವ ಅರುಣ್ ಶ್ಯಾಮ್ ಅವರಿಗೆ ಈ ಹಿಂದೆ ಬಿಜೆಪಿಯ ರಾಜ್ಯ ವಕ್ತಾರ ಹುದ್ದೆ ಕೊಡಲು ಪಕ್ಷದ ಪ್ರಮುಖರು ಮುಂದಾಗಿದ್ದರಾದರೂ ಅರುಣ್ ಶ್ಯಾಮ್ ನಯವಾಗಿ ನಿರಾಕರಿಸಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೂ ಅರುಣ್ ಶ್ಯಾಮ್ ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಬಂಟ್ವಾಳ ತಾಲೂಕಿನ ಕರೋಪಾಡಿಯ ಪದ್ಯಾಣದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಅರುಣ್ ಶ್ಯಾಮ್ ಅವರ ಹೆಸರು ಬಲವಾಗಿ ಕೇಳಿ ಬರಲಾರಂಭಿಸಿದೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರ ನೆಚ್ಚಿನ ವಕೀಲರಾಗಿರುವ ಅರುಣ್ ಶ್ಯಾಮ್ ಅವರನ್ನು ಕಣಕ್ಕಿಳಿಸಿದರೆ ಪುತ್ತೂರು ಕ್ಷೇತ್ರವನ್ನು ಮತ್ತೆ ತಮ್ಮ ವಶಕ್ಕೆ ಪಡೆಯಬಹುದು ಎಂಬುದು ಬಿಜೆಪಿ ನಾಯಕರೂ ಲೆಕ್ಕಾಚಾರ ಹಾಕಿದ್ದಾರೆ. ಈ ವಿಚಾರ ಭಾರೀ ಚರ್ಚೆಯಲ್ಲಿ ಇರುವಾಗಲೇ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ವಿ.ವಿ.ಐ.ಪಿ. ಸಾಲಿನಲ್ಲಿ ಅರುಣ್ ಶ್ಯಾಮ್ ಅವರಿಗೆ ಅವಕಾಶ ನೀಡಿರುವುದರ ಹಿಂದೆ ಇದೇ ತಂತ್ರಗಾರಿಕೆ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.










