ಬೀಡಿಕಾರ್ಮಿಕರ ಸಮಸ್ಯೆ: ಅಧಿಕಾರಿಗಳ ಸಭೆ

0

ವಾರದೊಳಗೆ ಅಧಿಕಾರಿ -ಗುತ್ತಿಗೆದಾರರ ಜೊತೆ ಚರ್ಚಿಸಿ ತೀರ್ಮಾನ; ಶಾಸಕ ಅಶೋಕ್ ರೈ


ಪುತ್ತೂರು; ಬೀಡಿ ಕಾರ್ಮಿಕರಿಗೆ ಬೀಡಿಮಜೂರಿ, ಬೋನಸ್ ಮತ್ತು ರಜೆ ಸಂಬಳ ಸರಿಯಾಗಿ ನೀಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸೋಮವಾರದಂದು ಕಾರ್ಮಿಕ ಅಧಿಕಾರಿಗಳ ಜೊತೆ ಶಾಸಕರು ಸಭೆ ನಡೆಸಿ ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ಮಜೂರಿ, ಬೋನಸ್ ಮತ್ತು ರಜೆ ಸಂಬಳದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು , ವಾರದೊಳಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಿ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಕಳೆದ ವಾರ ಕೆಯ್ಯೂರು ಗ್ರಾಮದ ಕಣಿಯಾರ್ ಎಂಬಲ್ಲಿ ಸೇತುವೆ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರಲ್ಲಿ ಮಹಿಳೆಯೋರ್ವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ನಾವು ಹಗಲಿರುಳು ಬೀಡಿ ಕಟ್ಟಿ ನಮ್ಮ ಕುಟುಂಬವನ್ನು ಸಲಹುತ್ತಿದ್ದೇವೆ, ನಾನು 5 ವರ್ಷ ಬೀಡಿ ಕಟ್ಟಿ ನನಗೆ 500 ರೂ ಬೋನಸ್ ಕೊಟ್ಟಿದ್ದಾರೆ, ಸರಿಯಾದ ಮಜೂರಿ ದೊರೆಯುತ್ತಿಲ್ಲ ಎಂದು ಶಾಸಕರಲ್ಲಿ ದೂರಿದ್ದರು. ಈ ವಿಚಾರವಾಗಿ ತಾನು ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಶಾಸಕರು ಭರವಸೆ ನೀಡಿದ್ದರು.
ಸೋಮವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜೆಬೆತ್ ತಾವ್ರೋ ಅವರನ್ನು ಕಚೇರಿಗೆ ಕರೆಸಿ ಸಭೆ ನಡೆಸಿದ ಶಾಸಕರು ಬೀಡಿ ಕಾರ್ಮಿಕರಿಗೆ ಸರಕಾರದಿಂದ ನಿಗಧಿಮಾಡಲಾದ ಮಜೂರಿ, ಬೋನಸ್, ಮತ್ತು ರಜೆ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು.

ಬೀಡಿ ಕಾರ್ಮಿಕರು ಬಡವರು
ಬೀಡಿ ಕಾರ್ಮಿಕರು ಬಡವರಾಗಿದ್ದಾರೆ. ರಾತ್ರಿ ಹಗಲು ಬೀಡಿ ಕಟ್ಟಿಯೇ ಜೀವನ ನಡೆಸುವ ಸಾವಿರಾರು ಕುಟುಂಬಗಳಿವೆ, ಯಾವುದೇ ಕಾರಣಕ್ಕೂ ಬೀಡಿ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರ ಕಷ್ಟಕ್ಕೆ ನಾನು ಸ್ಪಂದಿಸುವೆ. ಸರಕಾರ ನಿಗಧಿಮಾಡಿದ ಮಜೂರಿ, ಬೋನಸ್, ರಜೆ ಸಂಬಳವನ್ನು ಅವರಿಗೆ ಸರಿಯಾದ ಪ್ರಮಾಣದಲ್ಲಿ ದೊರೆಯುವಂತಾಗಬೇಕು.

240 ಸಬ್ ಗುತ್ತಿಗೆದಾರರು 14 ಬೀಡಿ ತಯಾರಕ ಗುತ್ತಿಗೆದಾರ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 240 ಸಬ್ ಬೀಡಿ ಗುತ್ತಿಗೆದಾರರಿದ್ದಾರೆ, 14 ಬೀಡಿ ತಯಾರಿಕಾ ಸಂಸ್ಥೆಗಳಿವೆ. ಬೀಡಿ ತಯಾರಿಕಾ ಸಂಸ್ಥೆಗಳೇ ಮಜೂರಿ, ಬೋನಸ್, ಮ್ತತು ರಜೆ ಸಂಬಳವನ್ನು ನಿಗದಿ ಮಾಡುತ್ತದೆ. ಈ ಗುತ್ತಿಗೆದಾರರನ್ನು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಇಲ್ಲಿ ಯಾರಿಗೂ ಅನ್ಯಾಯ ಮಾಡುವ ವಿಚಾರವಿಲ್ಲ ಎಂದು ಶಾಸಕರು ಹೇಳಿದರು. ಸಭೆಯಲ್ಲಿ ಕಟ್ಟಡ ಕಾರ್ಮಿಕ ಕಾರ್ಯವಾಹಕ ರಮೇಶ್ ಉಪಸ್ಥಿತರಿದ್ದರು.

ಊಟ ಮಾಡುತ್ತಲೇ ಸಭೆ ನಡೆಸಿದ ಶಾಸಕರು…!
ಸೋಮವಾರ ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕಾರ ಇದ್ದ ಕಾರಣ ಬಹು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಈ ಕಾರಣಕ್ಕೆ ಬಿಡುವಿಲ್ಲದ ಕಾರಣ ಶಾಸಕರು ಕಚೇರಿಯಲ್ಲಿ ಊಟದ ಸಮಯದಲ್ಲಿ ಊಟ ಮಾಡುತ್ತಲೇ ಸಭೆ ನಡೆಸಿದ್ದು ವಿಷೇಷವಾಗಿತ್ತು.

LEAVE A REPLY

Please enter your comment!
Please enter your name here