ಕೆಯ್ಯೂರು: ಭಾರೀ ಗಾಳಿ ಮಳೆಗೆ ಮನೆಗೆ ತೀವ್ರ ಹಾನಿ – ಸಂಕಷ್ಟದಲ್ಲಿದ್ದ ಮಹಿಳೆಗೆ ’ವಿಜಯ ಸಾಮ್ರಾಟ್’ ಆಸರೆ

0

ಸ್ಥಳಕ್ಕೆ ಭೇಟಿ ನೀಡಿದ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಮಾಡು ನಿರ್ಮಿಸಿ ಶೀಟು ಹಾಕಿ ಕೊಡಲು ಸೂಚನೆ

ಪುತ್ತೂರು: ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಸೂರಿಲ್ಲದೆ ಕಂಗಾಲಾಗಿದ್ದ ಅಸಹಾಯಕ ವಿಧವೆ ಮಹಿಳೆಯ ನೆರವಿಗೆ ವಿಜಯ ಸಾಮ್ರಾಟ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಹಜ್ ರೈ ಬಳಜ್ಜ ಅವರು ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಳೆಯಿಂದ ಹಾನಿಗೊಳಗಾದ ಮನೆಗೆ ತಕ್ಷಣವೇ ಮಾಡು ನಿರ್ಮಿಸಿ ಶೀಟು ಅಳವಡಿಸಿ ಕೊಡುವುದಲ್ಲದೆ, ಮುಂದಿನ ದಿನಗಳಲ್ಲಿ ಹೊಸ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಅವರು ನೀಡಿದ್ದಾರೆ. ಮೇ.11 ರಂದು ಸಂಜೆ ಕೆಯ್ಯೂರು ಪರಿಸರದಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಯ ಆರ್ಭಟಕ್ಕೆ ಕೆಯ್ಯೂರು ಗ್ರಾಮದ ಸಣಂಗಳ ನಿವಾಸಿ ಲೀಲಾವತಿ ಯಶೋಧರ ಗೌಡ ಎಂಬವರ ಮನೆ ತೀವ್ರವಾಗಿ ಜಖಂಗೊಂಡಿತ್ತು. ಪತಿಯನ್ನು ಕಳೆದುಕೊಂಡು ಜೀವನ ನಿರ್ವಹಣೆಗೇ ಕಷ್ಟಪಡುತ್ತಿದ್ದ ಮಹಿಳೆಗೆ ಮಳೆಯ ಆರ್ಭಟದಿಂದಾಗಿ ವಾಸವಿದ್ದ ಮನೆಯ ಮಾಡು ಕುಸಿದು ಬಿದ್ದು, ಮನೆಯೊಳಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ಹಾನಿಯಾಗಿದ್ದು, ರಾತ್ರಿ ಕಳೆಯುವುದೇ ಆ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು.


ಮಾನವೀಯತೆ ಮೆರೆದ ಸಹಜ್ ರೈ ಬಳಜ್ಜ
ಈ ದುರದೃಷ್ಟಕರ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮೇ.12 ರಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯುವ ನಾಯಕ, ವಿಜಯ ಸಾಮ್ರಾಟ್ ಸಂಸ್ಥೆಯ ರೂವಾರಿ ಸಹಜ್ ರೈ ಬಳಜ್ಜ ಅವರು ಸಂತ್ರಸ್ತ ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದರು. ಮಳೆಯ ಹನಿಗಳು ನೇರವಾಗಿ ಮನೆಯೊಳಗೆ ಬೀಳುತ್ತಿರುವುದನ್ನು ಗಮನಿಸಿದ ಅವರು, ತಕ್ಷಣವೇ ಕಾರ್ಯಪ್ರವೃತ್ತರಾದರು. ಮನೆಯ ಮಾಡಿನ ಸಿಮೆಂಟ್ ಶೀಟುಗಳ ಹಾರಿ ಹೋಗಿರುವುದನ್ನು ಅರಿತ ಸಹಜ್ ರೈ ಅವರು, ಕೂಡಲೇ ಮನೆಯ ಮಾಡನ್ನು ಸರಿಪಡಿಸಿ ಶೀಟುಗಳನ್ನು ಹಾಕಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ನಾಳೆಯಿಂದಲೇ ಕೆಲಸ ಆರಂಭಿಸಿ ಶೀಘ್ರವಾಗಿ ಮುಗಿಸಿಕೊಡಿ ಎಂದು ಶ್ರೀ ದುರ್ಗಾ ಇಂಡಸ್ಟ್ರೀಸ್‌ನ ವಿನಯ್‌ರವರಿಗೆ ಸೂಚನೆ ನೀಡಿದರು.


ಸರ್ಕಾರದ ಅನುದಾನ ಸಿಗದಿದ್ದರೆ ನಾವೇ ಮನೆ ಕಟ್ಟಿಕೊಡುತ್ತೇವೆ!
ಸಂತ್ರಸ್ತ ಮಹಿಳೆಯ ಬಡತನದ ಸ್ಥಿತಿಯನ್ನು ಕಂಡು ಮರುಗಿದ ಸಹಜ್ ರೈ ಅವರು ಒಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ಭರವಸೆಯೊಂದನ್ನು ನೀಡಿದ್ದಾರೆ. ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಅನುದಾನ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡೋಣ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅಥವಾ ಇತರೇ ಕಾರಣಗಳಿಂದ ಸರ್ಕಾರದ ಅನುದಾನ ಸಿಗದೇ ಹೋದರೆ, ಮಳೆಗಾಲ ಮುಗಿದ ತಕ್ಷಣವೇ ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ನಾನು ಸಂಪೂರ್ಣವಾಗಿ ಹೊಸ ಮನೆಯನ್ನು ನಿರ್ಮಿಸಿಕೊಡುತ್ತೇನೆ. ತನ್ನ ಮೂವರು ಮಕ್ಕಳೊಂದಿಗೆ ಈ ತಾಯಿ ನೆಮ್ಮದಿಯಿಂದ ಈ ಸೂರಿನಡಿ ಬದುಕಬೇಕು ಎನ್ನುವುದೇ ನಮ್ಮ ಆಶಯ ಎಂದು ಈ ಸಂದರ್ಭದಲ್ಲಿ ಹೇಳಿದರು.

ರಾಜಕೀಯ ಲಾಭಕ್ಕಿಂತ ಸಾಮಾಜಿಕ ಕಳಕಳಿಗೆ ಹೆಚ್ಚು ಒತ್ತು ನೀಡುವ ಸಹಜ್ ರೈ ಬಳಜ್ಜ ಅವರ ಈ ನಡೆ ಕೆಯ್ಯೂರು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. “ಕಷ್ಟ ಅಂದಾಗ ಓಡಿ ಬರುವ ಇಂತಹ ಯುವ ನಾಯಕರು ಸಮಾಜಕ್ಕೆ ಮಾದರಿ” ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ವಿಜಯ ಸಾಮ್ರಾಟ್ ಸಂಸ್ಥೆಯ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಕೆಯ್ಯೂರು ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶರತ್ ರೈ ದೇರ್ಲ, ವಿಜಯ ಕುಮಾರ್ ಸಣಂಗಳ, ದಿನೇಶ್ ವಾಸುಕಿ, ಚಂದ್ರಶೇಖರ ರೈ ಸಣಂಗಳ, ಸೃಜನ್ ರೈ, ಹರ್ಷ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here