ಉಚಿತ ಕಬಡ್ಡಿ ಕೌಶಲ್ಯ ತರಬೇತಿ ಶಿಬಿರ

0

“ನಮ್ಮ ಮಣ್ಣಿನ ಆಟ ಕಬಡ್ಡಿ ಎಲ್ಲ ಆಟಗಳಿಗೂ ಅಡಿಪಾಯ” – ಗಿರಿಶಂಕರ ಸುಲಾಯ

ಕುಂತೂರು: ಶಾರದಾಂಬ ಸ್ಪೋರ್ಟ್ಸ್ ಕ್ಲಬ್ ಕುಂತೂರು ಪೆರಾಬೆ ಆಶ್ರಯದಲ್ಲಿ ಏಳು ದಿನಗಳ ಉಚಿತ ಕಬಡ್ಡಿ ಕೌಶಲ್ಯ ತರಬೇತಿ ಶಿಬಿರ ಮೇ 6ರಿಂದ 12ರ ವರೆಗೆ ಶಾರದಾಂಬ ಭಜನಾ ಮಂದಿರದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀ ಗಿರಿಶಂಕರ ಸುಲಾಯ, “ಕ್ಲಬ್‌ನ ಸಮಾಜಮುಖಿ ನಡೆ ಶ್ಲಾಘನೀಯ. ಕಲಿಕೆಯಷ್ಟೇ ಆಟವನ್ನು ಪ್ರೀತಿಸಿ. ದೈಹಿಕವಾಗಿ ಸದೃಢರಾಗಿ. ನಮ್ಮ ಮಣ್ಣಿನ ಆಟ ಕಬಡ್ಡಿ ಎಲ್ಲ ಆಟಗಳಿಗೂ ಅಡಿಪಾಯವಿದ್ದಂತೆ. ಈ ಕೌಶಲ್ಯ ಶಿಬಿರ ವಿದ್ಯಾರ್ಥಿಗಳಿಗೆ ಮುಂದೆ ರಾಜ್ಯ-ರಾಷ್ಟ್ರ ಮಟ್ಟದ ಸಾಧನೆ ಮಾಡಲು ಅಡಿಪಾಯವಾಗಲಿ” ಎಂದು ಹಾರೈಸಿದರು.

ಕ್ಲಬ್ ಅಧ್ಯಕ್ಷ ಯೋಗೀಶ್ ಎಂ.ಪಿ ಮಾಪಲ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಮುಖ್ಯ ತರಬೇತುದಾರ ಎನ್.ಐ.ಎಸ್. ಕಬಡ್ಡಿ ತರಬೇತುದಾರ ಮೂರ್ತಿ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೂರ್ತಿ, “ಎಲ್ಲಿಯೂ ಸಿಗದ ಸುವರ್ಣ ಅವಕಾಶವನ್ನು ಕ್ಲಬ್ ಉಚಿತವಾಗಿ ಶಿಬಿರಾರ್ಥಿಗಳಿಗೆ ಒದಗಿಸಿದೆ. ಸದುಪಯೋಗಪಡಿಸಿಕೊಳ್ಳಿ” ಎಂದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶಾರದಾಂಬ ಸ್ಪೋರ್ಟ್ಸ್ ಕ್ಲಬ್ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಶಾರದಾಂಬ ಭಜನಾ ಮಂದಿರದ ಗೌರವಾಧ್ಯಕ್ಷ ನಾಗಪ್ಪ ಗೌಡ ಪಾಲೆಚ್ಚಾರು, ಮಾಜಿ ಟ್ರಸ್ಟಿ ಅಶೋಕ್ ರೈ ಗಾಣಜಾಲು, ಹಿಂದೂ ಜಾಗರಣ ವೇದಿಕೆ ಕುಂತೂರು ಸಹಸಂಚಾಲಕ ದೀಕ್ಷಿತ್ ಅನ್ನಡ್ಕ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಉದಯ್ ಬಾಣಬೆಟ್ಟು, ಕ್ಲಬ್ ಕಾರ್ಯದರ್ಶಿ ಯತೀಶ್ ಇಡಾಲ ಉಪಸ್ಥಿತರಿದ್ದರು.

ಕ್ಲಬ್ ಸದಸ್ಯೆ ಸವಿತಾ ಕಡಿರಡ್ಕ ಪ್ರಾರ್ಥನೆ, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕೇವಳ ಸ್ವಾಗತ, ಧನ್ಯಶ್ರೀ ಚಾಮೇತಡ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕ ಚಂದ್ರಹಾಸ ಕೆ.ಸಿ ಕುಂಟ್ಯಾನ ಕಾರ್ಯಕ್ರಮ ನಿರ್ವಹಿಸಿದರು.

ಕ್ಲಬ್ ಸದಸ್ಯರಾದ ದೀಪಕ್ ಪಾಲೆಚ್ಚಾರು, ಚರಣ್ ಪಾಲೆಚ್ಚಾರ್, ದಿನೇಶ್ ಮಾಪಲ, ಧನುಶ್ರೀ ಚಾಮೇತಡ್ಕ, ಲೋಕೇಶ್ ಇಡಾಲ, ರಾಜೇಶ್ ಕೇವಳ, ಪದ್ಮಾವತಿ ಕೇವಳ, ಯಶ್ಮಿತ್ ಕುಂಟ್ಯಾನ ಸೇರಿದಂತೆ ಹಲವರು, ಮಕ್ಕಳ ಪಾಲಕರು, ಕಬಡ್ಡಿ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here