






ಆಲಂಕಾರು: ಇಲ್ಲಿನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅರಿವು ಕೇಂದ್ರದ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 12ರಂದು ನಡೆಯಿತು.



ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಧುರಾ ಭಟ್ ಅವರು ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಜ್ಞಾಪಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಈ ವಿಚಾರದಲ್ಲಿ ಪೋಷಕರು ಮಕ್ಕಳ ಕಡೆ ಗಮನ ಹರಿಸಬೇಕು. ನಿರಂತರ ಓದುವ ಹವ್ಯಾಸವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ಆಲಂಕಾರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಜಾತ ಕೆ. ಮಾತನಾಡಿ, ಮಕ್ಕಳು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಉನ್ನತ ಹುದ್ದೆಯನ್ನು ಪಡೆಯಲು ಈಗಿನಿಂದಲೇ ಪೂರ್ವ ತಯಾರಿ ಮಾಡಬೇಕೆಂದು ಹೇಳಿದರು. ಗ್ರಾ.ಪಂ.ಕಾರ್ಯದರ್ಶಿ ವಸಂತ ಶೆಟ್ಟಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯಬಾರದು. ಇಂತಹ ಶಿಬಿರಗಳಿಂದ ಉತ್ತಮ ಬೌದ್ಧಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಈ ಶಿಬಿರದ ಮುಖ್ಯ ಉದ್ದೇಶವೂ ಇದೇ ಆಗಿದೆ ಎಂದರು. ಸುಲೋಚನಾ ಅವರು ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾಳಜಿ ಸ್ವಚ್ಛತೆಯ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಯೋಗ ಶಿಕ್ಷಕಿ ಮಲ್ಲಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ವಿದ್ಯಾರ್ಥಿಗಳಾದ ಅಂಶಿಕ್, ವಂಶಿತ್, ಕೌಶಲ್, ಪವನ್ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಗ್ರಂಥಾಲಯ ಅರಿವು ಕೇಂದ್ರದ ಮೇಲ್ವಿಚಾರಕಿ ಕಮಲ ಎ., ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಸಿಬ್ಬಂದಿಗಳಾದ ಹೇಮಾವತಿ, ಭವ್ಯ ಕುಮಾರಿ, ಸುಶ್ಮೀತಾ, ಕರಿಯಪ್ಪ, ವಸಂತ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮೋನಪ್ಪ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.









