






ರಾಮಕುಂಜ: ಕಡಬ ತಾಲೂಕು ಕೊಲ ಗ್ರಾಮದ ಆನೆಗುಂಡಿ ಎಂಬಲ್ಲಿ ಕೊಲ ಜಾನುವಾರು ಸಂರ್ವದನೆ ಮತ್ತು ತರಬೇತಿ ಕೇಂದ್ರದ ಜಾಗದಲ್ಲಿ ಜನವಸತಿ ಪ್ರದೇಶದ ಮಗ್ಗುಲಲ್ಲಿ ತಾಜ್ಯ ರಾಶಿ ಬಿದ್ದು ಪರಿಸರ ದುರ್ನಾತ ಬೀರುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.


ಈ ಜಾಗದಲ್ಲಿ ಕಳೆದ ಒಂದು ವರ್ಷದಿಂದ ಕಸ ಸುರಿಯಲಾಗುತ್ತಿದೆ. ಆನೆಗುಂಡಿ ಪರಿಸರದಲ್ಲಿರುವ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಗಿಡ ಗಂಟಿಗಳಿಂದ ಕೂಡಿದ ಪ್ರದೇಶದಲ್ಲಿ ರಾತ್ರಿ ವೇಳೆ ಯಾರೋ ಕಸ ಸುರಿಯುತ್ತಾರೆ ಎಂದು ಆರೋಪ ವ್ಯಕ್ತವಾಗಿದೆ. ಗಾಳಿ ಬಂದಾಗ ಪ್ಲಾಸ್ಟಿಕ್ ತಾಜ್ಯ ಸುತ್ತಮುತ್ತಲಿನ ಮನೆಗಳ ಅಂಗಳದ ತನಕ ಬರುತ್ತದೆ. ಘನ ತಾಜ್ಯದೊಂದಿಗೆ ಹಸಿ ಕಸಗಳನ್ನು ಇಲ್ಲಿ ಸುರಿಯುವುದರೊಂದಿಗೆ ಗುಡ್ಡಕ್ಕೆ ಮೇಯಲು ಬಿಡುವ ದನಗಳು ಹಸಿ ಕಸದೊಂದಿಗೆ ಪ್ಲಾಸ್ಟಿಕ್ ತಾಜ್ಯವನ್ನು ಸೇವಿಸಿ ಆರೋಗ್ಯ ಕೆಟ್ಟು ಹೋಗಿರುವ ಘಟನೆಗಳು ನಡೆದಿದೆ. ಅಲ್ಲದೆ ತಾಜ್ಯ ತಿನ್ನುವ ನಾಯಿಗಳು, ಪಕ್ಷಿಗಳು ಇಲ್ಲಿಯೇ ಬೀಡು ಬಿಟ್ಟಿದೆ. ಕಸ ಸುರಿಯುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕಂದು ಪರಿಸರದ ಮಂದಿ ಆಗ್ರಹಿಸಿ ಈಗಾಗಲೇ ಕೊಲ ಪಂಚಾಯಿತಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ಪಂಚಾಯಿತಿ ಅಧಿಕಾರಿ ವರ್ಗಕ್ಕೆ ದೂರು ನೀಡಿದ್ದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.



ಕೊಲ ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮನೆಗಳಿಂದ ಕಸ ಸಂಗ್ರಹಿಸುವುದಲ್ಲದೆ ಘನತಾಜ್ಯ ವಿಲೇವಾರಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿದರೂ ಇನ್ನೂ ಕೆಲವರು ಜಾಗೃತಿಯಾಗದೇ ಇರುವುದು ವಿಪರ್‍ಯಾಸ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಾಜ್ಯ ಸುರಿದಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಕಸದಲ್ಲಿ ಸಿಕ್ಕಿರುವ ಮಾಹಿತಿಯಾಧರಿಸಿ ಕಸ ಹಾಕಿದವರನ್ನು ಕಂಡು ಹಿಡಿದು ಕಾನೂನಾತ್ಮಕವಾಗಿ ಹಲವರಿಗೆ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ಪೊಲೀಸರಿಗೆ ದೂರು ನೀಡಲಾಗುತ್ತದೆ. ಸ್ವಚ್ಚ ಪರಿಸರಕ್ಕಾಗಿ ಪಣತೊಟ್ಟ ಗ್ರಾ.ಪಂ ಆಶಯಕ್ಕೆ ವಿರುದ್ದವಾಗಿದ್ದರೆ ಕಾನೂನುಕ್ರಮ ಅಗತ್ಯ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಆನೆಗುಂಡಿ ಪರಿಸರದಲ್ಲಿ ತಾಜ್ಯ ರಾಶಿಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪ್ರತಿ ಮನೆಗಳಿಂದ ಕಸ ಸಂಗ್ರಹಿಸುವ ಸಂಕಲ್ಪದೊಂದಿಗೆ ಕಸ ಸಂಗ್ರಹಿಸಲಾಗುತ್ತಿದೆ. ಜೊತೆಗೆ ತಾಜ್ಯ ವಿಲೇವಾರಿ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ಹಲವರಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ ಇನ್ನು ಕೆಲವರು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು.
ಸಂದೇಶ್, ಪಿಡಿಓ










