






ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ನೆಲ್ಲಿತ್ತಡ್ಕ ಪ್ರದೇಶದಲ್ಲಿ ಹಲವು ಮನೆಗಳಿಗೆ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನೆಲ್ಲಿತ್ತಡ್ಕ ಪ್ರದೇಶದ ಸುಮಾರು 10-15 ಮನೆಗಳಿಗೆ ಕಳೆ ಕೆಲವು ತಿಂಗಳುಗಳಿಂದ ಗ್ರಾ.ಪಂ ನಳ್ಳಿ ನೀರು ಪೂರೈಕೆ ಇಲ್ಲದ ಕಾರಣ ಅಲ್ಲಿನ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಸಂಬಂಧಪಟ್ಟ ಸ್ಥಳೀಯ ಗ್ರಾ.ಪಂಗೆ ವಿಚಾರ ತಿಳಿಸಿದ್ದರೂ ಕೂಡಾ ಸ್ಪಂದಿಸದೆ ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ನೀರಿನ ಸಮಸ್ಯೆ ವಿಚಾರವಾಗಿ ‘ಸುದ್ದಿ’ ಪತ್ರಿಕೆ ಮತ್ತು ವೆಬ್‌ಸೈಟ್ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಇದೀಗ ನೆ.ಮುಡ್ನೂರು ಗ್ರಾಮ ಪಂಚಾಯತ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ ನೀರು ಪೂರೈಕೆಗೆ ಉಂಟಾಗಿದ್ದ ಅಡಚಣೆಗಳನ್ನು ನಿವಾರಿಸಿ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ಕೆಲ ತಿಂಗಳುಗಳಿಂದ ಇದ್ದ ನೀರಿನ ಸಮಸ್ಯೆ ನಿವಾರಣೆಯಾಗಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.












