ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಅಭಿನಂದನೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

0

ಮಾನ್ಯತೆಯಿಲ್ಲದ ಕೋರ್ಸ್‌ಗಳು ಸರಕಾರದಿಂದಲೇ ಬ್ಯಾನ್-ಅಶೋಕ್ ಕುಮಾರ್ ರೈ

ಪುತ್ತೂರು:ಕಲಿಕೆಯಲ್ಲಿ ಕ್ಯಾರಿಯರ್ ಗೈಡೆನ್ಸ್ ಅತೀ ಆವಶ್ಯಕ. ಮಿಸ್‌ಗೈಡ್ ಮಾಡುವುದು ಸಮಾಜದಲ್ಲಿ ನಡೆಯುತ್ತಲೇ ಇದೆ. ಇದರ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಮಾನ್ಯತೆಯಿರುವ ಕೋರ್ಸ್‌ಗಳನ್ನು ಉಳಿಸಿಕೊಂಡು, ಉಪಯೋಗವಿಲ್ಲದ ಕೋರ್ಸ್‌ಗಳನ್ನು ಸರಕಾರವೇ ಬ್ಯಾನ್ ಮಾಡಲಿದೆ. ಹೀಗಾಗಿ ಮಾನ್ಯತೆಯಿಲ್ಲದ ಕೆಲವು ಕೋರ್ಸ್‌ಗಳು ರದ್ದು ಆಗಲಿದೆ. ಯಾರೂ ಅದಕ್ಕೆ ಅನುಮತಿ ಕೊಡುವುದಿಲ್ಲ. ಇದರ ಬಗ್ಗೆ ಪೋಷಕರು ಗಮನ ಹರಿಸಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಸಹಯೋಗದಲ್ಲಿ ಮೇ.16ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳು, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.


ವಾಣಿಜ್ಯ ಕಟ್ಟಡದ ಕೊಠಡಿಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭವಾಗುತ್ತದೆ. ಅಲ್ಲಿ ಮಕ್ಕಳು ಏನನ್ನೂ ಕಲಿಯಲು ಸಾಧ್ಯವಿಲ್ಲ. ಸಂಸ್ಥೆಯವರು ಹಣ ಮಾಡಬಹುದು. ಆದರೆ ಸಮಾಜ ಎತ್ತ ಸಾಗಲಿದೆ. ಅಲ್ಲಿ ಕಲಿತರೆ ಮಕ್ಕಳು ಉತ್ತಮ ಪ್ರಜೆಗಳನ್ನಾಗಿ ಸಾಧ್ಯವಿದೆಯಾ. ಇದಕ್ಕಾಗಿ ಸರಕಾರದ ಹಂತದಲ್ಲಿ ಚರ್ಚೆಯಾಗಿದ್ದು ಮಾನ್ಯತೆಯಿಲ್ಲದ ಕೊರ್ಸ್‌ಗಳ ಬಗ್ಗೆ ಸರಕಾರವೇ ಕ್ರಮಕೈಗೊಳ್ಳಲಿದೆ ಎಂದರು. ಶಿಕ್ಷಣ ವ್ಯವಸ್ಥೆ ಇಂದು ವಾಣಿಜ್ಯೀಕರಣವಾಗುತ್ತಿದೆ. ಮಕ್ಕಳು ಕ್ಯಾರಿಯರ್ ಗೈಡೆನ್ಸ್ ಇಲ್ಲದೆ ಹಿಂದುಳಿಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಮೇಲೆ ತರುವ ಕೆಲಸವಾಗಬೇಕೇ ಹೊರತು ಮಿಸ್‌ಗೈಡ್ ಮಾಡಬಾರದು ಎಂದು ಹೇಳಿದ ಅವರು ಕನಿಷ್ಠ ಅಂಖ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಮೇಲೆ ತರುವ ಕೆಲಸವಾಗಬೇಕು. ಶೇ.೧೦೦ ಫಲಿತಾಂಶ ದಾಖಲಿಸುವ ಜವಾಬ್ದಾರಿ ಎಲ್ಲಾ ಶಿಕ್ಷಣ ಸಂಸ್ಥೆಯ ಮೇಲಿದೆ. ಹೊಸ ಶಿಕ್ಷಕರಲ್ಲಿ ನಿವೃತ್ತ ಶಿಕ್ಷಕರನ್ನು ಅನುಭವ ಇರಲು ಅಸಾಧ್ಯ. ಹೀಗಾಗಿ ನಿಮ್ಮ ಪಕ್ಕದ ಶಾಲೆಯಲ್ಲಿ ಸೇವೆ ನೀಡಿ. ಅದು ನಿಮ್ಮ ಆರೋಗ್ಯಕ್ಕೂ ಉತ್ತಮ ಜೊತೆಗ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ. ಶಿಕ್ಷಕರು ಸಮಾಜ ಬದಲಾವಣೆ ಮಾಡುವವರು. ಉದ್ಯೋಗದ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಬೇಕು ಎಂದು ಹೇಳಿದರು.


ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶೇ.100 ಫಲಿತಾಂಶ ಪಡೆಯುವಲ್ಲಿ ಎಲ್ಲಾ ಶಾಲೆಗಳಲ್ಲಿಯೂ ಪ್ರಯತ್ನಗಳು ನಡೆಯತ್ತಿವೆ. ಇದರಲ್ಲಿ ಮಕ್ಕಳು, ಪೋಷಕರ ಸಹಕಾರವು ಅವಶ್ಯಕ. ಶಾಲೆಗಳ ಸಮಸ್ಯೆಗಳ ಕುರಿತು ಶಾಲಾ ಮುಖ್ಯಶಿಕ್ಷಕರ ಸಂಘದಲ್ಲಿ ಚರ್ಚಿಸಿ ಶಾಸಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಸನ್ಮಾನ, ಅಭಿನಂದನೆ:
ನಿವೃತ್ತ ಮುಖ್ಯ ಶಿಕ್ಷಕರಾದ ಜಯಲಕ್ಷ್ಮೀ ಎ., ಜಯರಾಮ ಶೆಟ್ಟಿ, ನಳಿನಿ ಕೆ., ಶ್ರೀಧರ ಭಟ್, ರಮೇಶ್ ಮಯ್ಯ, ಶ್ರೀಪತಿ ಭಟ್, ಮೀರಾ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರೀಷ್ಠ ಅಂಕಗಳಿಸಿದ ಸರಕಾರಿ ಪ್ರೌಢ ಶಾಲೆಯ ಶಿಲ್ಪ ವಿಧಾತ್ರಿ, ಭಾನುಪ್ರೀಯ, ಸಪ್ನಾ, ಅನುದಾನಿತ ಶಾಲೆಯ ಯಶ್ವಿತಾ, ದೃತಿ, ಆದಿತ ಭಟ್, ದೀಪಕ್‌ಪಿ.ಎಸ್., ಅನುದಾನ ರಹಿತ ಶಾಲೆಯ ಆದ್ಯ, ಅನನ್ಯ, ಅಪೇಕ್ಷಾ ಎನ್., ಪ್ರೀತಿ ಪ್ರಭು ಶಾವ್ಯ ಯು.ರೈ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಾದ ಅಭಿನವ ಕೃಷ್ಣ, ಕೆ.ಪ್ರಥ್ವಿ, ಸಪ್ನಾಎಸ್., ಶ್ರೀರಕ್ಷಾ ಹಾಗೂ ಶೇ.100 ಫಲಿತಾಂಶ ದಾಖಲಿಸಿದ ಎಲ್ಲಾ ಶಾಲೆಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ದತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಎಸ್‌ಎಸ್‌ಎಲ್‌ಸಿ ನೋಡೆಲ್ ಅಧಿಕಾರಿ ಹರಿಪ್ರಸಾದ್, ಕಡಬ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಪುತ್ತೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ವಸಂತ ಮೂಲ್ಯ ಸ್ವಾಗತಿಸಿ, ಉಪಾಧ್ಯಕ್ಷ ಮೋನಪ್ಪ ವಂದಿಸಿದರು. ಕೆಯ್ಯೂರು ಕೆಪಿಎಸ್ ನ ಸಹಶಿಕ್ಷಕ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here