ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ : ಶಿರಾಡಿಯ ತಾಯಿ, ಮಗು ಕೊಲೆ ಪ್ರಕರಣದ ಆರೋಪಿ ಜಯೇಶ್‌ಗೆ 5 ವರ್ಷ ಶಿಕ್ಷೆ ವಿಧಿಸಿ ನಾಗಪುರ ಕೋರ್ಟ್ ಆದೇಶ

0

ನೆಲ್ಯಾಡಿ: ಮೂರು ವರ್ಷದ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ 100 ಕೋಟಿ ರೂ.ಬೇಡಿಕೆ ಇಟ್ಟ ಪ್ರಕರಣದ ಅಪರಾಧಿ ಜಯೇಶ್ ಪೂಜಾರಿಗೆ ನಾಗಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.


ಮೂಲತ: ಕಡಬ ತಾಲೂಕಿನ ಶಿರಾಡಿ ನಿವಾಸಿಯಾಗಿರುವ ಜಯೇಶ್, 2008ರಲ್ಲಿ ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷ ಪ್ರಾಯದ ಮಗು ಜಿಷ್ಣುವನ್ನು ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಜಯೇಶ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಅಲ್ಲಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಕರೆ ಮಾಡಿ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದವನೆಂದು ಹೇಳಿಕೊಂಡು 100 ಕೋಟಿ ರೂ.ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಸ್ಪೋಟ ನಡೆಸಿ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬೆದರಿಕೆ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಗಡ್ಕರಿ ಅವರ ನಿವಾಸ ಮತ್ತು ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.

ನಾಗ್ಪುರ ಪೊಲೀಸರಿಂದ ಜಯೇಶ್ ವಿಚಾರಣೆ;
ತನಿಖೆ ಕೈಗೊಂಡಿದ್ದ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿಗೆ ಭೇಟಿ ನೀಡಿ ಜಯೇಶ್‌ನ ವಿಚಾರಣೆ ನಡೆಸಿದ್ದರು. ಈ ವೇಳೆ ಜಯೇಶ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಒಂದು ಸೆಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಜಯೇಶ್ ಪೂಜಾರಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು ಅದರಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆಗಳು ದಾಖಲಾಗಿದ್ದವು. ಈ ಸಂಖ್ಯೆಯನ್ನು ಆತನ ಸ್ನೇಹಿತೆ ನೀಡಿದ್ದಾಳೆಂದು ಹೇಳಲಾಗಿದೆ. ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಬೆಂಗಳೂರಿನ ನಾಲ್ವರೊಂದಿಗೆ ತಾನು ಸಂಪರ್ಕದಲ್ಲಿದ್ದೆ ಎಂದು ಜಯೇಶ್ ವಿಚಾರಣೆ ವೇಳೆ ಹೇಳಿ ತಪ್ಪೊಪ್ಪಿಕೊಂಡಿದ್ದ. ಮಹಾರಾಷ್ಟ್ರ ಪೊಲೀಸರು ಈ ಮಾಹಿತಿಯನ್ನು ಎನ್‌ಐಎ ಜತೆ ಹಂಚಿಕೊಂಡಿದ್ದರು. ಇದರಂತೆ ಜಯೇಶ್ ಹೆಸರಿಸಿರುವ ನಾಲ್ವರ ವಿರುದ್ಧ ಎನ್‌ಐಎ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಪೊಲೀಸರ ಪ್ರಕಾರ ಜಯೇಶ್ ಪೂಜಾರಿ ಹೆಸರು ಮಂಗಳೂರು ಬಾಂಬ್ ಸ್ಪೋಟ ಪ್ರಕರಣದಲ್ಲಿಯೂ ಕೇಳಿಬಂದಿದೆ. ಇದೀಗ ವಿವಿಧ ಕಲಂಗಳ ಅಡಿ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಜಯೇಶ್ ತಪ್ಪಿತಸ್ಥನೆಂದು ತೀರ್ಪು ನೀಡಿದ ನಾಗಪುರ ನ್ಯಾಯಾಲಯ ೫ ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಯೇಶ್:
ಗಡ್ಕರಿಯವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಜಯೇಶ್ 2008ರಲ್ಲಿ ಶಿರಾಡಿಯಲ್ಲಿ ತನ್ನ ದೊಡ್ಡಪ್ಪನ ಮಗನ ಪತ್ನಿ ಮತ್ತು ಮಗುವಿನ ದಾರುಣ ಹತ್ಯೆ ಪ್ರಕರಣದ ಅಪರಾಧಿಯಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ 2008ರ ಆ.2ರಂದು ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ (23ವ.) ಮತ್ತು ಆಕೆಯ 3 ವರ್ಷದ ಗಂಡು ಮಗು ಜಿಷ್ಣುವನ್ನು ಕೊಲೆಗೈದ ಪ್ರಕರಣದ ಅಪರಾಧಿಯಾಗಿರುವ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ಗೆ ಗಲ್ಲು ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2016ರ ಆಗಸ್ಟ್ 12ರಂದು ತೀರ್ಪು ನೀಡಿತ್ತು. ಈತ ಸೌಮ್ಯ ಅವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಚೂರಿಯಿಂದ ಅವರ ಹೊಟ್ಟೆಗೆ ತಿವಿದು, ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದಲ್ಲದೆ ಸೌಮ್ಯರ ಪುತ್ರ 3 ವರ್ಷ ಪ್ರಾಯದ ಜಿಷ್ಣುವಿಗೂ ಚೂರಿಯಿಂದ ತಿವಿದು ಕೊಲೆ ಮಾಡಿದ್ದ. ಎಗರಿಸಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಬೆಂಡೋಲೆಯನ್ನು ಉಪ್ಪಿನಂಗಡಿಯ ಜ್ಯುವೆಲ್ಲರಿಯೊಂದಕ್ಕೆ ಮಾರಾಟ ಮಾಡಿ ತಲೆ ಮರೆಸಿಕೊಂಡಿದ್ದ.

ಕೇರಳದಲ್ಲಿ ಬಂಧನ;
ಕೊಲೆ ಕೃತ್ಯದ ಬಳಿಕ ಪರಾರಿಯಾಗಿದ್ದ ಜಯೇಶ್ ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. 10-10-2012ರಲ್ಲಿ ಕೇರಳದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ. ಕೇರಳದ ಅಲಪುರಂ ಜಿಲ್ಲೆಯಲ್ಲಿ ನೆಲೆಸಿದ್ದ ಆತ ಅಲ್ಲಿ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತ್ತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಆತನನ್ನು ವಿಚಾರಣೆ ಮಾಡಿದಾಗ ಆತ ಶಿರಾಡಿಯಲ್ಲಿ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ತಿಳಿದು ಬಂದಿತ್ತು. ಕೇರಳ ಪೊಲೀಸರ ಅತಿಥಿಯಾಗಿದ್ದ ಆರೋಪಿಯನ್ನು ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ಶಿರಾಡಿಯ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೇರಳದಲ್ಲಿ ಮುಸ್ಲಿಂ ಯುವತಿಯೋರ್ವರನ್ನು ಪ್ರೀತಿಸಿ ಮದುವೆಯಾಗಿದ್ದ ಜಯೇಶ್ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ವರದಿಯಾಗಿತ್ತು.

ಪರಾರಿಯಾಗಲು ಯತ್ನಿಸಿದ್ದ:
ತಾಯಿ, ಮಗುವಿನ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ವಿಚಾರಣೆಗಾಗಿ ಮಂಗಳೂರು ಕಾರಾಗೃಹದಿಂದ ಪುತ್ತೂರು ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಕರೆ ತಂದು ಸಾಕ್ಷಿ ವಿಚಾರಣೆ ನಡೆಯುತ್ತಿದ್ದಾಗ ಕಟಕಟೆಯಲ್ಲಿದ್ದ ಆರೋಪಿ ದಿಢೀರ್ ಕಟಕಟೆಯ ಬಲಬದಿಯಿಂದ ಮೇಲಕ್ಕೆ ಜಿಗಿದು ಅಲ್ಲಿದ್ದವರು ನೋಡನೋಡುತ್ತಿದ್ದಂತೆಯೇ ಕೋರ್ಟಿನಿಂದ ಹೊರಗೆ ಬಂದು ಪರಾರಿಯಾಗಲು ಯತ್ನಿಸಿದ್ದ. ರಸ್ತೆಯಲ್ಲಿ ಓಡುತ್ತಾ ಮಿನಿ ವಿಧಾನ ಸೌಧದ ಕಡೆ ಓಡುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಡಬದ ಪೊಲೀಸ್ ಸಿಬಂದಿ ಮಹೇಶ್ ಹಾಗೂ ನ್ಯಾಯವಾದಿಯೊಬ್ಬರು ಆತನನ್ನು ಹಿಡಿದುಕೊಂಡರು. ಅದೇ ವೇಳೆ ಸಾರ್ವಜನಿಕರೂ ಸೇರಿಕೊಂಡು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಕರೆ ತಂದಿದ್ದರು. ಈ ಸಂದರ್ಭದಲ್ಲಿ ಆತ ಒಂದು ರೀತಿಯಲ್ಲಿ ಬೆದರಿಕೆಯೊಡ್ಡುವ ರೀತಿಯಲ್ಲಿ ವರ್ತಿಸಿದ್ದ. ಈ ಘಟನೆಯ ಕುರಿತು ಪುತ್ತೂರು ನ್ಯಾಯಾಲಯದಿಂದ ಬಂದ ಮಾಹಿತಿ ಮತ್ತು ಈತನನ್ನು ಜಿಲ್ಲಾ ಕಾರಾಗೃಹದಿಂದ ಪುತ್ತೂರಿಗೆ ಕರೆ ತಂದ ಪೊಲೀಸರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯೇಶ್ ಯಾನೆ ಶಾಹೀರ್ ಯಾನೆ ಶಾಕೀರ್‌ನ ವಿರುದ್ಧ ಐಪಿಸಿ ಸೆಕ್ಷನ್ ೨೨೪ರ ಪ್ರಕಾರ ಅಭಿರಕ್ಷಾಲಯದಿಂದ ಓಡಲೆತ್ನಿಸಿದ ಪ್ರಕರಣ ದಾಖಲಾಗಿತ್ತು.

3 ಬಾರಿ ಕರೆ ಮಾಡಿದ್ದ
2023ರ ಮಾ.21ರಂದು ನಿತಿನ್ ಗಡ್ಕರಿಯವರ ಕಚೇರಿಗೆ ಕರೆ ಮಾಡಿ 100 ಕೋಟಿ ರೂ.ಹಣ ನೀಡುವಂತೆ ಹೇಳಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಕುರಿತು ನಿತಿನ್ ಗಡ್ಕರಿ ಅವರ ಕಚೇರಿಯಿಂದ ಬಂದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ತನಿಖೆ ಆರಂಭಿಸಿದ್ದರು. ಬೆಳಿಗ್ಗೆ 11.25, 11:32 ಮತ್ತು ಮಧ್ಯಾಹ್ನ 12:30ಕ್ಕೆ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳು ಬಂದಿತ್ತು. ಮಾ.28ರಂದು ಬೆಳಗಾವಿ ಹಿಂಡಲಗಾ ಜೈಲಿಗೆ ನಾಗ್ಪುರ ಪೊಲೀಸರು ಭೇಟಿ ನೀಡಿ ತನಿಖೆ ಜಯೇಶ್‌ನ ವಿಚಾರಣೆ ಆರಂಭಿಸಿದ್ದರು.

LEAVE A REPLY

Please enter your comment!
Please enter your name here