







ಬಂಟ್ವಾಳ: ತಾಲೂಕಿನ ವಿವಿಧೆಡೆಗಳಲ್ಲಿ ಶನಿವಾರ ಅಪರಾಹ್ನದ ಬಳಿಕ ಗಾಳಿಮಳೆಯ ಆರ್ಭಟ ಜೋರಾಗಿದ್ದು, ಸಿಡಿಲಿನ ಅಬ್ಬರಕ್ಕೆ ಎರಡು ಪ್ರಮುಖ ದೇವಸ್ಥಾನಗಳು ಮತ್ತು ಎರಡು ಮನೆಗಳಿಗೆ ಹಾನಿಯಾಗಿದೆ.



ಇಳಿಯೂರು ದೇವಸ್ಥಾನಕ್ಕೆ ಹಾನಿ.. ಮಣಿ ನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನ ಕ್ಕೆ ಸಿಡಿಲು ಬಡಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ಸುಮಾರು 1 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.




ಸಂಜೆ ಸುಮಾರು 4.30 ರ ವೇಳೆಗೆ ಸುರಿದ ಗಾಳಿ,ಮಳೆಯ ಜೊತೆಗೆ ಸಿಡಿಲಿನ ಅಬ್ಬರವು ಜೋರಾಗಿತ್ತು. ಭಾರೀ ಪ್ರಮಾಣದಲ್ಲಿ ಬಂದ ಸಿಡಿಲಿನ ತೀವ್ರತೆಗೆ ಇಳಿಯೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭ ಗುಡಿಯ ಮೇಲಿನ ಪ್ರಾಕಾರದ ಶಿಲಾ ಕಲ್ಲು ಛಿದ್ರಗೊಂಡು ನೆಲಕ್ಕಪ್ಪಳಿಸಿದೆ.ಈ ಸಂದರ್ಭದಲ್ಲಿ ದೇವಳದ ಅರ್ಚಕರು ಹೊರಭಾಗದಲ್ಲಿದ್ದುದರಿಂದ ಅವರಿಗೆ ಯಾವುದೇ ರೀತಿಯ ಅಪಾಯವುಂಟಾಗಿಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು. ಸಿಡಿಲಿಗೆ ದೇವಸ್ಥಾನದ ಗರ್ಭಗುಡಿಗೂ ಹಾನಿಯಾಗಿದ್ದು,ಕೋಟ್ಯಾಂತರ ರೂ.ನಷ್ಟ ಸಂಭವಿಸಿದೆ. ದೇವಳದ ಆಡಳಿತ ಟ್ರಸ್ಟಿಗಳು ಸೇರಿದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅನಾಹುತದ ಬಗ್ಗೆ ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದೆ.

ಕಾರಿಂಜ ದೇವಳಕ್ಕೂ ಸಿಡಿಲಾಘಾತ:
ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಕ್ಕೆ ಸಿಡಿಲು ಬಡಿದ ಘಟನೆ ಶನಿವಾರ ಸಂಭವಿಸಿದೆ.
ಕಾರಿಂಜೇಶ್ವರ ದೇವಸ್ಥಾನ ಬೃಹತ್ ಬಂಡೆಯ ಮೇಲೆ ಇದ್ದು, ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿರಬೇಕೆಂದು ಅಂದಾಜಿಸಲಾಗಿದೆ. ಈ ಹೊತ್ತಿನಲ್ಲಿ ಯಾರೂ ದೇವಸ್ಥಾನ ದಲ್ಲಿ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇವಸ್ಥಾನ ದ ಗರ್ಭಗುಡಿಯ ಮೇಲಿನ ಗೋಪುರ ಕ್ಕೆ ಸಿಡಿಲು ಬಡಿದಿದ್ದು, ನಷ್ಟ ಅಂದಾಜಿಸಲಾಗಿಲ್ಲ. ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ.ಅಮೀನ್ ತಿಳಿಸಿದ್ದಾರೆ.

ತಾಲೂಕಿನ ಕೆಲ ಭಾಗಗಳಲ್ಲಿ ಎರಡು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಶನಿವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಮಳೆ ಸುರಿಯಿತು. ಕಾವಳಪಡೂರು ಗ್ರಾಮದ ಮಧ್ವ ಬರ್ಕಟ್ಟ, ಎಂಬಲ್ಲಿ ಕವಿತ ಸೇಸಪ್ಪ ಪೂಜಾರಿ ಎಂಬುವರ ಮನೆಗೆ ಸಿಡಿಲು ಬಡಿದು, ಭಾಗಶಃ ಹಾನಿಯಾಗಿದೆ. ಕಡೇಶಿವಾಲಯ ಗ್ರಾಮದ ಅಣ್ಣು ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಆಗಿರುತ್ತದೆ. ಪೆರಾಜೆ ಗ್ರಾಮದ ಕೊಂಕಣಪದವು ಮನೆಯ ಲಲಿತರವರ ಹಂಚಿನ ಮನೆಯ ಮೇಲೆ ಹಲಸಿನ ಮರ ಬಿದ್ದು ಮನೆಗೆ ಭಾಗಶ: ಹಾನಿಯಾಗಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.










