






ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ


ಪುತ್ತೂರು: ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇದರ 21ನೇ ವಾರ್ಷಿಕ ಸಮಾರಂಭವು ಶ್ರೀಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೇ.17ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯಿತು.



ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರ ನೇತೃತ್ವದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಮುದಾಯ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸಂಪ್ರದಾಯ ಉಳಿಯಲು ಸಾಧ್ಯ-ಕುತ್ಯಾಳ ಕೋಮರ ಕುಂಞಿಕೃಷ್ಣ;
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುತ್ಯಾಳ ಕೋಮರ ಕುಂಞಿಕೃಷ್ಣ ಮಾತನಾಡಿ, ವಾಣಿಯನ್ ಸಮುದಾಯದ ನಿಯಮ, ಸಂಪ್ರದಾಯಗಳಿಗೆ ಬಹಳಷ್ಟು ಮಹತ್ವವಿದೆ. ಅದನ್ನು ಉಳಿಸಿ ಬೆಳೆಸಿ ಸನಾತನ ಧರ್ಮವನ್ನು ಸಂರಕ್ಷಿಸಬೇಕು. ವಾರ್ಷಿಕ ಕಾರ್ಯಕ್ರಮಗಳು ಸಮಾಜ ಬಾಂದವರನ್ನು ಒಂದೆಡೆ ಸೇರಲು ಸಹಕಾರಿಯಾಗಿದ್ದು ಪುತ್ತೂರು ಸಂಘದ ಮೂಲಕ ಪ್ರತಿ ವರ್ಷ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಲ್ಲಿ ಸಮಾಜ ಬಾಂಧವರೆಲ್ಲರೂ ಭಾಗವಹಿಸುವ ಮೂಲಕ ಸಮಾಜ ಸಂಪ್ರದಾಯ ಉಳಿಯಲು ಸಾಧ್ಯ. ಸಮಾಜ ಬಾಂಧವರು ಉನ್ನತ ವಿದ್ಯಾಭ್ಯಾಸ, ಉದ್ಯೋಗ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಪಡೆಯುವಂತಾಗಬೇಕು ಎಂದರು.
ಸಂಘದ ಬೆಳವಣಿಗೆಗೆ ಸಮುದಾಯದವರ ಕೊಡುಗೆ ಅವಶ್ಯಕ-ರಾಮ ಮುಗ್ರೋಡಿ:
ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಕೆ.ರಾಮ ಮುಗ್ರೋಡಿ ಮಾತನಾಡಿ, ಪುರಾತನ ಸಂಪ್ರದಾಯ, ಆಚರಣೆಗಳೇ ಸನಾತನ ಧರ್ಮದ ಶಕ್ತಿ. ಅಚಾರ-ವಿಚಾರಗಳಲ್ಲಿಯೇ ವಾಣಿಯನ್ ಸಮುದಾಯ ಪ್ರಸಿದ್ಧಿಯಾಗಿದೆ. ಒಬ್ಬರಿಂದಾಗಿ ಸಂಘ ಬೆಳೆಯಲು ಅಸಾಧ್ಯ. ಸಮಾಜ ಬಾಂಧವರೆಲ್ಲರು ಸಹಕರಿಸಿದಾಗ ಸಂಘಟನೆ ಬಲೀಷ್ಠವಾಗಿ ಬೆಳೆಯಲಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಒಟ್ಟಾಗಿ ಸಹಕರಿಸುವ ಮೂಲಕ ಸಮಾಜ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪುತ್ತೂರಿನಲ್ಲಿ ಪ್ರಸಾದ್ ಕಲ್ಲರ್ಪೆಯವರ ಅಧ್ಯಕ್ಷತೆಯಲ್ಲಿ ಸಮಾಜದ ಉನ್ನತಿಗೆ ಪೂರಕವಾದ ಕಾರ್ಯಕ್ರಮ ನಡೆದಿದೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸವಾಲುಗಳನ್ನು ಎದುರಿಸುವ ಅರಿವು ಅಗತ್ಯ-ಸಾವಿತ್ರಿಶ್ರೀಧರ್:
ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಉಪನ್ಯಾಸಕಿ ಸಾವಿತ್ರಿ ಶ್ರೀಧರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ನೀಡಬೇಕು. ಅವರಲ್ಲಿರುವ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡಿದಾಗ ಅವರು ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರಿ. ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮೂಲಕ ಜ್ಞಾನ ಸಂಪಾದಿಸಿ, ಯಶಸ್ಸು ಗಳಿಸಬೇಕು. ಐಶಾರಾಮಿ ಬದುಕಿನಿಂದ ಸ್ಪರ್ಧಾತ್ಮಕ ಯುಗದಲ್ಲಿ ಸವಾಲುಗಳನ್ನು ಎದುರಿಸುವುದು ಅಸಾಧ್ಯವಾಗಿದ್ದು ಪೋಷಕರು ಮಕ್ಕಳಿಗೆ ಎಳವೆಯಲ್ಲಯೇ ಜ್ಞಾನ ನೀಡಬೇಕು. ಸಂಫದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಮೊಬೈಲ್ ದಾಸ್ಯದಿಂದ ಮಕ್ಕಳನ್ನು ಹೊರತರಬೇಕು-ಸಂಧ್ಯಾ ರೋಹಿತ್:
ಮಂಗಳೂರು ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಸಂಧ್ಯಾ ರೋಹಿತ್ ಮಾತನಾಡಿ, ಇಂದಿನ ಮಕ್ಕಳು ಬುದ್ದಿವಂತರು. ತಂತ್ರಜ್ಞಾನ ಅವರಿಗೆ ಬಹುಬೇಗ ಅರಿವಾಗುತ್ತದೆ. ಸಾಮಾಜಿಕ ಬದಲಾವಣೆಗಳನ್ನು ಬೇಗ ತಿಳಿದುಕೊಳ್ಳುತ್ತಾರೆ. ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ವ್ಯವಸವು ಅವರನ್ನು ಜೀವನದಲ್ಲಿ ಒಬ್ಬಂಟಿಯನ್ನಾಗಿಸುತ್ತದೆ. ಜೀವನದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದು ಮಕ್ಕಳನ್ನು ಮೊಬೈಲ್ ಚಟದಿಂದ ಹೊರತರಬೇಕಾದ ಸವಾಲು ಪೋಷಕರಲ್ಲಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬೆಳವಣಿಗೆಯಲ್ಲಿ ಸಮಯ ನೀಡಬೇಕಾದ ಆವಶ್ಯಕತೆಯಿದೆ ಎಂದರು.
ವಾಣಿಯನ್ ಸಮುದಾಯ ವಿಮಾ ಸಮುದಾಯವಾಗಿ ಬೆಳೆಯಲಿ-ಹರೀಶ್ ಪಟ್ಟೆ:
ಏಜೆನ್ಸಿ ಕೇರ್ ಹೆಲ್ತ್ ಇನ್ಯೂರೆನ್ಸ್ನ ಏರಿಯಾ ಹೆಡ್ ಹರೀಶ್ ಪಟ್ಟೆ ಮಾತನಾಡಿ, ಆಂಡ್ರಾಯ್ಡ್ ಮೊಬೈಲ್ ಬಂದ ಬಳಿಕ ಸಂಬಂಧಗಳು ದೂರವಾಗುತ್ತಿದೆ. ಹಿರಿಯರು ಸೇರಿ ಬದಲಾಯಿಸಿ ಜಾಗೃತಿ ಮೂಡಿಸಬೇಕು. ಯುವ ಜನರು, ಮಕ್ಕಳನ್ನು ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ನಮ್ಮ ಸಂಪ್ರದಾಯ ಉಳಿಯಲು ಸಾಧ್ಯ ಎಂದರು. ಆರೋಗ್ಯ ವಿಮೆ ಪ್ರತಿಯೊಬ್ಬರ ಜೀವನದಲ್ಲಿ ಬಹು ಆವಶ್ಯಕ. ಸಮಾಜ ಬಾಂಧವರೆಲ್ಲರೂ ಆರೋಗ್ಯ ವಿಮೆ ಮಾಡಿಸಿಕೊಳ್ಳುವ ಮೂಲಕ ವಿಮಾ ಸಮುದಾಯವಾಗಿ ಬೆಳೆಯಲಿ ಎಂದು ಹೇಳಿದರು.
ಸಂಘದ ಮುಖಾಂತರ ಸಮುದಾಯ ಸಂಪ್ರದಾಯ ಎತ್ತಿಹಿಯುವ ಕೆಲಸವಾಗಬೇಕು-ತಿಮ್ಮಪ್ಪ ಮೊಟ್ಟೆತ್ತಡ್ಕ
ಸಂಘದ ಗೌರವಾಧ್ಯಕ್ಷ ತಿಮ್ಮಪ್ಪ ಮೊಟ್ಟೆತ್ತಡ್ಕ ಮಾತನಾಡಿ, ವಾಣಿಯನ್ ಸಮುದಾಯವನ್ನು ಸಮಾಜದಲ್ಲಿ ಮೇಲೆ ತರುವ ಉದ್ದೇಶದಿಂದ ಸ್ಥಾಪನೆಗೊಂದು ಸಂಘವು ಇಂದು ೨೧ನೇ ವರ್ಷದಲ್ಲಿದೆ. ಹಲವು ಸವಾಲು, ಸಮಸ್ಯೆಗಳನ್ನು ಎದುರಿಸಿಕೊಂಡು ಸಂಘವು ಬೆಳೆದು ಬಂದಿದೆ. ಸಂಘದ ಕಾರ್ಯಕ್ರಮ ಹಾಗೂ ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮುದಾಯದ ಆಚಾರ-ವಿಚಾರಗಳನ್ನು ಎತ್ತಿಹಿಡಿಯುವ ಕಾರ್ಯವಾಗಬೇಕು. ಮಹಿಳೆಯವರು ಮಕ್ಕಳಿಗೆ ನೀತಿ ಪಾಠ ಹೇಳುವ ಮೂಲಕ ಸಮಾಜದವನ್ನು ಸದೃಢವಾಗಿ ಬೆಳೆಸಬೇಕು ಎಂದರು.
ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸು ಪಡೆಯಬೇಕು-ಸೌಮ್ಯಪ್ರಶಾಂತ್:
ಮಂಗಳೂರು ಇಜಿಡಿಕೆ ಪ್ರವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕಿ ಸೌಮ್ಯ ಪ್ರಶಾಂತ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸುಲಭವಲ್ಲ. ಸೋಲು ಬಂದಾಗ ಕುಗ್ಗದೆ ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಪ್ರತಿಫಲ ಸಾಧ್ಯವಿದೆ. ನಮ್ಮ ಯಶಸ್ಸು ನಮ್ಮ ಕೈಯಲ್ಲೇ ಇದ್ದು ಅನುಭವಿಗಳ ಸಲಹೆ, ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸು ಪಡೆಯಬೇಕು. ಉತ್ತಮ ನಾಯಕತ್ವದಲ್ಲಿ ಪುತ್ತೂರು ಸಂಘವು ಮುನ್ನಡೆಯುತ್ತಿದೆ ಎಂದರು.

ಆತ್ಮವಿಶ್ವಾಸವೂ ನಮ್ಮಲ್ಲದ್ದಾಗ ಸಾಧನೆ ಅಸಾಧ್ಯವಲ್ಲ-ಶಿವರಾಮ್:
ಬಂಟ್ವಾಳ ಪೊಲೀಸ್ ಉಪ ನಿರೀಕ್ಷಕ ಶಿವರಾಮ ಮಾತನಾಡಿ, ಜೀವನದಲ್ಲಿ ನಿರ್ದಿಷ್ಠ ಗುರಿಯಿರಬೇಕು. ಅದಕ್ಕೆ ಪೂರಕವಾದ ಆತ್ಮವಿಶ್ವಾಸವೂ ನಮ್ಮಲ್ಲದ್ದಾಗ ಸಾಧನೆ ಅಸಾಧ್ಯವಲ್ಲ. ಸೂಕ್ತ ಮಾರ್ಗದರ್ಶನ, ನಿರಂತರ ಪ್ರಯತ್ನ. ಉತ್ತಮ ಅಧ್ಯಯನ, ಸಾಧಿಸುವ ಛಲ ಇದ್ದಾಗ ಪ್ರತಿಫಲ ದೊರೆಯಲಿದೆ. ಮಕ್ಕಳನ್ನು ಅವರ ಆಸಕ್ತಿ ಕ್ಷೇತ್ರದಲ್ಲಿ ಬೆಳೆಯಲು ಪೋಷಕರ ಸಹಕಾರವು ಆವಶ್ಯಕ ಎಂದರು.
ಪೆರ್ಣೆ ಕ್ಷೇತ್ರದ ಕೊಳ ನಿರ್ಮಾಣದಲ್ಲಿ ಸಮಾಜ ಬಾಂಧವರು ಸಹಕರಿಸಿ-ಗಣೇಶ್ ಪಾರಕಟ್ಟ:
ಕ್ಯಾಂಪ್ಕೋ ನಿರ್ದೇಶಕರು, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರ ಕೊಳ ನಿರ್ಮಾಣ ಸಮಿತಿ ಅಧ್ಯಕ್ಷರಾಗಿರುವ ಗಣೇಶ್ ಪಾರಕಟ್ಟ ಮಾತನಾಡಿ, ಪೆರ್ಣೆ ಮುಚ್ಚಲೋಟ್ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಸಮಾಜ ಬಾಂಧವರೆಲ್ಲರ ಸಹಕಾರ ದೊರತಿದೆ. ಇದೀಗ ಕ್ಷೇತ್ರದ ಕೊಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸಮಾಜ ಬಾಂದವರು ದೇಣಿಗೆ ನೀಡಿ ಸುಂದರ, ಪವಿತ್ರ ಕೊಳ ನಿರ್ಮಾಣದಲ್ಲಿ ಸಮಾಜ ಬಾಂಧವರು ಸಹಕರಿಸುವಂತೆ ವಿನಂತಿಸಿದರು. ಪುತ್ತೂರಿನ ಸಂಘವು ಪ್ರೌಢಾವಸ್ಥೆಯಲ್ಲಿದೆ. ಉತ್ತಮ ನಿರ್ಧಾರಗಳೊಂದಿಗೆ ಸಂಘವು ಸ್ಪರ್ಧಾತ್ಮಕವಾಗಿ ಬೆಳೆಯಲಿ ಎಂದು ಆಶಿಸಿದರು.
ಸಂಘದ ಮೂಲಕ ಪ್ರತಿವರ್ಷ ವಿನೂತನ ಕಾರ್ಯಕ್ರಮ-ಪ್ರಸಾದ್ ಕಲ್ಲರ್ಪೆ:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಮಾತನಾಡಿ, ಸಮುದಾಯದ ಸಂಘಟನೆಗಾಗಿ ಪ್ರತಿ ವರ್ಷ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮಹಿಳೆಯವರಿಗೆ ಹಾಗೂ ಯುವಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಆಯೋಜಿಸಿಲಾಗಿದೆ. ಎಲ್ಲರಿಗೂ ವೇದಿಕೆ ನೀಡಲಾಗಿದೆ. ಸಾಧಕರನ್ನು, ಸಮುದಾಯದ ಹಿರಿಯರನ್ನು ಗುರುತಿಸಲಾಗಿದೆ. ಸಮಾಜ ಬಾಂಧವರೆಲ್ಲರ ಸಹಕಾರದಿಂದ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಿದೆ. ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಹಿರಿಯರಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ:
ಸಮುದಾಯದ ಹಿರಿಯ ಸದಸ್ಯರಾದ ಅಪ್ಪಯ್ಯ ಪಾಟಾಳಿ ಕಾವು, ಸಂಜೀವಿನಿ ಕೊಂದಲ್ಕಾನ, ಸರಸ್ವತಿ ಕೇಚು ಪಾಟಾಳಿ ಕಡಮಜಲು, ಶಾರದಾ ಸುಬ್ಬ ಪಾಟಾಳಿ ಬೊಟ್ಯಾಡಿ, ಶಂಕರಿ ನಾರಾಯಣ ಪಾಟಾಳಿ ದಂಪತಿಗಳನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪೊಲೀಸ್ ಉಪನಿರೀಕ್ಷಕ ಶಿವರಾಮ, ಜೀವ ವಿಮಾ ಸಲಹೆಗಾರ ಹರಿಪ್ರಸಾದ್ ಡಿ.ಎಸ್, ಸುಳ್ಯ ನಗರ ಪಂಚಾಯತ್ನ ನಿವೃತ್ತ ಬಿಲ್ ಕಲೆಕ್ಟರ್ ತಿಮ್ಮಪ್ಪ ಪಾಟಾಳಿ, ಪ್ರಗತಿಪರ ಕೃಷಿಕ ಅಣ್ಣು ಪಾಟಾಳಿ ಕಡಬ, ಕೇಂದ್ರ ಶಸಸ್ತ್ರ ಪಡೆಯ ನಿವೃತ್ತ ಅಧಿಕಾರಿ ಶಂಕರ ಪಾಟಾಳಿ ಶೇವಿರೆ, ಕ್ಯಾಂಪ್ಕೊ ನಿರ್ದೇಶಕ ಗಣೇಶ್ ಪಾರಕಟ್ಟ ಅವರನ್ನು ಸನ್ಮಾನಿಸಲಾಯಿತು

ಪ್ರತಿಭೆಗಳಿಗೆ ಅಭಿನಂದನೆ:
ನವೋದಯ ಪ್ರವೇಶ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದ ಸುದರ್ಶನ್, ಮೊಬೈಲ್ ಕ್ಯಾಂಟೀನ್ ಶಂಕರ ಮುಕ್ರಂಪಾಡಿ, ಆಲಂಕಾರು ಜೇಸಿಐ ಅಧ್ಯಕ್ಷರಾಗಿ ಅಯ್ಕೆಯಾದ ಮಹೇಶ್ ಆಲಂಕಾರು, ಅಬಾಕಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಆದ್ಯ ಐ.ಆರ್., ಹಿಂದೂ ಇಕಾನಾಮಿಕ್ ಫಾರಂನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಅಮ್ಮುಂಜೆ, ಪೆರಾಬೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕುಸುಮ ಕುಂತೂರು, ಏಪಲ್ ಕಂಪನಿಯ ಇಂಜಿನಿಯರ್ ದೀಕ್ಷಿತ್ ಬೆಳ್ಳಾರೆ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ನ ಸ್ಟಾರ್ ಫರ್ಮಾಮರ್ ಅವಾರ್ಡ್ ಪಡೆದ ನಾರಾಯಣ ಕುಕ್ಕುಪುಣಿ, ಝೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪಿಯನ್ಗೆ ಆಯ್ಕೆಯಾದ ವಿಹಾನ್ ಲೋಹಿತ್, ಇನ್ಸ್ಪೈಯರ್ ಅವಾರ್ಡ್ಗೆ ಆಯ್ಕೆಯಾದ ಋತ್ವಿಕ್ ಬಿ.ಕೆ., ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದ ದಾಮೋದರ ಪಾಟಾಳಿ ಪುತ್ತೂರು, ಹಾಗೂ ವಾಣಿಯನ್/ಗಾಣಿಗ ಸಮುದಾಯ ಸಂರ್ಘದ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿನಯ್ ಕುಮಾರ್ ಕಡಮಜಲು ಮತ್ತು ಕಾರ್ಯದರ್ಶಿ ಧನುಷಾ ಎನ್.ಎಸ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ:
ಸಮುದಾಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಧಾರವಾಡದ ಎಸ್ಡಿಎಂನಲ್ಲಿ ವೈದ್ಯರಾಗಿರುವ ಡಾ.ಸಾಗರ್ ಹೇರಾಜೆ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು. ಡಾ.ಸಾಗರ್ ಅವರ ಪೋಷಕರಾದ ಸಹದೇವ ಹೇರಾಜೆ ಹಾಗೂ ಗಾಯತ್ರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.
ಸುಶ್ಮಿತಾ ಮುಕ್ರಂಪಾಡಿ ಪ್ರಾರ್ಥಿಸಿದರು. ದೀಕ್ಷಿತ್ ಬೆಳ್ಳಾರೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್ ವರದಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶೀ ಸೌಮ್ಯ ವಿನಯ್ ಕಡಮಜಲು ಹಾಗೂ ಉಪಾಧ್ಯಕ್ಷ ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಮನೋಹರ್ ನೈತ್ತಾಡಿ, ವಂದಿಸಿದರು. ಜೊತೆ ಕಾರ್ಯದರ್ಶಿ ಧನುಷಾ ಎನ್.ಎಸ್., ಖಜಾಂಚಿ ರವಿಕುಮಾರ್ ಬಾಕಿತ್ತಿಮಾರ್, ಶಂಕರ ಮುಕ್ರಂಪಾಡಿ, ಬೇಬಿ ಕುಂತೂರು, ಕುಸುಮ ಕುಂತೂರು, ಸುಷ್ಮಾ ದಾಮೋದರ, ಪ್ರಮೋದ್ ಪುತ್ತೂರು, ಮಹಾಲಿಂಗ ಪಂಜಳ, ದಿನೇಶ್ ಕಡಮಜಲು, ಧನುಷಾ ಎನ್.ಎಸ್., ಹರಿಪ್ರಸಾದ್ ಡಿ.ಎಸ್., ವಿನಯ ಕುಮಾರ್ ಕಡಮಜಲು, ಅಕ್ಷತಾ ಪಟ್ಟೆ, ಸುಬ್ಬಪ್ಪ ಪಟ್ಟೆ, ಭವ್ಯ ಮನೋಹರ್, ನಾರಾಯಣ ಕುಕ್ಕುಪುಣಿ, ರಚನಾ ಬೆಳಿಯೂರುಕಟ್ಟೆ, ಸುಚಿತಾ ಹರಿಪ್ರಸಾದ್, ಅಕ್ಷತಾ ಪ್ರಸಾದ್ ಕಲ್ಲರ್ಪೆ, ಬಾಲಕೃಷ್ಣ ಕಲ್ಲರ್ಪೆ, ಸುನೀತಾ ಪಟ್ಟೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆದು ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಕ ಕಾರ್ಯಕ್ರಮಗಳು ಮೇಲೈಸಿದವು.
ಸಂಘದ ಅಧ್ಯಕ್ಷನಾಗಿ ಮೂರು ವರ್ಷ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆತಿದೆ. ಸಂಘದ ಹಣವನ್ನು ಎಲ್ಲಿಯೂ ಪೋಲು ಮಾಡಿಲ್ಲ. ಕಾರ್ಯಕ್ರಮಕ್ಕಾಗಿ ದೇಣಿಗೆ ಸಂಗ್ರಹಿಸುವ ಕೆಲಸ ಮಾಡಿಲ್ಲ. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಸ್ವ ಇಚ್ಚೆಯಿಂದ ಆರ್ಥಿಕ ಸಹಕಾರ ನೀಡಿ ಸಹಕರಿಸಿದ್ದಾರೆ. ವಾಣಿಯನ್ ಸಮುದಾಯದ ಸುಮಾರು 3೦೦ ಕುಟುಂಬಗಳಿದ್ದು ಸಮುದಾಯದ ಸಂಘಟನೆಯಲ್ಲಿ ಬಾಂಧವರು ಸಾಮಾಜಿಕ ಕಳಕಲಿಯಿಂದ ಕೆಲಸ ಮಾಡಬೇಕು. ಸಮುದಾಯದ ಉನ್ನತಿಗಾಗಿರುವ ಸಂಘಟನೆ ಬಲೀಷ್ಠವಾಗಿ ಬೆಳೆಯುವಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದ ಆರ್ಥಿಕ ಸಹಕಾರ ನೀಡಿ ಸಹಕರಿಸಬೇಕು.
-ಪ್ರಸಾದ್ ಕಲ್ಲರ್ಪೆ, ಅಧ್ಯಕ್ಷರು ವಾಣಿಯನ್/ಗಾಣಿಗ ಸಮದಾಯ ಸೇವಾ ಸಂಘ ಪುತ್ತೂರು










