ವಿಟ್ಲ ಮುಡ್ನೂರು- ಕಟ್ಟತ್ತಿಲ-ಕುಶಾಲನಗರ ರಸ್ತೆ ಅಭಿವೃದ್ದಿಗೆ 60 ಲಕ್ಷ ಅನುದಾನ

0

30 ವರ್ಷದ ಬೇಡಿಕೆ ಈಡೇರಿಸಿದ್ದೇನೆ: ಶಾಸಕ ಅಶೋಕ್ ರೈ

ಪುತ್ತೂರು: ವಿಟ್ಲ ಮುಡ್ನೂರು ಗ್ರಾಮದ ಮೂರನೇ ವಾರ್ಡಿನ ಕಟತ್ತಿಲ ಕುಶಾಲನಗರ ರಸ್ತೆಯ ಅಭಿವೃದ್ದಿಗೆ 60 ಲಕ್ಷ ವಿಶೇಷ ಅನುದಾನ ಮಂಜೂರು ಮಾಡಿದ್ದು, ಈ ಭಾಗದ ಜನರ ಸುಮಾರು 30 ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.


ಗ್ರಾಮದ ಕಟ್ಟಕಡೇಯ ಸಂಪರ್ಕ ರಸ್ತೆ ಇದಾಗಿದ್ದು, ಈ ರಸ್ತೆಯ ಅಭಿವೃದ್ದಿಗಾಗಿ ಹಲವು ವರ್ಷದಿಂದ ಈ ಭಾಗದ ಜನ ಹೋರಾಟ ಮಾಡಿದ್ದು, ಇದೀಗ ಈ ರಸ್ತೆಗೆ ಕಾಂಕ್ರೀಟ್ ಭಾಗ್ಯ ಬಂದಿದೆ. ರಸ್ತೆ ಅಭಿವೃದ್ದಿ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ಭರವಸೆಯೂ ಇದೆ ಎಂದು ಶಾಸಕರು ಹೇಳಿದರು.

ಬಡವರ ಮನೆಯ ಸೈಟ್ ಇಲ್ಲಿಯೇ ನಿರ್ಮಾಣ
ಈ ಭಾಗದಲ್ಲಿ ನಾನು ಸುಮಾರು 250 ಮನೆಗಳನ್ನು ನಿರ್ಮಾಣ ಮಾಡಿ ಅದನ್ನು ಬಡವರಿಗೆ ಹಂಚುವ ಕೆಲಸವನ್ನು ಮಾಡಲಿದ್ದೇನೆ. ತನ್ನ ಸ್ವಂತ ಹಣದಿಂದ ಇಲ್ಲಿ ಜಾಗವನ್ನು ಖರೀದಿಸಿ ಅದರಲ್ಲಿ 250 ಮನೆ ನಿರ್ಮಾಣ ಮಾಡಿ ತನ್ನ ಟ್ರಸ್ಟ್ ಮೂಲಕ ಅರ್ಜಿ ಸಲ್ಲಿಸಿದ ವಿಧವೆಯವರಿಗೆ, ನಿರ್ಗತಿಕರಿಗೆ ಮನೆಯನ್ನು ಹಂಚಲಿದ್ದೇನೆ. ಈ ಭಾಗದಲ್ಲಿ 250 ಮನೆ ನಿರ್ಮಾಣವಾಗುವುದರ ಜೊತೆಗೆ ಈ ಭಾಗವು ಮುಂದಿನ ದಿನಗಳಲ್ಲಿ ಅಭಿವೃದ್ದಿ ಹೊಂದಲಿದೆ ಎಂದು ಶಾಸಕರು ತಿಳಿಸಿದರು.
ರಸ್ತೆಯ ಅಭಿವೃದ್ದಿಯಾದರೆ ಮಾತ್ರ ಗ್ರಾಮ ಅಭಿವೃದ್ದಿಯಾಗಲು ಸಾಧ್ಯ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಗ್ರಾಮಗಳಲ್ಲಿ ಇದುವರೆಗೂ ಯಾವುದೇ ಅನುದಾನ ನೀಡದ ರಸ್ತೆಗಳನ್ನು ಗುರುತಿಸಿ ಅವುಗಳನ್ನು ಕೂಡಾ ಅಭಿವೃದ್ದಿ ಮಾಡಲಾಗುತ್ತದೆ ಎಂದು ಹೇಳಿದ ಶಾಸಕರು, ಮುಂದಿನ ಎರಡು ವರ್ಷದಲ್ಲಿ ಕುಗ್ರಾಮಗಳ ರಸ್ತೆಗಳನ್ನೂ ಅಭಿವೃದ್ದಿ ಮಾಡುವ ಚಿಂತನೆ ಇದೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಜನ ಕಂಗಾಲು
ಕೇಂದ್ರ ಸರಕಾರದ ಆಡಳಿತ ವೈಫಲ್ಯದಿಂದ ಜನ ಕಂಗಾಲಾಗಿದ್ದಾರೆ. ಇಂಧನ ಬೆಲೆ, ಸಿಲಿಂಡರ್ ಬೆಲೆ ಏರಿಕೆಯಿಂದ ಜನರು ಆತಂಕದಲ್ಲಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಯು ಜನತೆಗೆ ಸ್ವಲ್ಪ ನೆಮ್ಮದಿಯನ್ನು ಕರುಣಿಸಿದ್ದು, ಬೆಲೆ ಏರಿಕೆಯ ನಡುವೆಯೂ ಸಮಾಧಾನಕರ ಜೀವನ ನಡೆಸುವಂತಾಗಿದೆ ಎಂದು ಹೇಳಿದರು. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಇನ್ನಷ್ಟು ಅಭಿವೃದ್ದಿಗೆ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ಶಾಸಕರು ಮನವಿ ಮಾಡಿದರು.

ಮರದ ಗೆಲ್ಲು ಕಡಿಯುವುದಿಲ್ಲ: ಗ್ರಾಮಸ್ಥರ ದೂರು
ಈ ರಸ್ತೆಯಲ್ಲಿ ಹಾದು ಹೋಗುವ ವಿದ್ಯುತ್ ತಂತಿಗೆ ಮರದ ಗೆಲ್ಲುಗಳು ತಾಗುತ್ತಿದ್ದು, ಮನೆಯ ವಿದ್ಯುತ್ ಉಪಕರಣಗಳು ಕೆಟ್ಟು ಹೋಗುತ್ತಿದೆ, ಮೆಸ್ಕಾಂಗೆ ತಿಳಿಸಿದರೂ ಗೆಲ್ಲುಗಳನ್ನು ಕಡಿಯುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದರು. ತಕ್ಷಣವೇ ಮೆಸ್ಕಾಂ ಗೆ ಕರೆ ಮಾಡಿದ ಶಾಸಕರು ಎರಡು ದಿನದೊಳಗೆ ಗೆಲ್ಲು ಕಡಿಯುವಂತೆ ಸೂಚನೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ವಲಯಾಧ್ಯಕ್ಷ ಸುಶಾಂತ್ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ಎಲ್ಯಣ್ಣ ಪೂಜಾರಿ, ಯೂತ್ ಕಾಂಗ್ರೆಸ್‌ನ ಸುಮಿತ್ ಶೆಟ್ಟಿ, ಪಕ್ಷದ ಮುಖಂಡರಾದ ಲೋಹಿತ್ ಪೂಜಾರಿ, ನವೀನ್ ಗೌಡ, ಸಂತೋಷ್ ಮಾರ್ಟಿಸ್, ಅಕ್ರಮ ಸಕ್ರಮದ ರಾಮಣ್ಣ, ಉಮೇಶ್ ನಾಯ್ಕ, ಗಣೇಶ್ ಪೂಜಾರಿ, ರಮಾನಾಥ ವಿಟ್ಲ, ಸ್ಥಳೀಯರಾದ ವೀರಪ್ಪ ಗೌಡ, ಹರಿಶ್‌ ನಾಯ್ಕ, ರಾಜೇಶ್ ಹೊಯ್ಗೆ, ಬಾಲಕೃಷ್ಣ ಶೆಟ್ಟಿ, ಪದ್ಮನಾಭ ಶೆಟ್ಟಿ, ಸತೀಶ್ ಪೂಜಾರಿ, ನಾರಾಯಣ ಕಟ್ಟತ್ತಿಲ, ರಘುನಾಯ್ಕ್, ಪ್ರೇಮಲತಾ ಕಟ್ಟತ್ತಿಲ, ಪ್ರವೀಣ್ ಕಟ್ಟತ್ತಿಲ, ಜಯಾಕರ ಗೌಡ, ಹರೀಶ್ ಶೆಟ್ಟಿ, ಆನಂದ ಗೌಡ, ದಯಾನಂದ ಗೌಡ, ಬೋಜ ಪೂಜಾರಿ, ವಿಶ್ವನಾಥ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಬೂತ್ ಅಧ್ಯಕ್ಷ ನಾರಾಯಣ ಪೂಜಾರಿ ಬದಿಗುಡ್ಡೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here