ಕರಾವಳಿಯ ಅಂಡರ್ ಆರ್ಮ್ ಕ್ರಿಕೆಟ್ ಹಬ್ಬ ಮತ್ತು ಭಾವನೆಗಳ ಸಮ್ಮಿಲನ ‘ಗಜಾನನ ಕ್ರಿಕೆಟರ್ಸ್’

0

ಪುತ್ತೂರು: ತುಳು ಚಿತ್ರರಂಗದಲ್ಲಿ ಕಾಮಿಡಿ ಸಿನಿಮಾಗಳ ಅಬ್ಬರದ ನಡುವೆ, ಕರಾವಳಿಯ ಮಣ್ಣಿನ ಸೊಗಡು ಹಾಗೂ ಅಲ್ಲಿನ ಜನಜೀವನದ ಭಾಗವೇ ಆಗಿಹೋಗಿರುವ ಕ್ರೀಡಾ ಸಂಸ್ಕೃತಿಯನ್ನು ಇಟ್ಟುಕೊಂಡು ವಿಭಿನ್ನ ಪ್ರಯತ್ನಗಳು ನಡೆಯುವುದು ಅಪರೂಪ. ಆ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ಕೀರ್ತನ್ ಭಂಡಾರಿ ಸಾರಥ್ಯದ ‘ಗಜಾನನ ಕ್ರಿಕೆಟರ್ಸ್’. ತುಳುನಾಡಿನ ಗಲ್ಲಿ ಗಲ್ಲಿಗಳಲ್ಲಿ ಹಬ್ಬದಂತೆ ಆಚರಿಸಲ್ಪಡುವ ‘ಅಂಡರ್ ಆರ್ಮ್ ಕ್ರಿಕೆಟ್’ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಕೇವಲ ಆಟಕ್ಕಷ್ಟೇ ಸೀಮಿತವಾಗದೆ, ಸ್ನೇಹ, ಪ್ರೀತಿ ಮತ್ತು ಕರಾವಳಿಯ ಗ್ರಾಮೀಣ ಬದುಕಿನ ಭಾವನಾತ್ಮಕ ಜಗತ್ತನ್ನು ತೆರೆದಿಡುತ್ತದೆ.

ಚಿತ್ರದ ಕಥೆ ಸಾಗುವುದು ‘ಜಂತೊಟ್ಟು’ ಎಂಬ ಹಳ್ಳಿಯ ಸುತ್ತ. ಇಲ್ಲಿನ ‘ಗಜಾನನ ಕ್ರಿಕೆಟರ್ಸ್’ ತಂಡದ ಯುವಕರಿಗೆ ಕ್ರಿಕೆಟ್ ಎಂದರೆ ಬರಿ ಆಟವಲ್ಲ, ಅದೊಂದು ಭಾವನೆ. ನಾಯಕ ಸಚ್ಚು (ವಿನೀತ್) ಮತ್ತು ಆತನ ಸ್ನೇಹಿತರ ತಂಡಕ್ಕೆ ಸ್ಥಳೀಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಗೆಲ್ಲುವುದೇ ದೊಡ್ಡ ಕನಸು. ಆದರೆ, ಕಥೆ ಕೇವಲ ಬೌಂಡರಿ, ಸಿಕ್ಸರ್‌ಗಳ ಸುತ್ತ ಅಷ್ಟೇ ಸುತ್ತುವುದಿಲ್ಲ. ಈ ಯುವಕರ ವೈಯಕ್ತಿಕ ಬದುಕಿನ ಹೋರಾಟಗಳು, ಹಳ್ಳಿಯ ಮುಗ್ಧ ಪ್ರೇಮ ಕಥೆ (ಅನ್ವಿತಾ ಸಾಗರ್ ಮತ್ತು ಸಮತಾ ಅಮಿನ್ ಪಾತ್ರಗಳ ಮೂಲಕ), ಗೆಳೆಯರ ನಡುವಿನ ಸಣ್ಣಪುಟ್ಟ ಮುನಿಸುಗಳು ಹಾಗೂ ಗ್ರಾಮೀಣ ಭಾಗದ ಸಾಮಾಜಿಕ ತಲ್ಲಣಗಳನ್ನು ಚಿತ್ರಕಥೆಯಲ್ಲಿ ಅಚ್ಚುಕಟ್ಟಾಗಿ ಹೆಣೆಯಲಾಗಿದೆ.

ತಾಂತ್ರಿಕತೆ ಮತ್ತು ನಿರ್ದೇಶನ- ಮಣ್ಣಿನ ಸೊಗಡಿನ ಅನಾವರಣ
ನಿರ್ದೇಶಕ ಕೀರ್ತನ್ ಭಂಡಾರಿ ಕರಾವಳಿಯ ನಾಡಿಮಿಡಿತವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಕಥೆ ಮತ್ತು ಚಿತ್ರಕಥೆಯಲ್ಲಿ ಎಲ್ಲೂ ಕೃತಕತೆ ಎದ್ದುಕಾಣದಂತೆ ಜಾಗ್ರತೆ ವಹಿಸಿದ್ದಾರೆ. ತುಳುನಾಡಿನ ಹಳ್ಳಿಗಳ ದೃಶ್ಯಾವಳಿಗಳನ್ನು ಸಿನಿಮಾಟೋಗ್ರಾಫರ್ ವಿನುತ್ ಕೆ. ಸುವರ್ಣ ಮತ್ತು ವಿಷ್ಣು ಪ್ರಸಾದ್ ತಮ್ಮ ಕ್ಯಾಮರಾದಲ್ಲಿ ಅತ್ಯಂತ ಸಹಜವಾಗಿ ಸೆರೆಹಿಡಿದಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತ ಚಿತ್ರದ ಮೂಡ್‌ಗೆ ಪೂರಕವಾಗಿದೆ. ಪ್ರಸನ್ನ ಶೆಟ್ಟಿ ಬೈಲೂರು ಬರೆದಿರುವ ಸಂಭಾಷಣೆಗಳು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಕರಾವಳಿ ಜನರಿಗೆ ತಕ್ಷಣ ಕನೆಕ್ಟ್ ಆಗುವಂತಹ ಪಂಚಿಂಗ್ ಮತ್ತು ತಮಾಷೆಯ ಡೈಲಾಗ್‌ಗಳು ಥಿಯೇಟರ್‌ನಲ್ಲಿ ಚಪ್ಪಾಳೆ ಗಿಟ್ಟಿಸುತ್ತವೆ.
ನಾಯಕನಾಗಿ ಸಚ್ಚು ಪಾತ್ರದಲ್ಲಿ ವಿನೀತ್ ಜವಾಬ್ದಾರಿಯುತ ನಟನೆ ನೀಡಿದ್ದಾರೆ. ಕ್ರಿಕೆಟ್ ಮೈದಾನದ ಆವೇಶ ಹಾಗೂ ವೈಯಕ್ತಿಕ ಬದುಕಿನ ಭಾವುಕ ಸನ್ನಿವೇಶಗಳಲ್ಲಿ ಅವರ ಪರಿಪಕ್ವತೆ ಕಾಣುತ್ತದೆ. ಅನ್ವಿತಾ ಸಾಗರ್ ಮತ್ತು ಸಮತಾ ಅಮಿನ್, ಇಬ್ಬರೂ ನಾಯಕಿಯರು ಕರಾವಳಿ ಹುಡುಗಿಯರ ಮುಗ್ಧತೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ತುಳು ಚಿತ್ರರಂಗದ ಹೆಮ್ಮೆಯ ನಟರಾದ ನವೀನ್ ಡಿ. ಪಡೀಲ್ (ಜಗ್ಗಣ್ಣ), ಅರವಿಂದ್ ಬೋಳಾರ್ (ಸೂರ್ಯ), ಭೋಜರಾಜ್ ವಾಮಂಜೂರು ಮತ್ತು ದೀಪಕ್ ರೈ ಪಾಣಾಜೆ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಕಾಮಿಡಿ ಟ್ರ್ಯಾಕ್ ಎಲ್ಲೂ ಬಲವಂತವಾಗಿ ತುರುಕಿದಂತೆ ಅನಿಸದೆ, ಕಥೆಯ ಓಟದೊಂದಿಗೆ ನೈಸರ್ಗಿಕವಾಗಿ ಸಾಗುತ್ತದೆ.


ಗ್ಲೋಬಲ್ ಕ್ರಿಕೆಟ್‌ನ ನಡುವೆ ಲೋಕಲ್ ‘ಅಂಡರ್ ಆರ್ಮ್’ ಕ್ರಿಕೆಟ್‌ನ ಗತ್ತನ್ನು ಸಿನಿಮಾ ಹೈಲೈಟ್ ಮಾಡಿರುವ ರೀತಿ ಶ್ಲಾಘನೀಯ. ಸಿನಿಮಾ ಬರಿ ಕಾಮಿಡಿಗೆ ಸೀಮಿತವಾಗದೆ, ದ್ವಿತೀಯಾರ್ಧದಲ್ಲಿ ಉತ್ತಮ ಸಾಮಾಜಿಕ ಸಂದೇಶ ಹಾಗೂ ಭಾವುಕತೆಯನ್ನು ಒಳಗೊಂಡಿದೆ. ಪಡೀಲ್-ಬೋಳಾರ್ ಕಾಂಬಿನೇಷನ್ ಎಂದಿನಂತೆ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ. ಪ್ರಥಮಾರ್ಧದಲ್ಲಿ ಕಥೆ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ ಅನಿಸಿದರೂ, ಇಂಟರ್ವೆಲ್ ಬ್ಲಾಕ್ ಚಿತ್ರಕ್ಕೆ ವೇಗ ನೀಡುತ್ತದೆ.
ಕೆಲವು ಸಾಂಪ್ರದಾಯಿಕ ಕಮರ್ಷಿಯಲ್ ಸಿನಿಮಾ ಸೂತ್ರಗಳನ್ನು ಬಳಸಿಕೊಳ್ಳಲಾಗಿದೆ, ಆದರೆ ಕರಾವಳಿಯ ಸಂಸ್ಕೃತಿಯ ಹಿನ್ನೆಲೆ ಇರುವುದರಿಂದ ಅದು ಅಷ್ಟಾಗಿ ತೊಂದರೆ ಕೊಡುವುದಿಲ್ಲ.’ಗಜಾನನ ಕ್ರಿಕೆಟರ್ಸ್’ ಕೇವಲ ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಲ್ಲ, ಇಡೀ ಕುಟುಂಬ ಒಟ್ಟಾಗಿ ಕೂತು ನೋಡಬಹುದಾದ ಒಂದು ಪರಿಶುದ್ಧ ಮನರಂಜನಾ ಚಿತ್ರ. ಕರಾವಳಿಯ ಯುವಕರ ಕನಸುಗಳು, ಹಳ್ಳಿಗಾಡಿನ ಸ್ನೇಹದ ಸವಕಲು ಹಾಗೂ ಕ್ರೀಡೆಯ ಮೇಲಿನ ಅಪ್ಪಟ ಪ್ರೀತಿಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿರುವ ಈ ಚಿತ್ರ ತುಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪ್ರಿಮೀಯರ್ ಶೋ‌ ವೀಕ್ಷಿಸಿದ ಗಣ್ಯಾತಿಗಣ್ಯರು ಚಿತ್ರವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ. ಕರಾವಳಿಯ ಚಿತ್ರಮಂದಿರಗಳಲ್ಲಿ ಗಜಾನನ ಕ್ರಿಕೆಟರ್ಸ್ ಇಂದಿನಿಂದ ಇನ್ನಿಂಗ್ಸ್‌ ಆರಂಭಿಸಿದ್ದು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ.

LEAVE A REPLY

Please enter your comment!
Please enter your name here