ಸದಸ್ಯರ ಆರೋಗ್ಯ ಸುರಕ್ಷತೆಗಾಗಿ ಆರ್ಯಾಪು ಪ್ರಾ.ಕೃ.ಪ.ಸ.ಸಂಘದಲ್ಲಿ ವಿಮೆ ಸೌಲಭ್ಯ-ಮೇ.25ಕ್ಕೆ ಸಹಕಾರ ಸಂಜೀವಿನಿ ವಿಮಾ ಯೋಜನೆ ಉದ್ಘಾಟನೆ

0

ಪುತ್ತೂರು: ಬಹುತೇಕ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ತನ್ನ ಸದಸ್ಯರಿಗಾಗಿ ಆರೋಗ್ಯ ವಿಮೆಯ ಸೌಲಭ್ಯಗಳು ಖಾಸಗಿ ವಿಮಾ ಸಂಸ್ಥೆಯ ಒಡಂಬಡಿಕೆಯಿಂದ ನಡೆಯುತ್ತದೆ. ಆದರೆ ಪುತ್ತೂರಿನ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಯಾವುದೇ ವಿಮಾ ಕಂಪೆನಿಗಳ ಒಡಂಬಡಿಕೆಯಿಲ್ಲದೆ ತನ್ನ ಸ್ವಂತ ನೆಲೆಯಲ್ಲಿ ತನ್ನ ಸದಸ್ಯರಿಗೆ ಹೆಚ್ಚು ಪ್ರಯೋಜನ ಸಿಗುವ ನಿಟ್ಟಿನಲ್ಲಿ ಸಹಕಾರ ಸಂಜೀವಿನಿ ವಿಮೆ ಜಾರಿಗೊಳಿಸಿದೆ. ಇದು ಸಹಕಾರ ಸಂಘಗಳ ಇತಿಹಾಸದಲ್ಲೇ ಮೊದಲ ಯೋಜನೆಯಾಗಿದೆ. ಮೇ.25ರಂದು ಈ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.


ಪತ್ರಿಕಾಗೋಷ್ಠಿಯಲ್ಲಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರು ಮಾತನಾಡಿ ಹೆಚ್ಚಿನ ಸಹಕಾರಿ ಸಂಘಗಳಲ್ಲಿ ಬೇರೆ ಬೇರೆ ಖಾಸಗಿ ವಿಮಾದಾರರ ಒಡಂಬಡಿಕೆಯಿಂದ ಸದಸ್ಯರಿಗೆ ವಿಮಾ ಸೌಲಭ್ಯ ನೀಡುತ್ತಾರೆ. ಆದರೆ ಈ ವಿಮೆಯಲ್ಲಿ ಸಹಕಾರಿ ಸಂಘ ಮತ್ತು ಫಲಾನುಭವಿಗಳು ಪ್ರೀಮಿಯಂ ಮೊತ್ತದ ಅರ್ಧ ಭಾಗ ಪಾವತಿಸಬೇಕಾಗುತ್ತದೆ. ಒಂದು ವೇಳೆ ವಿಮಾ ಮೊತ್ತ ಕ್ಲೈಮ್ ಆಗದಿದ್ದರೆ ಅದು ವಿಮಾ ಸಂಸ್ಥೆಗೆ ಸೇರುತ್ತದೆ. ಇದರಿಂದ ಸಹಕಾರಿ ಸಂಘಕ್ಕೆ ಯಾವುದೇ ಲಾಭವಿಲ್ಲ. ಹಾಗಾಗಿ ನಾವು ನಮ್ಮದೇ ವಿಮಾ ಯೋಜನೆ ಸ್ಥಾಪನೆ ಮಾಡುವ ಮೂಲಕ ಸದಸ್ಯರಿಗೆ ಸೌಲಭ್ಯ ನೀಡುತ್ತಿದ್ದೇವೆ. ಅದಕ್ಕಾಗಿ ಕಲ್ಯಾಣನಿಧಿ ಸ್ಥಾಪನೆ ಮಾಡಿದ್ದೇವೆ ಎಂದವರು ತಿಳಿಸಿದರು.


ಉದ್ಘಾಟನೆ:
ಮೇ.25ರಂದು ಸಹಕಾರಿ ಸಂಘದ ಕೇಂದ್ರ ಕಚೇರಿ ಸಂಪ್ಯದಲ್ಲಿ ಬೆಳಿಗ್ಗೆ ಗಂಟೆ 10ಕ್ಕೆ ಸಹಕಾರ ಸಂಜೀವಿನಿ ವಿಮೆ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ದ.ಕ.ಜಿಲ್ಲಾ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ, ನಿದೇರ್ಶಕರಾದ ಗಣೇಶ್ ರೈ ಕುರಿಯ, ಸಂಶುದ್ದೀನ್ ನೀರ್ಕಜೆ, ತೆರಾಸ ಸ್ವಿಕ್ವೇರ ಉಪಸ್ಥಿತರಿದ್ದರು.


ಸರಕಾರಿ ವಿಮೆ ಕ್ಲೈಮ್ ಆದರೂ ಸದಸ್ಯರಿಗೆ ಸೌಲಭ್ಯ
ಸರಕಾರದ ಹಂತದಲ್ಲಿನ ಆಯುಷ್ಮಾನ್, ಯಶಸ್ವಿನಿ ಯೋಜನೆಯ ಮೂಲಕ ಸದಸ್ಯರು ಸೌಲಭ್ಯ ಪಡೆದರೂ ಕೂಡಾ ಬಿಲ್‌ನ ಪ್ರತಿಗಳನ್ನು ಸಂಘಕ್ಕೆ ಸಲ್ಲಿಸಿದರೆ ಅವರಿಗೆ ವಿಮಾ ಯೋಜನೆ ಸೌಲಭ್ಯ ನೀಡಲಾಗುವುದು. ಈ ಯೋಜನೆ ನಮ್ಮ ಸಂಘದ ಎ ವರ್ಗದ ಸದಸ್ಯರಿಗೆ ಮಾತ್ರ. ಈಗಾಗಲೇ ನಮ್ಮ 3 ಗ್ರಾಮಕ್ಕೆ ಒಳಪಟ್ಟಿದ್ದು, ಸಂಘದಲ್ಲಿ 4,150 ಸದಸ್ಯರಿದ್ದಾರೆ. ಅವರೆಲ್ಲರನ್ನು ಈ ಯೋಜನೆಗೆ ಸೇರ್ಪಡೆ ಮಾಡುವ ಪ್ರಯತ್ನ ಮಾಡಲಾಗುವುದು. ಸಂಘದ ಎ ವರ್ಗದ ಸದಸ್ಯರು ರೂ. 500ರಂತೆ ಪ್ರತಿ ವರ್ಷ ತೊಡಗಿಸಬೇಕು. ಪ್ರತಿ ವರ್ಷ ಪ್ರೀಮಿಯಂ ಮೊತ್ತವನ್ನು ತೊಡಗಿಸಿದ ಸದಸ್ಯನಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು.
ಹೆಚ್ ಮಹಮ್ಮದ್ ಆಲಿ ಅಧ್ಯಕ್ಷರು
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

LEAVE A REPLY

Please enter your comment!
Please enter your name here