







ಪುತ್ತೂರು: ಕುಂಬ್ರ ಸಮೀಪದ ಶೇಖಮಲೆ ಪ್ರದೇಶದಲ್ಲಿ ಏರ್ಟೆಲ್ ಮೊಬೈಲ್ ಟವರ್ ಇದ್ದಾಗ್ಯೂ ಸಮರ್ಪಕವಾದ 5ಜಿ ನೆಟ್ವರ್ಕ್ ಲಭ್ಯವಿಲ್ಲದೆ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಂತ್ರಿಕ ಯುಗದಲ್ಲಿ ನೆಟ್ವರ್ಕ್ ಕೈಕೊಡುತ್ತಿರುವುದರಿಂದ ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶೇಖಮಲೆ ಭಾಗದಲ್ಲಿ ನೆಟ್ವರ್ಕ್ ವೇಗ ಅತ್ಯಂತ ಕ್ಷೀಣಿಸಿದ್ದು, ಸ್ಮಾರ್ಟ್ ಟಿವಿ, ವೈ-ಫೈ ಹಾಗೂ ಇಂಟರ್ನೆಟ್ ಆಧಾರಿತ ಆನ್ಲೈನ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಇಂದಿನ ದಿನಗಳಲ್ಲಿ ಬ್ಯಾಂಕಿಂಗ್, ಕಂದಾಯ ಸೇವೆ ಸೇರಿದಂತೆ ಬಹುತೇಕ ದೈನಂದಿನ ಕೆಲಸಗಳು ಆನ್ಲೈನ್ ಮೂಲಕವೇ ನಡೆಯುತ್ತಿದ್ದು, ಕನೆಕ್ಟಿವಿಟಿ ಸಮಸ್ಯೆಯಿಂದಾಗಿ ನಿತ್ಯದ ವ್ಯವಹಾರಗಳಿಗೆ ಭಾರಿ ಹೊಡೆತ ಬಿದ್ದಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಆನ್ಲೈನ್ ಅಧ್ಯಯನ, ಪ್ರಾಜೆಕ್ಟ್ ವರ್ಕ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಈ ನೆಟ್ವರ್ಕ್ ಸಮಸ್ಯೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ತರಗತಿಗಳ ನೋಟ್ಸ್ ಡೌನ್ಲೋಡ್ ಮಾಡಲು ಅಥವಾ ಆನ್ಲೈನ್ ಕ್ಲಾಸ್ ವೀಕ್ಷಿಸಲು ಸಿಗ್ನಲ್ ಹುಡುಕುತ್ತಾ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



ಸಾರ್ವಜನಿಕರ ಆಗ್ರಹ
“ನಮ್ಮದೇ ಭಾಗದಲ್ಲಿ ಬೃಹತ್ ಮೊಬೈಲ್ ಟವರ್ ಕಣ್ಣಮುಂದೆ ಇದ್ದರೂ ನಮಗೆ ಆಧುನಿಕ 5ಜಿ ತಂತ್ರಜ್ಞಾನದ ಸೇವೆ ಸಿಗದಿರುವುದು ದುರದೃಷ್ಟಕರ. ಸಂಬಂಧಪಟ್ಟ ಏರ್ಟೆಲ್ ಸಂಸ್ಥೆಯ ಉನ್ನತ ಅಧಿಕಾರಿಗಳು ಹಾಗೂ ತಾಂತ್ರಿಕ ತಂಡ ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಶೇಖಮಲೆ ಸುತ್ತಮುತ್ತಲಿನ ಗ್ರಾಹಕರಿಗೆ ಶೀಘ್ರವಾಗಿ ಉತ್ತಮ ಗುಣಮಟ್ಟದ ನೆಟ್ವರ್ಕ್ ಸೇವೆ ಒದಗಿಸಬೇಕು.” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳೀಯರ ಈ ನ್ಯಾಯಯುತ ಬೇಡಿಕೆಗೆ ನೆಟ್ವರ್ಕ್ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












