ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮೇಳೈಸಿದ ವಾರ್ಷಿಕೋತ್ಸವ ‘ಅಕ್ಷಯ ವೈಭವ’

0

ಪುತ್ತೂರು: ವಿದ್ಯಾಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ವೃತ್ತಿಪರ ಕೋರ್ಸ್‌ಗಳನ್ನು ಪರಚಯಿಸಿಕೊಂಡು ವಿದ್ಯಾರ್ಥಿಗಳಿಗೆ ಶೇಕಡಾ ನೂರರಷ್ಟು ಉದ್ಯೋಗವನ್ನು ದೊರಕಿಸುವುದರ ಮೂಲಕ ಅಕ್ಷಯ ಶಿಕ್ಷಣ ಸಂಸ್ಥೆ ಈ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಸಂಸ್ಥೆಯನ್ನು ಆರಂಭಿಸಿ ಯಶಸ್ಸಿನತ್ತ ಮುನ್ನಡೆಯುತ್ತಿದೆ. ಯುವಶಕ್ತಿಯ ಭವಿಷ್ಯಕ್ಕೆ ಆಧಾರಸ್ತಂಭವಾಗಿ, ಅಕ್ಷಯ ಪಾತ್ರೆಯಾಗಿ ಈ ಅಕ್ಷಯ ಶಿಕ್ಷಣ ಸಂಸ್ಥೆ ಭಾಜನರಾಗಿರುವುದು ಹೆಗ್ಗಳಿಕೆಯಾಗಿದೆ ಎಂದು ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರವರು ಹೇಳಿದರು.


ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಎರಡು ದಿನಗಳ ‘ಅಕ್ಷಯ ವೈಭವ’ ಕಾರ್ಯಕ್ರಮದಲ್ಲಿ ಮೇ.22ರಂದು ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಯ ಮುಖಾಂತರ ನೂರಾರು ವಿದ್ಯಾರ್ಥಿಗಳು ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಸಂಸ್ಥೆ ನಮ್ಮೆಲ್ಲರ ಸಂಸ್ಥೆ, ನಮ್ಮ ಮನೆಯ ಸಂಸ್ಥೆ ಎಂಬಂತೆ ನಾವು ಸಂಸ್ಥೆಯ ಬೆಳವಣಿಗೆಯಲ್ಲಿ ಕೈಜೋಡಿಸಬೇಕಾಗಿದೆ. ಸ್ವಸ್ಥ ಸಮಾಜ ಕಟ್ಟಬೇಕಾದರೆ ನಾವು ನಮ್ಮ ಜೀವನದಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಶಾರ್ಟ್‌ಕಟ್‌ನತ್ತ ಹೋಗದೆ ಕಷ್ಟಪಟ್ಟು ದುಡಿದಾಗ ಮಾತ್ರ ಅಭಿವೃದ್ಧಿ-ಲೀಲಾಕ್ಷ ಕರ್ಕೇರಾ:
ಮಂಗಳೂರು ನಮ್ಮ ಕುಡ್ಲ ಚಾನೆಲ್ ಆಡಳಿತ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರಾರವರು ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಜಯಂತ್ ನಡುಬೈಲುರವರದ್ದು ದ.ಕ ಜಿಲ್ಲೆಯಲ್ಲಿ ಸಂಚಲನ ಮಾಡಿದ ಹೆಸರಾಗಿದೆ. ಸಮಾಜಕ್ಕೆ ಏನಾದರೂ ಹೊಸದನ್ನು ಕೊಡಬೇಕು ಎನ್ನುವ ಆದಮ್ಯ ಉತ್ಸಾಹದಿಂದ ಶಿಕ್ಷಣ ಸಂಸ್ಕೆ ಸ್ಥಾಪಿಸುವತ್ತ ಮುನ್ನಡಿ ಇಟ್ಟವರಾಗಿದ್ದಾರೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇದ್ದುದರಿಂದ ಅಕ್ಷಯ ಕಾಲೇಜು ಬೆಳೆದು ನಿಂತಿದೆ ಎಂದ ಅವರು ವಿದ್ಯಾರ್ಥಿಗಳು ಶಿಕ್ಷಣ ಕಲಿತು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಕಲಿಸಿದ ಹೆತ್ತವರನ್ನು ಹಾಗೂ ವಿದ್ಯಾಸಂಸ್ಥೆಯನ್ನು ಮರೆಯಬೇಡಿ, ಜೊತೆಗೆ ತಾನು ಗಳಿಸಿದರಲ್ಲಿ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಿ. ವಿದ್ಯಾರ್ಥಿಗಳು ಶಾರ್ಟ್‌ಕಟ್‌ನತ್ತ ಹೋಗದೆ ಕಷ್ಟಪಟ್ಟು ದುಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.


ವಿದ್ಯೆ ನೀಡಿ, ಉದ್ಯೋಗ ಕೊಡುವುದೇ ಸಂಸ್ಥೆ ಉದ್ಧೇಶ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಂತ್ ನಡುಬೈಲುರವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತವಾಗಿ ಈ ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿ ಕೊಡುತ್ತಾ ಬಂದಿದೆ. ಸಂಸ್ಥೆ ಮಾಡಿರುವುದು ವ್ಯವಹಾರದ ಉದ್ದೇಶವಲ್ಲ. ನಾಲ್ಕು ಮಕ್ಕಳಿಗೆ ವಿದ್ಯೆ ನೀಡಿ ಅವರ ಕೈಗಳಿಗೆ ಉದ್ಯೋಗ ಕೊಟ್ಟು ಅವರ ಜೀವನವನ್ನು ಸಲಹುವಂತಹ ಕೈಂಕರ್ಯ ಹೊಂದಿದೆ ಸಂಸ್ಥೆ. ವಿದ್ಯಾರ್ಥಿಗಳ ಜೀವನ ಒಳ್ಳೆಯ ದಾರಿಯಲ್ಲಿ ಹೋದರೆ ಅದುವೇ ಅಕ್ಷಯ ಕಾಲೇಜಿನ ಉದ್ಧೇಶ ಈಡೇರಿದಂತಾಗುತ್ತದೆ ಎಂದ ಅವರು ನೀವು ನಮ್ಮ ಮಕ್ಕಳು, ನಿಮ್ಮ ಭುಜ ತಟ್ಟಿ ಪುರಸ್ಕರಿಸುತ್ತೇವೆ, ನೀವು ಅದನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.


ಸ್ವಾವಲಂಭಿ ಬದುಕಿನೊಂದಿಗೆ ಸತ್ಪ್ರಜೆಯ ಬದುಕು ಆಶಯ ನಮ್ಮದಾಗಲಿ-ಸುಕೇಶ್ ರೈ:
ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ಮುಖ್ಯಗುರು ಸುಕೇಶ್ ರೈ ಮಾತನಾಡಿ, ಆರ್ಥಿಕತೆಯಿಂದ ಹಿಂದುಳಿದಿದ್ದರೂ ಸಫಲತೆಯನ್ನು ಹೇಗೆ ಪಡೆಯಬೇಕು ಎನ್ನುವುದು ಅಕ್ಷಯ ಸಂಸ್ಥೆಯ ಜಯಂತ್ ನಡುಬೈಲುರವರು ಎಲ್ಲರಿಗೂ ರೋಲ್‌ಮಾಡೆಲ್ ಆಗಿದ್ದಾರೆ. ಪುತ್ತೂರಿನಲ್ಲಿ ಹಲವು ಖಾಸಗಿ ಕಾಲೇಜುಗಳು ಇದ್ದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ಭವಿಷ್ಯ ನೀಡುವಲ್ಲಿ ಅಕ್ಷಯ ಸಂಸ್ಥೆ ಸಫಲತೆ ಪಡೆದಿರುವುದು ಹೆಚ್ಚುಗಾರಿಕೆಯಾಗಿದೆ ಎಂದ ಅವರು ಕೇವಲ ಡಿಗ್ರಿ ಪಡೆದರೆ ಸಾಲದು, ತಾನು ಕಲಿತ ಶಿಕ್ಷಣಕ್ಕೆ ಸಮಾನ ಉದ್ಯೋಗ ದೊರಕಿದಾಗ ಮಾತ್ರ ತಾನು ಕಲಿತ ಶಿಕ್ಷಣ ಸಾರ್ಥಕ ಹೊಂದುತ್ತದೆ. ವಿದ್ಯಾರ್ಥಿಗಳು ತನ್ನ ಗುರಿ ಏನು ಅಂತ ತಿಳಿಯಬೇಕು, ನಾವು ಅಂದುಕೊಂಡದನ್ನು ಸಾಧಿಸಬೇಕು, ಸ್ವಾವಲಂಭಿ ಬದುಕಿನ ಜೊತೆಗೆ ಸತ್ಪ್ರಜೆಯಾಗಿ ಬದುಕು ಕಾಣಬೇಕು ಎಂಬ ಆಶಯ ನಮ್ಮದಾಗಲಿ ಎಂದರು.


ಬಹುಮಾನ ವಿತರಣೆ:
ಕಾಲೇಜು ಹಮ್ಮಿಕೊಂಡ ಡಿ-ವಾಕ್ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಕಾಲೇಜು ಹಮ್ಮಿಕೊಂಡ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಉಪನ್ಯಾಸಕ ಮತ್ತು ಆಡಳಿತ ಸಿಬ್ಬಂದಿ ವರ್ಗದವರಿಗೆ ಬಹುಮಾನ ನೀಡಲಾಯಿತು.


ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಗಾಯನ ಮಂಡಳಿ ಪ್ರಾರ್ಥಿಸಿದರು. ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಅಕ್ಷಯ್ ಸ್ವಾಗತಿಸಿ, ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ.ಪಕ್ಕಳರವರು ಅಕ್ಷಯ ಪದವಿ ಕಾಲೇಜಿನ ಆರಂಭ, ಕೋರ್ಸ್‌ಗಳು, ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹಾಗೂ ಕಳೆದ ಎರಡು ವರ್ಷದ ಹಿಂದೆ ಆರಂಭಗೊಂಡ ಅಕ್ಷಯ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ಸಾಧನೆಯ ವರದಿಯನ್ನು ಪ್ರಾಂಶುಪಾಲೆ ಗಂಗಾರತ್ನರವರು ಪ್ರಸ್ತುತಪಡಿಸಿದರು. ಉಪನ್ಯಾಸಕಿಯರಾದ ವಾಣಿಜ್ಯ ವಿಭಾಗದ ಮೇಘಶ್ರೀ, ಕನ್ನಡ ವಿಭಾಗದ ಭರತ್, ಗಣಕ ವಿಜ್ಞಾನ ವಿಭಾಗದ ದೀಕ್ಷಾ ರೈ, ಗ್ರಂಥಪಾಲಕಿ ಪ್ರಭಾವತಿ, ಗಣಕ ವಿಜ್ಞಾನ ವಿಭಾಗದ ಸುಪ್ರಭಾ, ಕನ್ನಡ ವಿಭಾಗದ ರಶ್ಮಿತಾ, ಇಂಟೀರಿಯರ್ ಡಿಸೈನ್‌ನ ಕಾವ್ಯ, ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಶೃತಾ, ದೈಹಿಕ ಶಿಕ್ಷಣ ನಿರ್ದೇಶಕ ನವೀನ್‌ರವರು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದ ಸಾಧಕರ ಹೆಸರನ್ನು ಹಾಗೂ ಸನ್ಮಾನಿತರ ಪರಿಚಯ ಮಾಡಿದರು. ಉಪನ್ಯಾಸಕರಾದ ಅಭಿಲಾಷ್ ಕ್ಷತ್ರೀಯ ಹಾಗೂ ಶ್ರೀಮತಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು.



ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು..
ಪಠ್ಯಪುಸ್ತಕ ರಚನೆಯಲ್ಲಿ ಶಾಸಕರ, ವಿದ್ಯಾಮಂತ್ರಿಗಳ ಪಾತ್ರ ಏನೂ ಬೇಡ. ಪಠ್ಯಪುಸ್ತಕ ರಚನೆಗೆ ಅದಕ್ಕೆಂದೇ ಶಿಕ್ಷಣ ತಜ್ಞರು ಇದ್ದಾರೆ. ಶಿಕ್ಷಣ ತಜ್ಞರಿಂದ ಪಠ್ಯಪುಸ್ತಕದ ರಚನೆಯಾಗಬೇಕಿದೆ. ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಸರಕಾರಿ ಶಾಲಾ-ಕಾಲೇಜುಗಳಲ್ಲಿ ಸಮರ್ಪಕ ಶಿಕ್ಷಕರ ಕೊರತೆ ಸೇರಿದಂತೆ ಏನು ಮೂಲಭೂತ ಸೌಕರ್ಯಗಳು ಬೇಕಾಗಿದೆಯೋ ಅದನ್ನು ಸರಕಾರ ಮನಗಂಡು ಕಾರ್ಯರೂಪಕ್ಕೆ ಇಳಿದಾಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಲಭಿಸುವಂತಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಈ ಕ್ಷೇತ್ರಗಳಲ್ಲಿ ನಾವು ಹೆಚ್ಚು ಗಮನ ನೀಡುವಂತಾದಾಗ ಕಟ್ಟಕಡೆಯ ವ್ಯಕ್ತಿಯೂ ಸಮಾಜದಲ್ಲಿ ಮುಂದೆ ಬರುವಂತಾಗುತ್ತದೆ. ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಭಿತ್ತುವ ಕಾರ್ಯವೂ ಆಗಬೇಕಿದೆ.
-ಎಸ್.ಎಲ್ ಭೋಜೇಗೌಡ,
ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ

ಸನ್ಮಾನ..
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಬೆಸ್ಟ್ ಲೀಡರ್ ಪ್ರಶಸ್ತಿ ಭಾಜನರಾದ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್, ಬೆಸ್ಟ್ ಔಟ್‌ಗೋಯಿಂಗ್ ಅವಾರ್ಡ್ ಭಾಜನರಾದ ಅಂತಿಮ ವರ್ಷದ ವಿಖ್ಯಾತ್ ಸುವರ್ಣ, ನೆಟ್ ಪರೀಕ್ಷೆ ಉತ್ತೀರ್ಣರಾದ ಕನ್ನಡ ಉಪನ್ಯಾಸಕ ಹರೀಶ್ಚಂದ್ರ ಸಿ, ಎಂಬಿಎ ಪರೀಕ್ಷೆ ಉತ್ತೀರ್ಣರಾದ ಉಪ ಪ್ರಾಂಶುಪಾಲ ರಕ್ಷಣ್ ಬಿ.ಆರ್‌ರವರುಗಳನ್ನು ಗುರುತಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ/ಯಕ್ಷಗಾನ..
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲ್ಪಟ್ಟವು. ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷಸಿಂಚನ ಬಳಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಯಕ್ಷಗಾನ ” ನರಕಾಸುರ ಮೋಕ್ಷ” ಪ್ರದರ್ಶನಗೊಂಡು ಎಲ್ಲರ ಮನಸೂರೆಗೈಯ್ದಿತು.

LEAVE A REPLY

Please enter your comment!
Please enter your name here