







ದಲಿತರಿಗೆ ಕಾಂಗ್ರೆಸ್ ನೀಡಿದಷ್ಟು ಸೌಲಭ್ಯಗಳನ್ನು ಬಿಜೆಪಿ ನೀಡಿಲ್ಲ: ಎಂ.ಎಸ್.ಮಹಮ್ಮದ್


ವಿಟ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಮತ್ತು ಬಡವರ ಪರವಾಗಿ ಕೆಲಸ ಮಾಡುವ ಜನ ಪ್ರತಿನಿಧಿಯನ್ನು ಬೆಂಬಲಿಸಿ ಅವರ ಕಾರ್ಯಕ್ಕೆ ಸಹಕಾರ ನೀಡುವುದು ಪ್ರಜಾಪ್ರಭುತ್ವದ ಕರ್ತವ್ಯ. ಆದರೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲೇ ಕಾಣದಂತಹ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಬಡವರ ಪರ ಯೋಜನೆಗಳನ್ನು ನೇರವಾಗಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರು ಮಾಡುತ್ತಾ ಬರುತ್ತಿದ್ದಾರೆ. ಆದರೆ ಅವರ ಜನಪ್ರಿಯತೆಯನ್ನು ಸಹಿಸದೇ ದಲಿತ ಸಂಘಟನೆಯ ಹೆಸರಿನಲ್ಲಿ ಹಲವರಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಮಾಡಿದ ಹೋರಾಟ ಮೂರ್ಖತನದ್ದು. ದಲಿತರೊಳಗೆ ಒಡಕು ಮೂಡಿಸಲು ಯತ್ನಿಸಿದ ಪ್ರತಿಭಟನೆ ಸರಿಯಲ್ಲ ಎಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಧ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.




ಅವರು ಮೇ.22ರಂದು ವಿಟ್ಲದ ಪ್ರಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರು ಇಂದು ಹಕ್ಕು ಪತ್ರದ ವಿಚಾರದಲ್ಲಿ ಹತಾಶೆಯ ರಾಜಕೀಯಕ್ಕೆ ಇಳಿದಿದ್ದಾರೆ. ಬಿಜೆಪಿ ಅವಧಿಯ ಐದು ವರ್ಷಗಳ ವೈಫಲ್ಯ ಮುಚ್ಚಿಡಲು ಹತಾಶೆ ಯತ್ನವನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ದಲಿತ ಸಂಘಟನೆಯ ಹೆಸರಿನಲ್ಲಿ ನೂರಾರು ಜನರಿಗೆ ಮೋಸ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮುಂದೆ ಇಟ್ಟುಕೊಂಡು ಆತನ ಮೂಲಕ ದಲಿತರೊಳಗೆ ಒಡಕು ಮೂಡಿಸಿ ಬಂಟ್ವಾಳ ತಹಶೀಲ್ದಾರರ ಕಚೇರಿ ಎದುರು ನಾಟಕೀಯ ಪ್ರತಿಭಟನೆ ನಡೆಸಿ ಶಾಸಕರನ್ನು ಅತ್ಯಂತ ತುಚ್ಚವಾಗಿ ನಿಂದಿಸಿರುವುದು ಇವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ. ಈ ಪ್ರತಿಭಟನೆಯನ್ನು ಬಿಜೆಪಿ ಪಕ್ಷದ ಜಿಲ್ಲಾಮಟ್ಟದ ನಾಯಕರು,ಸಂಸದರು, ಮಾಜಿ ಶಾಸಕರಾದ ಸಂಜೀವ ಮಠಂದೂರು ಹಾಗೂ ಇತರ ನಾಯಕರು ಸೇರಿರುವುದು ಬಿಜೆಪಿಯ ಅಸಲಿ ಮುಖವಾಡ ಬಯಲಾಗಿದೆ.
ಪುಣಚ ಗ್ರಾಮದ 3 ದಲಿತ ಕುಟುಂಬಗಳ ಮೂರು ತಿಂಗಳ ಹಿಂದೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ 94 ಸಿ ಹಕ್ಕು ಪತ್ರ ಕೊಡಿಸಲು ಮನವಿಯನ್ನು ನೀಡಿದ್ದು ಅದಕ್ಕೆ ಶಾಸಕರು ಸ್ಪಂದನೆಯನ್ನು ನೀಡಿ ಬಂಟ್ವಾಳ ತಹಶೀಲ್ದಾರರಿಗೆ 94 ಸಿ ಹಕ್ಕು ಪತ್ರ ನೀಡುವ ಬಗ್ಗೆ ಕಡತ ತಯಾರಿಸಿ ಹಕ್ಕು ಪತ್ರ ನೀಡುವ ಬಗ್ಗೆ ಕ್ರಮ ವಹಿಸಲು ನಿರ್ದೇಶನವನ್ನು ನೀಡಿದ್ದರು. ಶಾಸಕರ ನಿರ್ದೇಶನದಂತೆ ತಹಶೀಲ್ದಾರರು 94 ಸಿ ಹಕ್ಕು ಪತ್ರ ನೀಡುವ ಬಗ್ಗೆ ಇಲಾಖಾ ವರದಿ ಪಡೆದು ಕಡತ ತಯಾರಿಸಿ, ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು.
ಶಾಸಕರು ಕಳೆದ 3 ವರ್ಷಗಳಲ್ಲಿ ಒಟ್ಟು 24 ಬೈಠಕ್ ಗಳನ್ನು ಗ್ರಾಮ-ಗ್ರಾಮಗಳಲ್ಲಿ ಮಾಡುವ ಮೂಲಕ ಅಕ್ರಮ-ಸಕ್ರಮ ಮಂಜೂರಾತಿ ಹಾಗೂ 94 ಸಿ ಹಕ್ಕು ಪತ್ರ ವಿತರಣೆಯನ್ನು ಯಾವುದೇ ಜಾತಿ, ಧರ್ಮದ ಪಕ್ಷದ ಭೇದ ಇಲ್ಲದೆ ನಿಷ್ಪಕ್ಷವಾಗಿ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ನೀಡುತ್ತಾ ಬಂದಿದ್ದಾರೆ. ಹಾಗಿರುವಾಗ ಪುಣಚದ 3 ದಲಿತ ಕುಟುಂಬಗಳಿಗೆ ಅನ್ಯಾಯ ಆಗಲು ಬಿಡುತ್ತಾರೆಯೆ. ಪ್ರತಿಭಟನೆ ನಡೆಸುವ 3 ಕುಟುಂಬಗಳು 94 ಸಿ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿಯವರ ವಾದ ಅವರು ಅರ್ಜಿ ಕೊಟ್ಟು 8 ವರ್ಷ ಆಗಿದೆ ಎಂದು ಹೇಳಿದ್ದಾರೆ ಹಾಗಿದ್ದರೆ ಕಳೆದ 5 ವರ್ಷದಲ್ಲಿ ಬಿಜೆಪಿ ಸರಕಾರ ಮತ್ತು ಪುತ್ತೂರಿನಲ್ಲಿ ಇದೇ ಸಂಜೀವ ಮಠಂದೂರು ಶಾಸಕರಾಗಿದ್ದು, 94 ಸಿ ಹಕ್ಕು ಪತ್ರವನ್ನು ದಲಿತ ಕುಟುಂಬಗಳಿಗೆ ಯಾಕೆ ನೀಡಿಲ್ಲ.
ಅಶೋಕ್ ರೈ ಗಳು ಪ್ರಾಮಾಣಿಕವಾಗಿ ಕಳೆದ 3 ವರ್ಷದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ, 94 ಸಿ ಹಕ್ಕು ಪತ್ರ ನೀಡುವ ಕೆಲಸ ಮತ್ತು ಸಾಗುವಳಿ ಚೀಟಿಯನ್ನು ನೀಡುವ ಕೆಲಸವನ್ನು ಭ್ರಷ್ಟಾಚಾರ ರಹಿತವಾಗಿ ಮಾಡುತ್ತಾ ಬಂದಿದ್ದಾರೆ. ಆದರೆ ಬಿಜೆಪಿಯವರು ಅಧಿಕಾರವಿದ್ದಾಗ ಬಡವರಿಗೆ ಹಕ್ಕು ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಶಾಸಕರು ಇಂದು ಮಾಡದ ತಪ್ಪನ್ನು ನಮ್ಮ ಶಾಸಕರ ಹೆಗಲಿಗೆ ಹಾಕಲು ಹೊರಟ್ಟಿದ್ದಾರೆ. ಅಧಿಕಾರವಿದ್ದಾಗ ಲಂಚದ ಆಸೆಗೆ ಬಿದ್ದು ಬಡವರನ್ನು ಸತಾಯಿಸಿದ ಬಿಜೆಪಿಯವರಿಂದ ನಮ್ಮ ಶಾಸಕರು ಕಲಿಯ ಬೇಕಾಗಿರುವಂತದ್ದು ಏನಿಲ್ಲ. ಬಿಜೆಪಿಯವರ ಅಸಲಿ ಮುಖವನ್ನು ಸಾರ್ವಜನಿಕರು ತಿಳಿಯದಷ್ಟು ದಡ್ಡರಲ್ಲ.
ತಾಲೂಕು ಕಚೇರಿ ಎದುರು ಹಕ್ಕು ಪತ್ರಕ್ಕಾಗಿ ಪ್ರತಿಭಟನೆ ನಡೆಸುವ ಬೇಬಿ,ಪ್ರೇಮ,ವಿಜಯಲಕ್ಷ್ಮಿ ಇವರ ಸಂಬಂಧಿಕರಾದ ಚಂದ್ರ ಮತ್ತು ಸತೀಶ ಇವರಿಗೆ ಅಶೋಕ್ ರೈ ರವರ ಟ್ರಸ್ಟ್ ಮೂಲಕ ಕೂಡ ಮನೆ ನಿರ್ಮಾಣಕ್ಕೆ ಸಿಮೆಂಟ್ ಶೀಟ್ ನೀಡುವ ಮೂಲಕ ವೈಯಕ್ತಿಕ ಸಹಾಯವನ್ನು ನಮ್ಮ ಶಾಸಕರು ನೀಡಿರುತ್ತಾರೆ. ಬಿಜೆಪಿಯವರು ಯಾವತ್ತಾದರೂ ಇಂತಹ ಸಹಕಾರವನ್ನು ಮಾಡಿದ್ದಾರೆಯೆ. ಬಡವರ ಮತ್ತು ದಲಿತ ಹಕ್ಕುಗಳನ್ನು ಕೇವಲ ರಾಜಕೀಯ ದಾಳವಾಗಿ ಬಳಸಿಕೊಂಡು ಕ್ಷೇತ್ರದ ಪ್ರಗತಿಯನ್ನು ಸಹಿಸದೆ ಕೆಸರೆರಚಾಟ ನಡೆಸುವವರ ಬಾಯಿ ಮುಚ್ಚಿಸುವ ಜವಾಬ್ದಾರಿ ಮತದಾರರ ಮೇಲಿದೆ.
ಬಿಜೆಪಿ ಪ್ರೇರಿತ ಪ್ರತಿಭಟನೆ ನಡೆಯುವ ದಿನ ಅಶೋಕ್ ಕುಮಾರ್ ರೈ ಯವರು ಕಬಕ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಹಕ್ಕು ಪತ್ರ ವಿತರಣೆ ಮತ್ತು ಅಕ್ರಮ-ಸಕ್ರಮ ಬೈಠಾಕ್ ನಡೆಸುತ್ತಿದ್ದರು. ಇದನ್ನು ಬಿಜೆಪಿಯವರು ಸಹಿಸದೇ ಸುಳ್ಳು ಆರೋಪವನ್ನು ಹೊರಿಸಿ ಶಾಸಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಬಂಟ್ವಾಳ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡುವ ಬಿಜೆಪಿಯವರಲ್ಲಿ ನಾವು ಕೇಳುವುದು ಇಷ್ಟೇ ದ.ಕ ಜಿಲ್ಲೆಯ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ ಎಷ್ಟು ಜನರಿಗೆ ಹಕ್ಕು ಪತ್ರ ಕೊಟ್ಟಿದ್ದಾರೆ. ಎಷ್ಟು ಅಕ್ರಮ-ಸಕ್ರಮ ಬೈಠಾಕ್ ಮಾಡುವ ಮೂಲಕ ಬಡವರಿಗೆ ಭೂಮಿ ಮಂಜೂರಾತಿ ಮಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಲಿ. ಪುಣಚ ಗ್ರಾಮದಲ್ಲಿ ಪ.ಜಾತಿ ಮತ್ತು ಪ.ಪಂಗಡ ಜನರು ಹೆಚ್ಚಿರುವ ಗ್ರಾಮ ಇವರಿಗೆ ಈ ಬಿಜೆಪಿಯವರ ಕೊಡುಗೆ ಏನು. ಗ್ರಾಮ ಪಂಚಾಯತ್, ತಾ.ಪಂ. ಸದಸ್ಯರು, ಜಿ.ಪಂ ಸದಸ್ಯರು ಶಾಸಕರು ಮತ್ತು ಸಂಸದರು ಎಲ್ಲಾ ಬಿಜೆಪಿಯವರೇ ಇರುವ ಸಮಯದಲ್ಲಿ ಇದೇ ಪ.ಜಾತಿ/ಪ.ಪಂಗಡ ಜನರ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ತಿಳಿಸಲಿ ಆದರೆ ಅಶೋಕ್ ಕುಮಾರ್ ರೈ ಗಳು 3 ವರ್ಷದಲ್ಲಿ ಕೋಟಿ ಕೋಟಿ ಅನುದಾನ ನೀಡುವ ಮೂಲಕ ಪ.ಜಾತಿ/ಪ.ಪಂಗಡ ಪ್ರದೇಶದ ಅಭಿವೃದ್ಧಿಯನ್ನು ಸಹಿಸದ ಬಿಜೆಪಿಯವರು ರಾಜಕೀಯ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಅತ್ಯಂತ ಖಂಡನೀಯ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್ ಮಾತನಾಡಿ ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂದು ಹೇಳಿರುವುದು ಖಂಡನೀಯ. ದಲಿತರಿಗೆ ಕಾಂಗ್ರೆಸ್ ನೀಡಿದಷ್ಟು ಸೌಲಭ್ಯಗಳನ್ನು ಬಿಜೆಪಿ ನೀಡಿಲ್ಲ. ಪ.ಜಾತಿ ,ಪ. ಪಂಗಡಗಳಿಗೆ ಮಿಸಲಾತಿ ನೀಡುರುವುದೇ ಕಾಂಗ್ರೆಸ್ ಸರಕಾರ, ಅದನ್ನು ಒಪ್ಪಿಕೊಳ್ಳಲು ಬಿಜೆಪಿಗರಿಗೆ ಮನಸ್ಸಿಲ್ಲ.
ಪ್ರತಿಭಟನೆಯಲ್ಲಿ ಬಿಜೆಪಿಯವರು ಅಶೋಕ್ ಕುಮಾರ್ ರೈ ಯವರ ಬಗ್ಗೆ ಮಾತನಾಡುತ್ತಾ ಅವರ ಅಪ್ಪನ ಜಾಗವನ್ನು ಕೊಡುವುದಾ ಎಂದು ವಿಕಾಸ್ ಎಂಬವರು ಕೇಳಿದ್ದಾರೆ. ಕೊಳಕು ಪದಗಳ ಬಳಕೆ ಬಿಜೆಪಿಯ ಚಾಳಿ. ಅಂತಹದೇ ಪದಗಳನ್ನು ಕಾಂಗ್ರೆಸ್ ಬಳಸಲು ಹೋಗುವುದಿಲ್ಲ ಕಾಂಗ್ರೆಸ್ ಪಕ್ಷ ಅವರಷ್ಟು ಕೀಳುಮಟ್ಟಕ್ಕೆ ಇಳಿಯುವುದಿಲ್ಲ ಎಂದರು.ಈಗಾಗಲೇ ಮುಂಬರುವ ವಿಧಾನ ಸಬಾ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಹಲವು ಆಕಾಂಕ್ಷೆಗಳಿದ್ದು ಆ ಪಟ್ಟಿಯಲ್ಲಿ ತಮ್ಮ ಹೆಸರೂ ಸೇರ್ಪಡೆ ಆಗಲಿ ಎಂಬ ಉದ್ದೇಶ ವಿಕಾಸ ಪುತ್ತೂರು ಅವರಿಗೆ ಇರಬಹುದು. ಸರಕಾರಿ ಭೂಮಿ ಯಾರಪ್ಪನ ಸೊತ್ತು ಅಲ್ಲ, ಅದು ಅರ್ಹ ಬಡವರಿಗೆ ಸಿಗಬೇಕು ಎಂಬ ಧೋರಣೆಯೊಂದಿಗೆ ಕೆಲಸ ಮಾಡುತ್ತಿರುವ ಅಶೋಕ್ ಕುಮಾರ್ ರೈ ಅವರ ವಿರುದ್ಧ ಹೊಲಸು ಮಾತಾಡಿರುವ ವಿಕಾಸ್ ನಂತವರಿಗೆ ಪುತ್ತೂರಿನ ಸಹೃದಯಿ ಮತದಾರರೇ ತಕ್ಕ ಉತ್ತರ ನೀಡುತ್ತಾರೆ.
ಶಾಸಕ ಅಶೋಕ್ ಕುಮಾರ್ ರೈ ಕೋಟಿ ಅನುದಾನ ತರುವುದು ಮಾತ್ರವಲ್ಲದೆ ಪುತ್ತೂರಿಗೆ ಮೆಡಿಕಲ್ ಕಾಲೇಜು ತಂದ ಬಗೀರತ. ಮುಂದಿನ ಚುನಾವಣೆಗೆ ಬಿಜೆಪಿ ಯಾರೇ ಅಭ್ಯರ್ಥಿ ಯಾದರೂ ಅಶೋಕ್ ಕುಮಾರ್ ರೈರವರನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಹಾಗೂ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.









