







ಪುತ್ತೂರು: ಮೂವರು ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ 94ಸಿ ಹಕ್ಕು ಪತ್ರವನ್ನು ಶಾಸಕರು ಕೊಡಲಿಲ್ಲ ಎಂದು ಬಿಜೆಪಿಯವರು ಡೊಂಬರಾಟ ಮಾಡಿದರು. 8 ವರ್ಷದಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಲಿಲ್ಲ ಎಂಬ ಆರೋಪ ಮಾಡಿದ್ದಾರೆ. ಆದರೆ 8 ವರ್ಷದಲ್ಲಿ 5 ವರ್ಷ ಬಿಜೆಪಿ ಸರಕಾರವೇ ಇದ್ದದ್ದು. ಆಗ ಅವರಿಗೆ ಕೊಡಲಾಗದನ್ನು ನಾವು ಕೊಡಲು ಪ್ರಯತ್ನ ಮಾಡಿದಾಗ ಬಿಜೆಪಿಯ ರಾಜಕೀಯ ಡೊಂಬರಾಟ ಸರಿಯಲ್ಲ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


5 ವರ್ಷದಲ್ಲಿ ಬಿಜೆಪಿಯವರಿಗೆ ಹಕ್ಕು ಪತ್ರ ಕೊಡಲಾಗದಾಗ ನಾವು ಫಲಾನುಭವಿಗಳ ಕಡತ ತಯಾರಿ ಮಾಡಿ ಅಧಿಕಾರಿಗಳಿಗ ಸೂಚನೆ ನೀಡಿ ಅದನ್ನು ಎಲ್ಲಾ ಹಂತದಲ್ಲಿ ವಿತರಣೆ ಮಾಡುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆಯೇ ವಿಟ್ಲ ಹೋಬಳಿಯಲ್ಲಿ ಸಿಟ್ಟಿಂಗ್ಗಾಗಿ ತಹಶೀಲ್ದಾರ್ಗೆ ದಿನಾಂಕ ನಿಗದಿ ಮಾಡಲು ತಿಳಿಸಿದ್ದೇವೆ. ಆದರೆ ತಹಶೀಲ್ದಾರ್ ಬೇರೆ ಬೇರೆ ಕಾರಣ ಕೊಟ್ಟು ದಿನ ಕೊಡದೆ ಬಾಕಿ ಆಗಿತ್ತು. ಮೂರು ತಿಂಗಳಲ್ಲಿ ಎಲ್ಲಿಯೂ ಸಿಟ್ಟಿಂಗ್ ಆಗುತ್ತಿದ್ದರೆ ಅಲ್ಲಿಯೇ ವಿತರಣೆ ಆಗುತ್ತಿತ್ತು. ಸರಕಾರದ ಯೋಜನೆಯಗಳ ಹಕ್ಕು ಪತ್ರ ವಿತರಣೆಯನ್ನು ಆಯಾ ಕ್ಷೇತ್ರದ ಶಾಸಕರು ವಿತರಣೆ ಮಾಡುವುದು. ಈ ವಿಚಾರ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೂ ಗೊತ್ತಿರಬೇಕು. ಬರೇ ರಾಜಕೀಯ ಇದ್ದರೆ ಆಗುವುದಿಲ್ಲ. ಮೊನ್ನೆ ಅಲ್ಲಿ ತಹಶೀಲ್ದಾರ್ ಹೇಳಿರುವಂತೆ ಪೆರ್ನೆಯಲ್ಲಿ ಸಿಟಿಂಗ್ ಮಾಡಿ ಅಲ್ಲಿ ಹಕ್ಕು ಪತ್ರ ಕೊಡಿಸುವುದಾಗಿ ಹೇಳಿದ್ದಾರೆ. ಆ ಹಕ್ಕು ಪತ್ರ ಕೊಡಿಸುವ ವಿವೇಚನೆ ಇರುವುದು ತಹಸೀಲ್ದಾರ್ ಅವರಿಗೆ ಅಲ್ಲ. ಅದು ಶಾಸಕರಿಗೆ ಇರುವುದು. ಅದನ್ನು ಇನ್ನು ನೋಡಬೇಕಾಗಿದೆ ಎಂದವರು ಹೇಳಿದರು. ಇಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಬೇಕಾಗಿರುವುದು ಮೂವರ ಹಕ್ಕು ಪತ್ರದ ವಿಚಾರಕ್ಕೆ ಅಲ್ಲ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಅವರೆಲ್ಲ ಎಷ್ಟು ಸಿಟ್ಟಿಂಗ್ ಮಾಡಿದ್ದಾರೆ. ಎಷ್ಟು ಮಂದಿಗೆ ಹಕ್ಕು ಪತ್ರ ನೀಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅತಿ ಹೆಚ್ಚು ಹಕ್ಕು ಪತ್ರ ಕೊಟ್ಟಿರುವುದು ಪುತ್ತೂರು ಕ್ಷೇತ್ರದಲ್ಲಿ ಮಾತ್ರ ಎಂದರು. ಅದೂ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿ ಹಿಂದಿನ ಶಾಸಕರ ಅವಧಿಯಲ್ಲಿ ಆದ ಬೈಠೆಕ್ನಲ್ಲಿ ಯಾವುದೇ ಹಕ್ಕು ಪತ್ರ ಕೊಡಲು ಆಗಿಲ್ಲ. ಆದರೆ ನಮ್ಮ ಶಾಸಕರು ಕೊಟ್ಟ ಅರ್ಜಿಗೆ ಸಂಬಂಧಿಸಿ ಶೇ.೨೫ರಷ್ಟು ಹಕ್ಕು ಪತ್ರ ವಿತರಿಸಿದ್ದಾರೆ ಎಂದರು.



ಪ್ರತಿಭಟನೆಯಲ್ಲಿ ಕೀಳು ಮಟ್ಟದ ಪದ ಸೌಜನ್ಯವಲ್ಲ:
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಾಮಾನ್ಯ. ನೂರಾರು ವಿಚಾರವಿದೆ. ಶಾಸಕರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡುವುದು ಸರಿಯಲ್ಲ. ಹಾಗೆ ಮಾತನಾಡುವುದಾದರೆ ಪೆಟ್ರೋಲ್, ಡಿಸೇಲ್, ಗ್ಯಾಸ್ಗೆ ದರ ಜಾಸ್ತಿ ಆಗಿದೆ. ನೀಟ್ನಲ್ಲಿ ವಿದ್ಯಾರ್ಥಿಗಳು ಬೀದಿಯಲ್ಲಿದ್ದಾರೆ. ಇದನ್ನು ಮಾಡಿದ್ದು ಯಾರು ಅವರಿಗೂ ಕೀಳು ಮಟ್ಟದ ಪದ ಬಳಕೆ ಮಾಡಬಹುದಲ್ಲ. ಇದನ್ನು ಪ್ರಶ್ನೆ ಮಾಡಬೇಕು. ಇವತ್ತು ಪುತ್ತೂರಿನಲ್ಲಿ ಬಿಜೆಪಿ ಶೂನ್ಯವಾಗಿದೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಸಹಿತ ಅಭಿವೃದ್ಧಿಯ ಮಹಾಪೂರ ಬಂದಿರುವುದು ಬಿಜೆಪಿಯ ಜುಜುಬಿ ಪ್ರತಿಭಟನೆಯಿಂದಲ್ಲ. ನಮ್ಮ ಶಾಸಕರ ಇಚ್ಛಾಶಕ್ತಿಯಿಂದ ಅಭಿವೃದ್ದಿಯಾಗಿದೆ. ಇನ್ನು ಎರಡು ವರ್ಷ ಬಿಜೆಪಿಯವರು ನೋಡಿ ಎಂದ ಮಹಮ್ಮದ್ ಬಡಗನ್ನೂರು ಬಿಜೆಪಿಯವರು ಪ್ರತಿಭಟನೆ ಮಾಡಬಾರದು ಎಂದು ಹೇಳುತ್ತಿಲ್ಲ. ಅವರ ಪಕ್ಷದವರಿಂದಲೇ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಆಗ ಬಿಜೆಪಿಯವರು ಎಷ್ಟು ಪ್ರತಿಭಟನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇವತ್ತು ಜನರು ನಿಟ್ಟಿಸಿರು ಬಿಟ್ಟಿದ್ದರೆ ಅದು ಕಾಂಗ್ರೆಸ್ ಸರಕಾದ ೫ ಗ್ಯಾರೆಂಟಿಗಳ ಮೂಲಕ ಎಂದರು.
ಬಿಜೆಪಿಯವರು ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಡಿ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಪುಣಚದಲ್ಲಿ ಅಕ್ರಮ ಸಕ್ರಮದ ೯೪ ಸಿ ಹಕ್ಕು ಪತ್ರ ಕೊಡಲಿಲ್ಲ ಎಂಬುದನ್ನು ಬಿಜೆಪಿಯವರು ಪ್ರತಿಭಟನೆ ಮಾಡಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಆಗಿದೆ. ಮೂವರು ಕಡು ಬಡವರ ದಾರಿ ತಪ್ಪಿಸುವ ಕೀಳು ಮಟ್ಟದ ರಾಜಕೀಯವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾಡಿದ್ದಾರೆ. ಇದರ ಜೊತೆಗೆ ಹರೀಶ್ ಬಿಜ್ರತೆ ಎಂಬವರು ಏಕವಚನದಲ್ಲಿ ನಮ್ಮ ಶಾಸಕರ ವಿರುದ್ದ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಬಡವರು ಸಮಸ್ಯೆ ಎದುರಿಸುತ್ತಿದ್ದರೆ ನೇರವಾಗಿ ನಮ್ಮ ಶಾಸಕರ ಕಚೇರಿ ಬನ್ನಿ. ಯಾವ ಕೆಲಸ ಬೇಕೋ ಅದನ್ನು ಮಾಡಿ ಕೊಡುತ್ತೇವೆ. ನಮ್ಮ ಶಾಸಕರು ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಇನ್ನಾದರೂ ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಬಿಡಿ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ವಕ್ತಾರರಾಗಿರುವ ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಭಟ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಎಸ್.ಟಿ. ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.










