







ಭಾರತೀಯ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶಿಷ್ಟ ಡಿಜಿಟಲ್ ವಿದ್ಯಮಾನವೊಂದು ಕಣ್ಣಮುಂದೆ ಜರುಗುತ್ತಿದೆ. ಅಧಿಕೃತ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಂತಹ ದೈತ್ಯ ಪಕ್ಷಗಳ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆಯನ್ನೇ ಹಿಂದಿಕ್ಕಿ, ಕೇವಲ 4-5 ದಿನಗಳಲ್ಲಿ 22ಮಿಲಿಯನ್ಗೂ ಅಧಿಕ
ಇನ್ಸ್ಟಾಗ್ರಾಮ್ ಫಾಲೋವರ್ಸ್ ಪಡೆದು ಅಬ್ಬರಿಸುತ್ತಿರುವುದು ಇದೇ ‘ಕಾಕ್ರೋಚ್ ಜನತಾ ಪಾರ್ಟಿ’. ಇದು ಕೇವಲ ಒಂದು ಮೀಮ್ ಅಥವಾ ಜೋಕ್ ಆಗಿ ಆರಂಭವಾಗಿ, ಇಂದು ದೇಶದ ಕೋಟ್ಯಾಂತರ ಯುವಕರ ಧ್ವನಿಯಾಗಿ ಮಾರ್ಪಟ್ಟಿದೆ.






ಹುಟ್ಟಿಗೆ ಕಾರಣ – ಈ ಅಭೂತಪೂರ್ವ ಆಂದೋಲನ ಮೇ.15, 2026 ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ಒಂದು ಘಟನೆಯಿಂದ ಹುಟ್ಟಿಕೊಂಡಿತು. ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಉದ್ಯೋಗವಿಲ್ಲದ ಕೆಲವು ಯುವಕರು ಆಕ್ಟಿವಿಸ್ಟ್ಗಳು ಹಾಗೂ ಮೀಡಿಯಾದವರಂತೆ ನಟಿಸುತ್ತಾ ಎಲ್ಲರ ಮೇಲೂ ದಾಳಿ ಮಾಡುತ್ತಿದ್ದಾರೆ, ಅವರು “ಜಿರಳೆಗಳು ಮತ್ತು ಸಮಾಜದ ಪರಾವಲಂಬಿಗಳಿದ್ದಂತೆ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದರು. (ನಂತರ ಅವರು ತಾವು ನಕಲಿ ಪದವಿ ಪಡೆದವರ ಬಗ್ಗೆ ಮಾತನಾಡಿದ್ದಾಗಿ ಸ್ಪಷ್ಟನೆ ನೀಡಿದ್ದರು).
ಆದರೆ, ಈ ‘ಜಿರಳೆ’ ಎಂಬ ಪದ ದೇಶದ ನಿರುದ್ಯೋಗಿ ಯುವ ಸಮೂಹಕ್ಕೆ ಭಾರಿ ಆಕ್ರೋಶ ತರಿಸಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ರಾಜಕೀಯ ಸಂವಹನ ತಜ್ಞ ಹಾಗೂ ಬೋಸ್ಟನ್ ಯೂನಿವರ್ಸಿಟಿಯ ವಿದ್ಯಾರ್ಥಿ ಅಭಿಜೀತ್ ದಿಪ್ಕೆ, ಮೇ.16ರಂದು ತಮಾಷೆಯಾಗಿ ಇಂಟರ್ನೆಟ್ನಲ್ಲಿ “ನಾವೆಲ್ಲಾ ಜಿರಳೆಗಳು ಒಟ್ಟಾಗೋಣ” ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಘೋಷಿಸಿ, ವೆಬ್ಸೈಟ್ ಲಾಂಚ್ ಮಾಡಿದ್ದರು. ತಮ್ಮ ಬಯೋದಲ್ಲಿ ಈ ಪಾರ್ಟಿಯು ತನ್ನನ್ನು “ಯುವಕರಿಂದ, ಯುವಕರಿಗಾಗಿ ಇರುವ ಯುವಕರ ರಾಜಕೀಯ ರಂಗ – ಸೆಕ್ಯುಲರ್, ಸೋಷಿಯಲಿಸ್ಟ್, ಡೆಮಾಕ್ರಟಿಕ್ ಮತ್ತು ಲೇಜಿ (ಸೋಮಾರಿ)” ಎಂದು ಕರೆದುಕೊಂಡಿತ್ತು. ಇವರು ಎತ್ತಿಕೊಂಡ ಪ್ರಮುಖ ವಿಷಯಗಳೆಂದರೆ ನಿರುದ್ಯೋಗದ ಜ್ವಲಂತ ಸಮಸ್ಯೆ. ಭಾರತದಲ್ಲಿ ಪದವೀಧರರ ನಿರುದ್ಯೋಗ ದರ ಶೇ.29 ದಾಟಿದ್ದು, ಯುವಕರ ಹತಾಶೆಯನ್ನು ಇವರು ಹಾಸ್ಯದ ಮೂಲಕ ಸರ್ಕಾರದ ಮುಂದೆ ಇಡುತ್ತಿದ್ದಾರೆ. ಭ್ರಷ್ಟಾಚಾರ, ಪೇಪರ್ ಲೀಕ್ ಹಗರಣಗಳು ಮತ್ತು ತೆರಿಗೆ ಹಣ ಎಲ್ಲೋಯ್ತು ಎಂದು ಮಾರ್ಮಿಕ ವಿಡಿಯೋಗಳ ಮೂಲಕ ಕೇಳುತ್ತಿದ್ದಾರೆ.
ಈ ಪಾರ್ಟಿ ಸೇರಲು “chronically online” (ದಿನಕ್ಕೆ 11 ಗಂಟೆ ಆನ್ಲೈನ್ ಇರಬೇಕು) ಮತ್ತು “ಲೌಡ್ ಆಗಿ ಪ್ರಶ್ನಿಸುವ” ಸಾಮರ್ಥ್ಯ ಇರಬೇಕು ಎಂಬ ಸ್ಯಾಟೈರ್ ನಿಯಮಗಳನ್ನು ಇಟ್ಟಿದ್ದಾರೆ. ಜೊತೆಗೆ ಇವರ ಪಾರ್ಟಿ RTI ಅಡಿಯಲ್ಲಿ ಬರಲಿದೆ ಮತ್ತು ಯಾವುದೇ ಗುಪ್ತ ನಿಧಿ ಹೊಂದುವುದಿಲ್ಲ ಎಂದು ಘೋಷಿಸಿದ್ದಾರೆ.
ಜನಾಕರ್ಷಣೆ ಮತ್ತು ರಾಜಕೀಯ ನೆಲೆ- ಕೇವಲ 48 ಗಂಟೆಗಳಲ್ಲಿ 3 ಮಿಲಿಯನ್ ದಾಟಿದ್ದ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ, ಇಂದು 22ಮಿಲಿಯನ್ ಗಡಿಯನ್ನು ದಾಟಿ ದೇಶದ ಅತಿ ವೇಗವಾಗಿ ಬೆಳೆದ ಇಂಟರ್ನೆಟ್ ವಿದ್ಯಮಾನವಾಗಿದೆ. ಅಖಿಲೇಶ್ ಯಾದವ್, ಮಹುವಾ ಮೋಯಿತ್ರಾ, ಮನೀಶ್ ಸಿಸೋಡಿಯಾ ಅವರಂತಹ ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರು ಕೂಡ ಈ ಆಂದೋಲನವನ್ನು ಬೆಂಬಲಿಸಿ ಪೋಸ್ಟ್ ಹಾಕುತ್ತಿದ್ದಾರೆ. ಅಖಿಲೇಶ್ ಯಾದವ್ ಅವರಂತೂ “BJP ವರ್ಸಸ್ CJP” ಎಂದು ಬರೆದುಕೊಂಡಿದ್ದಾರೆ. ಯುವಕರು ಜಿರಳೆಗಳ ಕಾಸ್ಟ್ಯೂಮ್ ಧರಿಸಿ ರಸ್ತೆಗಳ ಕ್ಲೀನ್-ಅಪ್ ಡ್ರೈವ್ ಮಾಡುವ ಮೂಲಕ ಆನ್ಲೈನ್ ಆಂದೋಲನವನ್ನು ಆಫ್ಲೈನ್ಗೂ ತಂದಿದ್ದಾರೆ. ಸದ್ಯಕ್ಕೆ ಇದೊಂದು ಕೇವಲ ‘ರಾಜಕೀಯ ವಿಡಂಬನೆ’ ಆಂದೋಲನವಾಗಿದ್ದರೂ, ಇದರ ವ್ಯಾಪ್ತಿ ನೋಡಿ ರಾಜಕೀಯ ಪಂಡಿತರೇ ಬೆಚ್ಚಿಬಿದ್ದಿದ್ದಾರೆ. ಲೇಟೆಸ್ಟ್ ರಿಪೋರ್ಟ್ಗಳ ಪ್ರಕಾರ, ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಈ ಕಾಕ್ರೋಚ್ ಜನತಾ ಪಾರ್ಟಿಯ ಬೆಂಬಲಿಗರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಚಿಸುತ್ತಿದ್ದಾರೆ.
ಇದು ಕೇವಲ ಆನ್ಲೈನ್ ಕಾಮಿಡಿಯಾಗಿ ಉಳಿಯದೆ, ಮುಂಬರುವ ದಿನಗಳಲ್ಲಿ ಯುವ ಮತದಾರರನ್ನು ಒಗ್ಗೂಡಿಸುವ ಮತ್ತು ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸುವ ಹೊಸ ಮಾದರಿಯ “ಯೂತ್ ಪ್ರೆಶರ್ ಗ್ರೂಪ್” ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳೂ ದಟ್ಟವಾಗಿವೆ. ಜಿರೆಳೆಗಳನ್ನು ಎಷ್ಟು ತುಳಿದರೂ ಅವು ಸಾಯದೆ ಹೇಗೆ ಬದುಕಿ ಉಳಿಯುತ್ತವೆಯೋ, ಹಾಗೆಯೇ ಇಂದಿನ ಯುವ ಪೀಳಿಗೆಯೂ ವ್ಯವಸ್ಥೆಯ ನಿರ್ಲಕ್ಷ್ಯದ ನಡುವೆಯೂ ತನ್ನ ಅಸ್ತಿತ್ವಕ್ಕಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಡಿಜಿಟಲ್ ಆಯುಧ ಹಿಡಿದು ಹೋರಾಡುತ್ತಿರುವುದಂತೂ ಸತ್ಯ.
ಈ ನಡುವೆ ಸಾಮಾಜಿಕ ಮಾದ್ಯಮಗಳಲ್ಲಿ ಸಂಚಲನ ಸೃಷ್ಟಿಸಿರುವ CJP ಪೇಜ್ ಅಡ್ಮಿನ್ ಅಭಿಜಿತ್ ದೀಪ್ಕೆ, ಸದ್ಯ ನಮಗೆ ಎಲ್ಲಾ ಡಿಜಿಟಲ್ ವೇದಿಕೆಗಳಲ್ಲಿ ಪ್ರವೇಶ ನಿರ್ಬಂದಿಸಲಾಗಿದೆ, ಹೀಗಾಗಿ ಇನ್ನು ಮುಂದೆ ಪ್ರಕಟವಾಗುವ ಯಾವುದೇ ಪೋಸ್ಟು ಕಾಕ್ರೋಚ್ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೇಡಿ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ, ಇನ್ಸ್ಟಾ ಗ್ರಾಂ ಪೇಜ್ ಹ್ಯಾಕ್ ಆಗಿದೆ, ನನ್ನ ವೈಯಕ್ತಿಕ ಇನ್ಸ್ಟಾಗ್ರಾಂ ಪೇಜ್ ಕೂಡ ಹ್ಯಾಕ್ ಆಗಿದೆ, ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ, ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಶಿಕ್ಷಣ ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕಿತ್ತು.ನವಭಾರತದ ಹೊಣೆಗಾರಿಕೆ ಬಗ್ಗೆ ಆಗ್ರಹಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮತ್ತೊಂದು ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.









