







ಪುತ್ತೂರು: ಒಕ್ಕಲಿಗೆ ಯಾನೆ ವಕ್ಕಲಿಗ ಸಮುದಾಯ ಸೇವಾ ಸಂಘದ 14ನೇ ವಾರ್ಷಿಕೋತ್ಸವವು ಮೇ.24ರಂದು ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಂಗಳೂರು ಮಾತನಾಡಿ, ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳಲ್ಲಿ ನಮ್ಮ ಸಮುದಾಯವರಿದ್ದರೂ ಎಲ್ಲಿಯೂ ನಮ್ಮ ಸಮುದಾಯಕ್ಕೆ ಅಸ್ಥಿತ್ವವಿಲ್ಲ. ನಮ್ಮ ಅಸ್ಥಿತ್ವಕ್ಕಾಗಿ ಸಮುದಾಯ ಭವನದ ಅವಸ್ಯಕತೆಯಿದೆ. ನಿವೇಶನವಿದ್ದರೆ ಸಮುದಾಯ ಭವನಕ್ಕೆ ಅನುದಾನ ನೀಡುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದು ನಿವೇಶನಕ್ಕಾಗಿ ಸಮಾಜ ಬಾಂಧವರು ಸಹಕರಿಸಿಬೇಕು. ಇದಕ್ಕಾಗಿ ಮೂರು ಜಿಲ್ಲೆಗಳ ಸಮಾಜ ಬಾಂಧವನ್ನು ಒಳಗೊಂಡ ವೇದಿಕೆ ರಚಿಸಲಾಗುವುದು. ಒಗ್ಗಟ್ಟಿನಲ್ಲಿ ಸಮಾಜವನ್ನು ಬೆಳೆಸಲು ಸಂಘಟನೆಗೆ ಸಮಾಜ ಬಾಂಧವರು ಕೈ ಜೋಡಿಸಬೇಕು. ನಮ್ಮದೇ ಆದ ಸಂಸ್ಕೃತಿ ಬೆಳೆಸಿ ಕಾರ್ಯರೂಪಕ್ಕೆ ತರುವಲ್ಲಿ ಸಮಾಜ ಬಾಂಧವರು ಸಹಕರಿಸುವಂತೆ ವಿನಂತಿಸಿದರು.



ಮುಖ್ಯ ಅತಿಥಿ ಸಂಜೀವ ಒಕ್ಕಲಿಗ ಮಾತನಾಡಿ, ಇಂದಿನ ಡಿಜಿಟಲ್ಯುಗದಲ್ಲಿ ಯುವ ಜನತೆಗೆ ಸಾಕಷ್ಟು ಅಯ್ಕೆಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಹಾಗೂ ಉತ್ತಮ ಉದ್ಯೋಗ ಪಡೆದು ಸಂಘದ ಅಭಿವೃದ್ಧಿ ಕೊಡುಗೆ ನೀಡಬೇಕು ಎಂದರು. ಸಮಾಜ ಬಾಂಧವರ ಏಳಿಗೆಗಾಗಿ ಸಂಘವನ್ನು ಸ್ಥಾಪನೆ ಮಾಡಿ ಸಂಘದ ಬೆಳವಣಿಗೆಯಲ್ಲಿ ಅಧ್ಯಕ್ಷ ರಾಧಾಕೃಷ್ಣ ಅವರು ಭಗೀರಥ ಪ್ರಯತ್ನ ದಲ್ಲಿ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ವಿಶಾಲಾಕ್ಷಿ ಎಡಪದವು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಜ್ಞಾನ, ಕೌಶಲ್ಯ, ವ್ಯಕ್ತಿತ್ವ ವಿಕಸನ ಯುವ ಪೀಳಿಗೆಗೆ ಅವಶ್ಯಕ. ಉನ್ನತ ಶಿಕ್ಷಣ ಪಡೆದು ಸಮಾಜದ ಮುಂಚೂಣಿಗೆ ಬರಬೇಕು. ನಮ್ಮ ಸಮಾಜದ ಗೌರವ, ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ವಾರ್ಷಿಕ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ಕೇಶವ ಎಂ. ಮಾತನಾಡಿ, ಸಂಘದ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಸಹಕಾರ ಅಗತ್ಯ. ಯುವ ಜನತೆ ಧನಾತ್ಮಕ ಚಿಂತನೆಗಳೊಂದಿಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಇತರ ಎಲ್ಲಾ ಸಮುದಾಯವಳಲ್ಲಿರುವಂತೆ ನಮ್ಮ ಸಮಾಜಕ್ಕೆ ಸಮುದಾಯ ಭವನದ ಆವಶ್ಯಕತೆಯಿದೆ. ಸಮಾಜ ಬಾಂಧವರು ಇದರ ಬಗ್ಗೆ ಚಿಂತನೆ ಮಾಡಬೇಕು. ಸಂಸ್ಕಾರ, ಸಂಪ್ರದಾಯಗಳು ಸಮುದಾಯದ ಒಂದು ಭಾಗವಾಗಿದ್ದು ಸಮುದಾಯ ಬಾಂಧವರೆಲ್ಲರೂ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅದರ ಮಹತ್ವ ತಿಳಿಯಲು ಸಹಕಾರಿ ಎಂದು ತಿಳಿಸಿದರು.
ಯುವ ವೇದಿಕೆ ಅಧ್ಯಕ್ಷ ಹರ್ಷಿತ್ ಬಿ.ಆರ್ ಮಾತನಾಡಿ, ಸಮಾಜ ಬಾಂಧವರು ಮನಃಪೂರ್ವಕವಾಗಿ ಸಂಘದ ಕಾರ್ಯಗಳಲ್ಲು ಭಾಗಿಗಳಾಗಬೇಕು. ಜೊತೆಗೆ ಇನ್ನಷ್ಟು ಜನರನ್ನು ಪ್ರೋತ್ಸಾಹಿಸಿ, ಸಂಘಕ್ಕೆ ಸೇರ್ಪಡೆಗೊಳಿಸಿ ಸಂಘದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಘೋಷಣೆ:
ಸಂಘಕ್ಕೆ ನೂತನ ಕಾರ್ಯದರ್ಶಿಯಾಗಿ ಸಂಜೀವ ಒಕ್ಕಲಿಗೆ ಮಂಗಳೂರು ಹಾಗೂ ಉಪಾಧ್ಯಕ್ಷರಾಗಿ ಎಂ. ಗೋಪಾಲಕೃಷ್ಣ ಈಶ್ವರಮಂಗಲ ಆಯ್ಕೆ ಮಾಡಲಾಯಿತು. ಜನಾರ್ದನ ಉಡುಪಿ ಅವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಗೌರವಾಧ್ಯಕ್ಷ ಕೇಶವ ಎಂ. ಅವರು ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.
ಗೌರವಾರ್ಪಣೆ:
ಸಮಾರಂಭದ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಕಿ ವಿಶಾಲಾಕ್ಷಿ, ಸಂಜೀವ ಒಕ್ಕಲಿಗ ಅವರನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶ್ರದ್ದಾ ಎಸ್.ಆರ್ ನಗದು ಪುರಸ್ಕಾರ ಗೌರವಿಸಲಾಯಿತು. ಹಿರಿಯ ಸದಸ್ಯರಾದ ಸಾರಂಗಪಾಣಿ ಸುಳ್ಯ, ಇಂದಿರಾ ರಾಮಣ್ಣ ಮತ್ತು ಭಾಸ್ಕರ ಅಡ್ವಳ ಅವರನ್ನು ಗುರುತಿಸಲಾಯಿತು.
ಸೂರ್ಯನಾರಾಯಣ, ಉಮೇಶ್, ಭಾಸ್ಕರ ಅಡ್ವಳ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಶೋಭಾ ರಾಧಾಕೃಷ್ಣ ವರದಿ ವಾಚಿಸಿದರು. ಕೋಶಾಧಿಕಾರಿ ಭಾಸ್ಕರ ಕೆಮ್ಮಾಯಿ ಲೆಕ್ಕಪತ್ರ ಮಂಡಿಸಿದರು. ಸೂರ್ಯನಾರಾಯಣ ವಂದಿಸಿದರು. ಶಿಕ್ಷಕಿ ಪುನೀತಾ ಶಂಕರ್ ಹಾಗೂ ನಿಶಾ ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಲಕ್ಷ್ಮೀ, ಮೃಣಾಲಿ, ಶಂಕರ್ ವಿವಿಧ ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಂತರ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.










