ಮೇ 27ರಂದು ಕ್ರಾಂತಿವೀರ ಉಬಾರ್ ಮಂಜ ಬೈದ್ಯರ ಸಂಸ್ಮರಣೆ : ಉಪ್ಪಿನಂಗಡಿಯಲ್ಲಿ ಪೂರ್ವಭಾವಿ ಸಭೆ

0

ಉಪ್ಪಿನಂಗಡಿ: ಇತಿಹಾಸದ ಪುಟಗಳಲ್ಲಿ ಲೀನವಾಗಿ, ಕಾಲ ಗರ್ಭದಲ್ಲಿ ಮರೆಯಾಗಿ ಹೋಗಿದ್ದ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಬಾರ್ ಮಂಜ ಬೈದ್ಯರ ವೀರ ಚರಿತ್ರೆಯನ್ನು ಮತ್ತೆ ಸಮಾಜಕ್ಕೆ ನೆನಪಾಗಿ ಉಳಿಸುವ ಕಾರ್ಯಕ್ಕೆ ದ.ಕ. ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಹಾಗೂ ಬೆಳ್ತಂಗಡಿಯ ಸುವರ್ಣ ಪ್ರತಿಷ್ಠಾನವು ಮುಂದಾಗಿದ್ದು, ಮಂಜ ಬೈದ್ಯರು ಹುತಾತ್ಮರಾಗಿ 190 ನೇ ವರ್ಷದ ದಿನವಾದ ಮೇ 27ರಂದು ಉಪ್ಪಿನಂಗಡಿಯಲ್ಲಿ ಕ್ರಾಂತಿವೀರ ಮಂಜ ಬೈದ್ಯರ ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.


ಈ ಬಗ್ಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಸಂಪತ್ ಸುವರ್ಣ, ಸ್ವಾತಂತ್ರ್ಯ ಹೋರಾಟಗಾರ ಮಂಜು ಬೈದ್ಯರು ಉಪ್ಪಿನಂಗಡಿಯವರಾಗಿದ್ದು, ಬ್ರಿಟಿಷರ ಆಡಳಿತದ ವಿರುದ್ಧ ಸಡ್ಡು ಹೊಡೆದು ಅವರ ದಾಸ್ಯದಿಂದ ನಮ್ಮ ಜನರನ್ನು ಮುಕ್ತಗೊಳಿಸಲು ಹೋರಾಟ ಮಾಡಿದವರು. 1837ನೇ ಮೇ 27ರಂದು ಅವರನ್ನು ಬ್ರಿಟಿಷರು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಅವರು ಹುತಾತ್ಮರಾಗಿ 195 ವರ್ಷಗಳಾಗುತ್ತಿವೆ. ಅವರ ದೇಶಪ್ರೇಮ, ಹೋರಾಟದ ಕಿಚ್ಚು, ಸಂಘಟನಾ ಚಾತುರ್ಯ, ನಾಯಕತ್ವದ ಮಾದರಿ ನಮಗೆಲ್ಲಾ ಆದರ್ಶವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವುದು, ಅವರ ನೆನಪನ್ನು ಸದಾ ಕಾಲ ಅಮರವಾಗಿರುವಂತೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಭಾರತೀಯರಾದ ನಾವೆಲ್ಲಾ ಜಾತಿ, ಧರ್ಮ, ರಾಜಕೀಯ ಬೇಧ ಬಿಟ್ಟು ಒಂದಾಗಿ ಉಬಾರ್ ಮಂಜು ಬೈದ್ಯರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.


ಮೇ 27ರಂದು ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಭಾಂಗಣದಲ್ಲಿ ಉಬಾರ್ ಮಂಜು ಬೈದ್ಯರ ಸಂಸ್ಮರಣಾ ಕಾರ್ಯಕ್ರಮ ನಡೆಸಲು ಈ ಸಂದರ್ಭ ತೀರ್ಮಾನಿಸಲಾಯಿತು.


ಸಭೆಯಲ್ಲಿ ಪ್ರಮುಖರಾದ ಡಾ. ನಿರಂಜನ ರೈ, ಡಾ. ರಾಜಾರಾಮ್ ಕೆ.ಬಿ., ಸುನೀಲ್ ಕುಮಾರ್ ದಡ್ಡು, ಉಮಾನಾಥ ಶೆಟ್ಟಿ ಪೆರ್ನೆ, ಜಯವಿಕ್ರಮ್ ಕಲ್ಲಾಪು, ಕೃಷ್ಣರಾವ್ ಆರ್ತಿಲ, ಆರ್.ಸಿ. ನಾರಾಯಣ, ಕರುಣಾಕರ ಸುವರ್ಣ, ಯು. ರಾಮ, ಶೇಖರ ಗೌಂಡತ್ತಿಗೆ, ರಾಮಚಂದ್ರ ಪೂಜಾರಿ, ವೆಂಕಪ್ಪ ಪೂಜಾರಿ ಮರುವೇಲು, ಅಜಿತ್ ಕುಮಾರ್ ಪಾಲೇರಿ, ತಿಮ್ಮಪ್ಪ ಪೂಜಾರಿ ಬನ್ನೂರು, ಅಝೀಝ್ ಬಸ್ತಿಕ್ಕಾರ್, ಮಹಾಲಿಂಗ ಕೆಜೆಕ್ಕಾರು, ಸದಾನಂದ ನೆಕ್ಕಿಲಾಡಿ, ತನಿಯಪ್ಪ ಪೆರ್ನೆ, ಹರೀಶ್ ನಿರಾಲ, ಮನೋಹರ ಅಠಾಳ, ಅಶೋಕ್ ಪಡ್ಪು ಮತ್ತಿತರರು ಉಪಸ್ಥಿತರಿದ್ದರು.

ಕ್ರಾಂತಿವೀರ ಮಂಜ ಬೈದ್ಯ ಉಪ್ಪಿನಂಗಡಿಯವರಾಗಿದ್ದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲ್ಪಡುವ 1857ರ ಹೋರಾಟಕ್ಕಿಂತ 20 ವರ್ಷ ಮೊದಲೇ ಮಂಜ ಬೈದ್ಯರು ಕಲ್ಯಾಣಪ್ಪನ ಕಾಟುಕಾಯಿ ಹೋರಾಟ ಅಥವಾ ಅಮರ ಸುಳ್ಯದ ಸ್ವಾತಂತ್ರ್ಯ ದಂಗೆಯಲ್ಲಿ ಸಕ್ರೀಯರಾಗಿದ್ದವರು. ತನ್ನಂಥ ಕ್ರಾಂತಿಕಾರಿಗಳೊಂದಿಗೆ ಸೇರಿ ತಮ್ಮದೇ ಪಡೆ ಕಟ್ಟಿ 1837ರ ಎಪ್ರಿಲ್ 5ರಂದು ಮಂಗಳೂರಿನ ಬಾವುಟಗುಡ್ಡದಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಕನ್ನಡಿಗರಾದ ಹಾಲೇರಿ ರಾಜವಂಶದ ಧ್ವಜವನ್ನು ಹಾರಿಸಿದ್ದರು. ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯ ಕೊಪ್ಪಳದ ಕುಕ್ಕುಜೆ ಪರಿಸರದವರಾದ ಇವರು ಪದಾಳದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬಳಿಯಿದ್ದ ಮನೆಯಲ್ಲಿ ವಾಸವಿದ್ದರೆಂದು ಹೇಳಲಾಗುತ್ತಿದೆ. ಬಳಿಕ ಅವರು ಅಲ್ಲೇ ಸಮೀಪದ ಕುಕ್ಕುಜೆಗೆ ಸ್ಥಳಾಂತರಗೊಂಡರು ಎನ್ನಲಾಗುತ್ತಿದೆ. ಈ ಮನೆಯಲ್ಲಿ ಇವರ ಬಳಿಕ ಹಲವು ಪ್ರತಿಷ್ಠಿತ ಕುಟುಂಬಗಳು ನೆಲೆಸಿದ್ದವು. ಇದರಲ್ಲಿ ಶಾಲೆ ಕೂಡಾ ನಡೆಯುತ್ತಿತ್ತು ಎಂದು ಹಿರಿಯರು ನೆನಪಿಸುತ್ತಾರೆ. ಈ ಮನೆಯೀಗ ನಿರ್ನಾಮಗೊಂಡಿದೆ. ಮಂಜ ಬೈದ್ಯರವರ ವಂಶಸ್ಥರು ಈಗಲೂ ಕುಕ್ಕುಜೆಯಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here